ಬೆಂಗಳೂರು: ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಮಂಗಳವಾರ (ಜ. 6) ಸರಿಗಟ್ಟಲಿದ್ದಾರೆ. ಆ ಮೂಲಕ, ಅತಿ ಹೆಚ್ಚು ಅವಧಿ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಎಂಬ ಗರಿಮೆಗೆ ಅವರು ಪಾತ್ರರಾಗಲಿದ್ದಾರೆ.

ಈ ಹಿರಿಮೆಯ ಹೊರತಾಗಿ, ಅತಿ ಹೆಚ್ಚು 16 ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನೂ ಸಿದ್ದರಾಮಯ್ಯ ಹೊಂದಿದ್ದಾರೆ. ಅಲ್ಲದೆ, 2026-27ನೇ ಸಾಲಿನಲ್ಲಿ ತಮ್ಮ 17ನೇ ಬಜೆಟ್ ಮಂಡಿಸುವ ಉತ್ಸಾಹದಲ್ಲಿದ್ದಾರೆ.

ಈ ಸಂತಸವನ್ನು ಸಂಭ್ರಮಿಸಲು ರಾಜ್ಯದಾದ್ಯಂತ ಇರುವ ಸಿದ್ದರಾಮಯ್ಯ ಅವರ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಸಾಲು ಸಾಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ನೆಲಮಂಗಲದಲ್ಲಿ ಸುಮಾರು 10 ಸಾವಿರ ಜನರಿಗೆ ನಾಟಿಕೋಳಿಯ ಭೋಜನವನ್ನು ಅವರ ಅಭಿಮಾನಿಗಳು ಮಂಗಳವಾರ ಆಯೋಜಿಸಿದ್ದಾರೆ. ವಿಜಯಪುರ, ಕಲಬುರಗಿ, ಹಾಸನ, ಮೈಸೂರು ಸೇರಿದಂತೆ ಹಲವೆಡೆ ರಕ್ತದಾನ ಶಿಬಿರ, ಸಮಾವೇಶಗಳು ನಡೆಯಲಿವೆ.

‘ಸಾಮಾಜಿಕ ನ್ಯಾಯ’ದ ನಾಯಕರಾಗಿ ಗುರುತಿಸಿಕೊಂಡಿದ್ದ ದೇವರಾಜ ಅರಸು 2,789 ದಿನಗಳು, ಅಂದರೆ 7 ವರ್ಷ 239 ದಿನ (ಎರಡು ಅವಧಿಗೆ) ಮುಖ್ಯಮಂತ್ರಿ ಆಗಿದ್ದರು. ಈ ದಾಖಲೆಯನ್ನು ಸಿದ್ದರಾಮಯ್ಯ ಮುರಿಯಲಿದ್ದಾರೆ.

ಅರಸು ಅವರು 1972ರ ಮಾರ್ಚ್ 20ರಿಂದ 1980 ಜನವರಿ 7ರವರೆಗೆ ಸತತ ಏಳೂವರೆ ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಸಿದ್ದರಾಮಯ್ಯ 2013ರಿಂದ 2018ರ ಅವಧಿಯಲ್ಲಿ ಮೊದಲ ಬಾರಿ 1,829 ದಿನ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು. 2023ರ ಮೇ 20ರಿಂದ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಮುಖ್ಯಮಂತ್ರಿಯ ಅಧಿಕಾರಾವಧಿ ಲೆಕ್ಕ ಮಾಡುವಾಗ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಪರಿಗಣಿಸಲಾಗುತ್ತದೆ ಎಂದು ವಿಧಾನಸಭೆ ಸಚಿವಾಲಯದ ಮೂಲಗಳು ತಿಳಿಸಿವೆ.

ಅರಸು ಮತ್ತು ಸಿದ್ದರಾಮಯ್ಯ ಇಬ್ಬರೂ ತಮ್ಮ ವರ್ಚಸ್ಸು, ಸಂಘಟನಾ ಚಾತುರ್ಯದಿಂದ ರಾಜ್ಯ ರಾಜಕೀಯದಲ್ಲಿ ಬೆಳೆದವರು. ಅಲ್ಪಸಂಖ್ಯಾತ, ಹಿಂದುಳಿದ, ದಲಿತ (ಅಹಿಂದ) ಸಂಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡವರು. ಒಕ್ಕಲಿಗರು ಮತ್ತು ಲಿಂಗಾಯತರ ಪ್ರಾಬಲ್ಯದ ನಡುವೆ, ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿ ಪಟ್ಟದಲ್ಲಿ ಉಳಿಯಲು ಕೂಡ ಈ ಸಂಯೋಜನೆ ಇಬ್ಬರಿಗೂ ಸಹಾಯ ಮಾಡಿದೆ. ಸಿದ್ದರಾಮಯ್ಯ ಅವರು ಅಹಿಂದ ನಾಯಕರೆಂದೇ ಹೆಸರು ಗಳಿಸಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳ ಬಲ ಕುಗ್ಗಿಸಲು ಅವರು ಈ ‘ಅಸ್ತ್ರ’ವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂಬ ವಿಶ್ಲೇಷಣೆಯೂ ರಾಜಕೀಯ ವಲಯದಲ್ಲಿದೆ.

ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ಕೋಮುವಾದಿ ವಿರೋಧಿ ನಿಲುವುಗಳನ್ನು ಬಲವಾಗಿ ಪ್ರತಿಪಾದಿಸುತ್ತಲೇ ಬಂದಿರುವ ಸಿದ್ದರಾಮಯ್ಯ, ಅಹಿಂದ ಗುಂಪುಗಳ ಕಡೆಗೆ ವಿಶೇಷ ಪ್ರೀತಿ ತೋರಿದರು. ತಮ್ಮ ಅಧಿಕಾರಾವಧಿಯಲ್ಲಿ ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವು ‘ಭಾಗ್ಯ’ಗಳ ಜೊತೆಗೆ, ಹಲವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಜಾರಿಗೆ ತಂದಿದ್ದಾರೆ. ಈ ಅವಧಿಯಲ್ಲಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಪಂಚ ಗ್ಯಾರಂಟಿ’ಗಳನ್ನು ಅನುಷ್ಠಾನ ಮಾಡಿದೆ.

ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಜನತಾಪಕ್ಷ, ಜನತಾದಳ ಮತ್ತು 2006ರಿಂದ ಕಾಂಗ್ರೆಸ್ನಲ್ಲಿ ಮುಂದುವರಿದಿದೆ. ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾದವರಲ್ಲಿ ದೇವರಾಜ ಅರಸು ಅವರ ನಂತರ ಎಸ್. ನಿಜಲಿಂಗಪ್ಪ(7 ವರ್ಷ 175 ದಿನ), ರಾಮಕೃಷ್ಣ ಹೆಗಡೆ (5 ವರ್ಷ 216 ದಿನ), ಬಿ.ಎಸ್. ಯಡಿಯೂರಪ್ಪ (5 ವರ್ಷ 82 ದಿನ) ಇದ್ದಾರೆ.

ಅರಸುಗೂ–ನನಗೂ ಹೋಲಿಕೆ ಇಲ್ಲ: ಸಿದ್ದರಾಮಯ್ಯ

ಮೈಸೂರು: ‘ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೂ ನನಗೂ ಹೋಲಿಕೆ ಇಲ್ಲ. ಆದರೆ, ಇಬ್ಬರೂ ಒಂದೇ ಜಿಲ್ಲೆಯಿಂದ ಬಂದವರು. ಅವರು ಮುಖ್ಯಮಂತ್ರಿ ಯಾಗಿ ಹೆಚ್ಚು ದಿನ ಆಡಳಿತ ನಡೆಸಿದ ದಾಖಲೆಯನ್ನು ನಾನು ಮುರಿಯುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸೋಮವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನನ್ನ ದಾಖಲೆಯನ್ನು ಮತ್ತೆ ಯಾರೂ ಮುರಿಯುವುದಿಲ್ಲ ಎನ್ನಲಾರೆ. ವಿರಾಟ್ ಕೊಹ್ಲಿ , ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲಿಲ್ಲವೇ? ಎಂದರು.

‘ಮುಂದೆ ಯಾರೋ ಬರಬಹುದು, ದಾಖಲೆ ಮುರಿಯಬಹುದು. ನನಗಿಂತ ಹೆಚ್ಚಿನ ಬಜೆಟ್ ಮಂಡಿಸಲೂಬಹುದು. ದಾಖಲೆಗಳು ಇರುವುದೇ ಸರಿಗಟ್ಟುವುದಕ್ಕೆ’ ಎಂದು ಅವರು ಹೇಳಿದರು.

‘ಅರಸು ಅವರು ಜನಪ್ರಿಯ ಮುಖ್ಯಮಂತ್ರಿ. ಅವರ ಕಾಲದ ರಾಜಕಾರಣವೇ ಬೇರೆ. ಈಗಿನದ್ದೇ ಬೇರೆ. ಅರಸು ಅವರ ಸಮುದಾಯ ಸಂಖ್ಯೆಯಲ್ಲಷ್ಟೇ ಸಣ್ಣದು. ಆದರೆ, ಸಾಮಾಜಿಕವಾಗಿ ಎತ್ತರದಲ್ಲಿದೆ. ನಾನು ಸಾಮಾಜಿಕವಾಗಿ ತಳ ಸಮುದಾಯ ದಿಂದ ಬಂದವನು’ ಎಂದರು.

ಸಿ.ಎಂ ಆಗುತ್ತೇನೆ ಎಂದುಕೊಂಡಿರಲಿಲ್ಲ: ‘ದಾಖಲೆ ಮಾಡುವುದು ಬಿಡಿ, ನಾನು ಮಂತ್ರಿ ಅಥವಾ ಮುಖ್ಯಮಂತ್ರಿ ಆಗುತ್ತೇನೆ ಅಂದುಕೊಂಡಿರಲಿಲ್ಲ. ಶಾಸಕ ಆಗಬೇಕೆಂದುಕೊಂಡಿದ್ದೆ.

ಆ ಕಾಲದಲ್ಲಿ ಜನರು ದುಡ್ಡು ಹಾಕಿ ಶಾಸಕನನ್ನಾಗಿಸಿದ್ದರು. ಅದೇ ಜನರ ಆಶೀರ್ವಾದದಿಂದ ಬೆಳೆದಿದ್ದೇನೆ’

ಇತಿಹಾಸದ ಪುಟಕ್ಕೆ ಮುಖ್ಯಮಂತ್ರಿ: ಡಿಕೆಶಿ

‘ಜೀವನದಲ್ಲಿ ಸಾಧನೆ ಮಾಡಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ನಮ್ಮ ಮುಖ್ಯಮಂತ್ರಿ ಇತಿಹಾಸದ ಪುಟಕ್ಕೆ ಹಿಂದೆಯೂ ಸೇರಿದ್ದಾರೆ ಮುಂದೆಯೂ ಸೇರುತ್ತಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಸಿದ್ದರಾಮಯ್ಯ ದಾಖಲೆ ಬರೆಯುತ್ತಿರುವ ಬಗ್ಗೆ ಸುದ್ದಿಗಾರರು ಗಮನಸೆಳೆದಾಗ ಪ್ರತಿಕ್ರಿಯಿಸಿದ ಅವರು ‘ಇದು ಎಲ್ಲರಿಗೂ ಸಂತಸದ ವಿಚಾರ’ ಎಂದರು.

‘ಇದರಿಂದ ನಿಮ್ಮ ಹಾದಿ ಸುಗಮ ಆಗುತ್ತದೆಯೇ’ ಎಂಬ ಪ್ರಶ್ನೆಗೆ ‘ಹಳ್ಳಿಯಿಂದ ಬಂದ ನಾನು ಇಲ್ಲಿಯವರೆಗೂ ತಲುಪಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ನನಗೆ. ಯಾವುದನ್ನೂ ಹುಡುಕಿಕೊಂಡು ಹೋಗುವ ಅಗತ್ಯ ಇಲ್ಲ’ ಎಂದರು.

‘ಶುಭ ದಿನಗಳು ಬರುತ್ತಿವೆ’ ಎಂಬ ಡಿ.ಕೆ. ಸುರೇಶ್ ಹೇಳಿಕೆ ಬಗ್ಗೆ ಕೇಳಿದಾಗ ‘ಎಲ್ಲಾ ದಿನಗಳು ನಮಗೆ ಒಳ್ಳೆಯ ದಿನಗಳೇ. ನಿನ್ನೆ ಭೂತಕಾಲ ನಾಳೆ ಭವಿಷ್ಯಕಾಲ ಇಂದು ವರ್ತಮಾನ. ನಿಮ್ಮ (ಮಾಧ್ಯಮ) ಜೊತೆ ಮಾತನಾಡುತ್ತಿರುವುದು ಒಳ್ಳೆಯ ದಿನ’ ಎಂದರು.

ಅರಸುಗೆ ಹೋಲಿಕೆಯೇ ಅಲ್ಲ: ಎಚ್ಡಿಕೆ

‘ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದ್ದ ಕರ್ನಾಟಕ ಇಂದು ಅದಕ್ಷ ಕೆಟ್ಟ ಆಡಳಿತಕ್ಕೆ ನಿದರ್ಶನವಾಗಿದೆ. ದೇವರಾಜ ಅರಸು ಎಲ್ಲಿ? ಇವರೆಲ್ಲಿ? ಅರಸು ಅವರ ದಾಖಲೆ ಮುರಿಯುವುದು ಇರಲಿ ರಾಜ್ಯದಲ್ಲಿ ಅವರೇ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಿದ್ದರಾಮಯ್ಯ ಅವರು ದೇವರಾಜ ಅರಸು ದಾಖಲೆ ಮುರಿಯುತ್ತಾರಂತೆ. ಯಾವ ಭಾಗ್ಯಕ್ಕೆ ಇವೆಲ್ಲಾ’ ಎಂದರು. ‘ಕರ್ನಾಟಕದಲ್ಲಿ ದೀರ್ಘ ಕಾಲ ಆಡಳಿತ ನಡೆಸಿದ್ದೇನೆ ಎಂಬುದಾಗಿ ಕೊಚ್ಚಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ದಾಖಲೆಗೆ ಮಣ್ಣು ಹೊಯ್ದುಕೊಳ್ಳಬೇಕು’ ಎಂದು ಕಿಡಿಕಾರಿದರು.

‘ಕಳೆದ ಎರಡೂವರೆ ವರ್ಷಗಳ ಆಡಳಿತವಂತೂ ಇತಿಹಾಸದಲ್ಲಿ ದಾಖಲಾಗುವ ಅತ್ಯಂತ ಕೆಟ್ಟ ಆಡಳಿತವಾಗಿದೆ. ಭ್ರಷ್ಟಾಚಾರ ಕೊಲೆ ಸುಲಿಗೆ ಡ್ರಗ್ಸ್ ಮಾಫಿಯಾ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ನಿರಂತರವಾಗಿವೆ. ಇದನ್ನು ಹತ್ತಿಕ್ಕಲು ಸಾಧ್ಯವಾಗದೆ ದಾಖಲೆಗೋಸ್ಕರ ಸಿದ್ದರಾಮಯ್ಯ ಆಡಳಿತ ನಡೆಸುತ್ತಿರುವಂತಿದೆ. ಅಧಿಕಾರಿಗಳು ಇವರ ಆಡಳಿತದಲ್ಲಿ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ ಸ್ವಾತಂತ್ರ್ಯ ಎಂಬುದೇ ಇಲ್ಲ ಬ್ಯಾಟರಿ ಹಾಕಿ ಹುಡುಕಿದರೂ ಒಬ್ಬ ಒಳ್ಳೆ ಅಧಿಕಾರಿ ಸಿಗುವುದಿಲ್ಲ’ ಎಂದು ಅವರು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.