ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕ್ಷಾಮ | ಸಿದ್ದರಾಮಯ್ಯ ಕರ್ನಾಟಕದ 'ನೀರೋ': ಎಚ್‌.ಡಿ. ಕುಮಾರಸ್ವಾಮಿ

ವಿದ್ಯುತ್ ಕ್ಷಾಮದ ವಾಸ್ತವತೆಯ 'ಶ್ವೇತಪತ್ರ' ಹೊರಡಿಸಿ – ಆಗ್ರಹ
Published 22 ಅಕ್ಟೋಬರ್ 2023, 10:45 IST
Last Updated 22 ಅಕ್ಟೋಬರ್ 2023, 10:45 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದ ‘ನೀರೋ’ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕುಟುಕಿದ್ದಾರೆ.

‘ನಾವು ವೆಸ್ಟಂಡ್ ಹೋಟೆಲ್‌ನಲ್ಲಿ ಕುಳಿತು ಸರ್ಕಾರ ನಡೆಸುತ್ತಿಲ್ಲ, ಜನರ ನಡುವೆ ಇದ್ದು, ಅವರ ಕಷ್ಟಕ್ಕೆ ಹೆಗಲಾಗಿ ನಿಂತಿದ್ದೇವೆ’ ಎಂದು ತಮ್ಮ ವಿರುದ್ಧ ಟೀಕೆ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ‘ರೋಮ್ ನಗರ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ. ಜನ ಸಂಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್ ಪಂದ್ಯ ನೋಡುತ್ತಿದ್ದ’ ಎಂದಿದ್ದಾರೆ.

‘ಸತ್ಯ ಹೇಳಿದರೆ ನನ್ನ ಕಡೆಗೇ ಬೊಟ್ಟು ಮಾಡುತ್ತೀರಿ. ನಿಮ್ಮ ಸಚಿವರನ್ನು ನನ್ನ ಮೇಲೆ ಛೂ ಬಿಡುತ್ತೀರಿ. ಎಷ್ಟು ದಿನ ನೆಪಗಳ ನಾಜೂಕುತನ? ವಿದ್ಯುತ್ ಕೃತಕ ಅಭಾವ ಸೃಷ್ಟಿ ನಿಮ್ಮದೇ ಷಡ್ಯಂತ್ರ. ಅದು ಉಲ್ಬಣಿಸಿದಷ್ಟೂ ನಿಮಗೆ ಕಲೆಕ್ಷನ್ ಹೆಚ್ಚು. ಖಾಸಗಿ ಕಂಪನಿಗಳಿಂದ ಖರೀದಿಸಿ ಕೈ ತುಂಬಾ ಕಮಿಷನ್ ಎತ್ತಲು ಹೊರಟಿದ್ದೀರಿ. ಇಲ್ಲ ಎಂದಾದರೆ ವಿದ್ಯುತ್ ಕ್ಷಾಮದ ವಾಸ್ತವದ ಬಗ್ಗೆ ‘ಶ್ವೇತಪತ್ರ’ ಹೊರಡಿಸಿ’ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

‘ವೆಸ್ಟೆಂಡ್‌ನಲ್ಲಿ ಆಡಳಿತ ನಡೆಸಿಲ್ಲ ಎನ್ನುವ ಗಿಲೀಟು ಗಿರಾಕಿ. ಆವತ್ತು ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ? ಐದು ವರ್ಷ ಸರ್ಕಾರ ಕೊಟ್ಟ ಸಿದ್ದಪುರುಷ ಇನ್ನೊಬ್ಬರ ಹೆಸರಿನಲ್ಲಿ ಬಂಗಲೆ ಪಡೆದು ಸಾಸಿವೆ ಕಾಳಷ್ಟೂ ಸಂಕೋಚವಿಲ್ಲದೆ ಅದೇ ಜಾಗದಲ್ಲಿ ಹೆಗ್ಗಣವಾಗಿ ಮೈತ್ರಿ ಸರ್ಕಾರಕ್ಕೆ ಕನ್ನ ಕೊರೆದಿದ್ದನ್ನು ಕನ್ನಡಿಗರು ಮರೆತಿಲ್ಲ. ಹೇಳಿದ್ದೇ ಹೇಳುವ ಕಿಸುಬಾಯಿ ದಾಸನಿಗೆ ಗೊತ್ತಿರುವುದು ಎರಡೇ. ಒಂದು ವೆಸ್ಟೆಂಡ್‌, ಮತ್ತೊಂದು  ಬಿಜೆಪಿ ಬಿ ಟೀಂ’ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

‘ಡೋಂಗಿ ಸಮಾಜವಾದಿ, ಫುಲ್ ಟೈಂ ಮೀರ್‌ಸಾದಿಕ್‌ವಾದಿಗೆ ವೆಸ್ಟೆಂಡ್‌ ಸೋಂಕು ಮತ್ತೆ ತಗುಲಿದೆ. ‘ಇಂಡಿಯಾ’ ಕೂಟದ ಸಭೆಯನ್ನು ಇದೇ ವೆಸ್ಟೆಂಡ್‌ ಬದಲಿಗೆ, ತಮ್ಮ ಸುತ್ತ ಕೆನೆಪದರ, ಒಳಪದರ, ತೆಳುಪದರದಂತೆ ತಲೆ ಎತ್ತಿರುವ ‘ಪರ್ಸಂಟೇಜ್ ಪಟಾಲಂ’ನ ಏಳುಸುತ್ತಿನ ಕೋಟೆಯ ವಠಾರದಲ್ಲಿಯೇ ನಡೆಸಬೇಕಿತ್ತು. ಏಕೆ ನಡೆಸಲಿಲ್ಲ’ ಎಂದೂ ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.

‘ಆಧುನಿಕ ಭಾರತದ ಈಸ್ಟ್ ಇಂಡಿಯಾ ಕಂಪನಿ ಕಾಂಗ್ರೆಸ್‌ಗೆ ಕರ್ನಾಟಕ ಪೊಗದಸ್ತು ಹುಲ್ಲುಗಾವಲು. ಸಿದ್ಧಪುರುಷ ಅಲಿಯಾಸ್ ಶೋಕಿಪುರುಷನೇ ಈ ಹುಲ್ಲುಗಾವಲಿನ ಮೇಟಿ. ವಿದ್ಯುತ್ ಕ್ಷಾಮ ಮತ್ತು ಬರದಲ್ಲಿ ಜನರು ಬೇಯುತ್ತಿದ್ದರೆ ದಿನಪೂರ್ತಿ ಕುಳಿತು ಕ್ರಿಕೆಟ್ ನೋಡುವಷ್ಟು ಶೋಕಿದಾರ!’ ಎಂದು ವ್ಯಂಗ್ಯವಾಡಿದ್ದಾರೆ.

ಉತ್ಪಾದನೆ ಅಲಕ್ಷಿಸಿದ್ದೇಕೆ?

ಐದು ತಿಂಗಳಿಂದ ವಿದ್ಯುತ್ ಉತ್ಪಾದನೆ ಅಲಕ್ಷಿಸಿದ್ದೇಕೆ? ಹಾಹಾಕಾರ ಎದ್ದ ಮೇಲೆ ಅದು ಮಾಡಿದ್ದೇವೆ ಇದು ಮಾಡಿದ್ದೇವೆ ಎಂದರೆ ಲೋಡ್ ಶೆಡ್ಡಿಂಗ್ ಏಕೆ ಬಂತು? 2013-2018ರಲ್ಲಿ 12000 ಮೆಗಾ ವಾಟ್ ಉತ್ಪಾದಿಸಿದ್ದೇವೆ ಎಂದು ನೀವೇ ಹೇಳಿದ್ದೀರಿ. ಈಗ  ಮಳೆ ಕಡಿಮೆಯಾಗಿ ಜಲವಿದ್ಯುತ್ ಉತ್ಪಾದನೆ ಕುಸಿದಿದೆ ಎನ್ನುವುದು ನನಗೂ ಗೊತ್ತಿದೆ. ಅದರಲ್ಲಿ 3000 ಮೆಗಾ ವಾಟ್‌ ಇಲ್ಲ ಎಂದರೂ ಸಾರ್ವಜನಿಕ ಮತ್ತು ಖಾಸಗಿ ವಲಯ ಸೇರಿ ಒಟ್ಟು 29 ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಆಗಲೇಬೇಕಿತ್ತು. ಆಗಿಲ್ಲವೇಕೆ? ಏಕಾಏಕಿ ಉತ್ಪಾದನೆ ನಿಲ್ಲಿಸಿದ್ದೇಕೆ? ಜಲವಿದ್ಯುತ್ ಕೈಕೊಡುತ್ತದೆ ಎಂದು ಗೊತ್ತಿದ್ದರೂ ಕಲ್ಲಿದ್ದಲು ಸಂಗ್ರಹ ಇಟ್ಟುಕೊಳ್ಳಲಿಲ್ಲವಲ್ಲ ಏಕೆ’ ಎಂದೂ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT