ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಗಳು ವಾಪಸ್‌? ರೈತ ಮುಖಂಡರ ಜತೆ ಚರ್ಚೆಯಲ್ಲಿ ಸಿಎಂ ಸಿದ್ದರಾಮಯ್ಯ ಸುಳಿವು

ರೈತ ಮುಖಂಡರ ಜತೆ ಚರ್ಚೆಯಲ್ಲಿ ಮುಖ್ಯಮಂತ್ರಿ ಸುಳಿವು
Published 7 ಜೂನ್ 2023, 19:48 IST
Last Updated 7 ಜೂನ್ 2023, 19:48 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ರೂಪಿಸಿ ಬಳಿಕ ರದ್ದುಪಡಿಸಿದ್ದ ರೈತ ವಿರೋಧಿ ಕಾಯ್ದೆಗಳು ಎಂದು ಆರೋಪಿಸಲಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ವಾಪಸ್ ಪಡೆಯುವ ಸಾಧ್ಯತೆ ಇದೆ. ರೈತ ಸಂಘಟನೆಗಳು ನಡೆಸಿದ ಸುದೀರ್ಘ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರವು ಕಾಯ್ದೆಗಳನ್ನು ವಾಪಸ್‌ ಪಡೆದಿತ್ತು. ಆದರೆ, ರಾಜ್ಯದಲ್ಲಿ ಈ ಕಾಯ್ದೆಗಳು ಮುಂದುವರಿದಿವೆ. 

ತಮ್ಮನ್ನು ಬುಧವಾರ ಭೇಟಿ ಮಾಡಿದ ವಿವಿಧ ರೈತ ಸಂಘಟನೆಗಳ ಒಕ್ಕೂಟ ‘ಸಂಯುಕ್ತ ಹೋರಾಟ-ಕರ್ನಾಟಕ’ ಮುಖಂಡರ ಜತೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸುಳಿವು ನೀಡಿದ್ದಾರೆ.

ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಂದಿದ್ದ ತಿದ್ದುಪಡಿ ರೈತ ಸಂಕುಲಕ್ಕೆ ಹಾಗೂ ಕೃಷಿ ಬೆಳವಣಿಗೆಗೆ ಮಾರಕವಾಗಿವೆ ಎಂದು ರೈತ ಮುಖಂಡರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವರಿಕೆ ಮಾಡಿದರು. ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯಿಂದಾಗಿ (ಗೋಹತ್ಯೆ ನಿಷೇಧ) ಜಾನುವಾರು ಸಾಕುವವರಿಗೆ ಆಗಿರುವ ಸಮಸ್ಯೆಯನ್ನೂ ರೈತ ನಾಯಕರು ವಿವರಿಸಿದರು. 

ಕೇಂದ್ರ ಸರ್ಕಾರ ಕಾರ್ಪೊರೇಟ್‌ ಕೃಷಿಯನ್ನು ಪರಿಚಯಿಸಿದ್ದರಿಂದ ಶೇ 85ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತೊಂದರೆಯಾಗಿದೆ ಎಂದೂ ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು.

‌‘ನಮ್ಮ ಅಹವಾಲು ಆಲಿಸಿದ ಸಿದ್ದರಾಮಯ್ಯನವರು ‘ಮೂರು ಕಾಯ್ದೆಗಳನ್ನು ವಾಪಸ್‌ ಪಡೆಯುವ ಕುರಿತು ಪರಿಶೀಲನೆ ಮಾಡುತ್ತೇನೆ. ಕಾಯ್ದೆ ವಾಪಸ್‌ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ನೀತಿ, ನಿಯಮಾವಳಿ ಕುರಿತು ವಿವರವಾಗಿ ಚರ್ಚಿಸಲು ಶೀಘ್ರ ಪ್ರತ್ಯೇಕ ಸಭೆ ನಡೆಸುವುದಾಗಿ ಭರವಸೆ ನೀಡಿದರು’ ಎಂದು ರೈತ ನಾಯಕರು ತಿಳಿಸಿದರು.

ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ, ಜಿ.ಸಿ.ಬಯ್ಯಾರೆಡ್ಡಿ , ಎಚ್.ಆರ್.ಬಸವರಾಜಪ್ಪ ಸೇರಿದಂತೆ ಹಲವಾರು ಮುಖಂಡರು ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT