ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಸಿದ್ದಾರ್ಥ: ಕೊಡುಗೈ ಕರ್ಣನ ಕಣ್ಮರೆಗೆ ಕಣ್ಣೀರು

ಕಾಫಿ ನಾಡಿನಲ್ಲಿ ಮನೆಮಗನ ಸ್ಥಾನ ಪಡೆದಿದ್ದ ಸಿದ್ಧಾರ್ಥ
Last Updated 30 ಜುಲೈ 2019, 18:50 IST
ಅಕ್ಷರ ಗಾತ್ರ

ಮೂಡಿಗೆರೆ: ಕಾಫಿ ಹಿರಿಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ವಿ.ಜಿ.ಸಿದ್ಧಾರ್ಥ ಅವರನ್ನು ತಾಲ್ಲೂಕಿನಲ್ಲಿ ಕಣ್ಣಾರೆ ಕಂಡವರು ವಿರಳವಾಗಿದ್ದರೂ, ಅವರ ಕೊಡುಗೈ ದಾನ ಗುಣ ಮಾತ್ರ ಪ್ರತಿ ಮನೆಮನೆಯಲ್ಲೂ ಜನಜನಿತವಾಗಿತ್ತು.

ತಾಲ್ಲೂಕಿನ ಯಾವುದೇ ಸಾರ್ವಜನಿಕ ಸಭೆ, ಸಮಾರಂಭವಾಗಿದ್ದರೂ ಮೊದಲ ದಾನಿಯಾಗಿ ನಿಲ್ಲುತ್ತಿದ್ದವರು ವಿ.ಜಿ. ಸಿದ್ಧಾರ್ಥ ಹೆಗಡೆ. ಸರಳ ಜೀವಿಯಾಗಿ ಕೊಡುಗೈ ದಾನಿಯಾಗಿದ್ದರೂ ಸಭೆ, ಸಮಾರಂಭಗಳಲ್ಲಿ ವೇದಿಕೆಯೇರುತ್ತಿರಲಿಲ್ಲ. ಆದ್ದರಿಂದಲೇ ತಾಲ್ಲೂಕಿನಲ್ಲಿ ಅವರ ಮುಖಚರ್ಹೆಗಿಂತಲೂ ಅವರ ದಾನಗುಣವೇ ಜನಪ್ರಿಯಗೊಂಡಿತ್ತು.

ಇಡೀ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ ಹೆಗಡೆ ಎಂದೇ ಪ್ರಸಿದ್ದರಾಗಿದ್ದರೂ, ತಾಲ್ಲೂಕಿನಲ್ಲಿ ಮಾತ್ರ ಎಬಿಸಿ ಸಿದ್ಧಾರ್ಥ ಎಂದೇ ಮನೆಮಾತಾಗಿದ್ದಾರೆ. ಮಲೆನಾಡಿನಲ್ಲಿ ಶಿಕ್ಷಣ ಪೂರೈಸಿದ ಸಾವಿರಾರು ಯುವಕರಿಗೆ ಅನ್ನದಾತರಾಗಿರುವ ಅವರು, ಕೇವಲ ಕಾಫಿ ಉದ್ಯಮವನ್ನು ಬೆಳೆಸಿದ ಪ್ರಸಿದ್ಧ ಉದ್ಯಮಿ ಮಾತ್ರವಾಗಿರದೇ, ಕೂಲಿಕಾರ್ಮಿಕರ ಮಕ್ಕಳು, ಬೆಳೆಗಾರರ ಮಕ್ಕಳಿಗೆ ತಮ್ಮ ಕಾಫಿ ಡೇ ಮೂಲಕ ಬದುಕು ಕಟ್ಟಿಕೊಟ್ಟು ನೂರಾರು ಮನೆಯ ಬೆಳಕಾಗಿದ್ದರು. ಅಷ್ಟೇ ಅಲ್ಲದೇ ಹಿರಿಯರು, ಕಿರಿಯರೆನ್ನದೇ ಎಲ್ಲರನ್ನೂ ಬಹುವಚನದ ಮೂಲಕ ಸಂಬೋಧಿಸುತ್ತಿದ್ದುದು ಅವರ ಸಾಂಸ್ಕೃತಿಕ ಹಿರಿತನಕ್ಕೆ ಕೈಗನ್ನಡಿಯಾಗಿತ್ತು.

ತಾಲ್ಲೂಕಿನ ಜನತೆಗೆ ಮಂಗಳವಾರ ಮುಂಜಾನೆ ಅಕ್ಷರಶಃ ದುರ್ದಿನವಾಗಿ ಕಾಡಿತ್ತು. ನೂರಾರು ಮನೆಯ ದೀಪವಾಗಿ ಬೆಳಗುತ್ತಿದ್ದ ವಿ.ಜಿ.ಸಿದ್ಧಾರ್ಥ ಅವರು ನಾಪತ್ತೆಯಾಗಿದ್ದಾರೆ ಎಂದು ಬಿತ್ತರವಾಗುತ್ತಿದ್ದ ದೃಶ್ಯಮಾಧ್ಯಮದ ಸುದ್ದಿ ಸುಳ್ಳಾಗಲಿ ಎಂದು ಪ್ರಾರ್ಥಿಸದ ಜನರಿಲ್ಲ. ಸಾಮಾಜಿಕ ಜಾಲತಾಣಗಳ ಗೋಡೆಗಳಲ್ಲಂತೂ ಬಹುತೇಕ ಮಂದಿ ಸಿದ್ಧಾರ್ಥ ಅವರ ಕಣ್ಮರೆಗೆ ಕಂಬನಿ ಸುರಿಸಿದ ಸಂದೇಶವನ್ನು ಅಂಟಿಸಿ ಸುಖವಾಗಿ ಮರಳಿ ಬರುವಂತೆ ಪ್ರಾರ್ಥಿಸಿದ ಸಂದೇಶಗಳು ಕಂಡು ಬಂದವು.

ವಿ.ಜಿ. ಸಿದ್ಧಾರ್ಥ ಅವರ ಸ್ವಗ್ರಾಮವಾದ ತಾಲ್ಲೂಕಿನ ನಂದೀಪು ಗ್ರಾಮ ಪಂಚಾಯಿತಿಯ ಗೌತಹಳ್ಳಿ ಸಮೀಪದ ಚೇತನಹಳ್ಳಿಯಂತೂ ದುಃಖದ ಮಡುವಿನಲ್ಲಿ ಮುಳುಗಿ ಹೋಗಿತ್ತು. ಮುಂಜಾನೆಯಿಂದಲೇ ಚೇತನಹಳ್ಳಿ ಎಸ್ಟೇಟ್‌ನತ್ತ ಗ್ರಾಮಸ್ಥರು ಧಾವಿಸಿದ್ದರು. ಆದರೆ ಗೇಟಿಗೆ ಹಾಕಲಾಗಿದ್ದ ಬೀಗವು ಗ್ರಾಮಸ್ಥರು ಇನ್ನಷ್ಟು ದುಃಖದ ಮಡುವಿನಲ್ಲಿ ಮುಳುಗುವಂತೆ ಮಾಡಿತ್ತು. ಪ್ರತಿಯೊಬ್ಬರ ಬಾಯಲ್ಲೂ ಏನಾದರೂ ಮಾಹಿತಿ ಬಂತಾ ಎಂಬುದೇ ಇಡೀ ದಿನದ ಮಾತಾಗಿತ್ತು.

ಪಟ್ಟಣದಲ್ಲಿರುವ ಕಾಫಿ ಡೇ ಗ್ಲೋಬಲ್ ವ್ಯಾಪಾರ ಕೇಂದ್ರಗಳೆಲ್ಲವೂ ಬಂದ್ ಆಗಿದ್ದವು. ಏನಾದರೂ ಮಾಹಿತಿ ಸಿಗಬಹುದೇನೋ ಎಂಬ ಕಾತುರತೆಯಿಂದ ಕಾಫಿ ಡೇ ಗ್ಲೋಬಲ್ ವ್ಯಾಪಾರ ಕೇಂದ್ರಗಳತ್ತ ಬರುತ್ತಿದ್ದ ಕಾಫಿ ಬೆಳೆಗಾರರು, ಜನ ಸಾಮಾನ್ಯರು ಉತ್ತರ ಸಿಗದೇ ಮೌನಕ್ಕೆ ಶರಣಾಗುತ್ತಿದ್ದರು. ಸಿದ್ಧಾರ್ಥ ಅವರ ನಾಪತ್ತೆಯಿಂದ ಇಡೀ ತಾಲ್ಲೂಕೇ ಮನೆ ಮಗನನ್ನು ಹುಡುಕಾಡುವಂತೆ ಪರಿತಪಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT