ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನನ್ನು ಮುಗಿಸಲು ಕೆಲವರು ಪಿತೂರಿ ಮಾಡುತ್ತಿದ್ದಾರೆ: ಕುಮಾರಸ್ವಾಮಿ ಆರೋಪ

Published 14 ಜೂನ್ 2024, 16:28 IST
Last Updated 14 ಜೂನ್ 2024, 16:28 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಇಳಿವಯಸ್ಸಿನಲ್ಲಿ ಜೈಲಿಗೆ ಕಳುಹಿಸಲು ಹೊರಟಿರುವ ಕೆಲವರು, ನನ್ನನ್ನೂ ಮುಗಿಸಲು ಪಿತೂರಿ ಮಾಡುತ್ತಿದ್ದಾರೆ’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಯಾವ ಮಟ್ಟಕ್ಕೆ ದ್ವೇಷದ ರಾಜಕಾರಣ ನಡೆಯುತ್ತಿದೆ ಎನ್ನುವುದಕ್ಕೆ ಯಡಿಯೂರಪ್ಪ ಪ್ರಕರಣವೇ ಸಾಕ್ಷಿ. ಸರ್ಕಾರದ ನಾಲ್ಕು ತಿಂಗಳ ನಡವಳಿಕೆಯನ್ನು ರಾಜ್ಯವೇ ಅನುಮಾನದಿಂದ ನೋಡುತ್ತಿದೆ. ಪ್ರಕರಣ ದಾಖಲಾಗಿ ಇಷ್ಟು ದಿನ ಏನು ಮಾಡುತ್ತಿದ್ದರು? ವಕೀಲರಿಗೇ ಪಾಠ ಮಾಡಿದ್ದೇನೆ ಎನ್ನುವ ಮುಖ್ಯಮಂತ್ರಿಗೆ ಕಾನೂನಿನ ಅರಿವು ಇರಲಿಲ್ಲವೇ’ ಎಂದು ಪ್ರಶ್ನಿಸಿದರು.

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಬೇಕು ಎನ್ನುವ ಷಡ್ಯಂತ್ರ ನಡೆದಿತ್ತು. ಈಗ ಯಡಿಯೂರಪ್ಪ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಕುತಂತ್ರ ಆರಂಭವಾಗಿದೆ. ನನ್ನ ವಿಷಯದಲ್ಲೂ ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಕೇಂದ್ರ ಸಚಿವನಾಗಿದ್ದನ್ನೂ ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಅದಕ್ಕೆ ನನ್ನ ವಿರುದ್ಧ ಒಳಸಂಚು ನಡೆಸುತ್ತಿದ್ದಾರೆ. ಬಿಡದಿ ಜಮೀನಿನ ವಿಚಾರ ಕೆದಕುತ್ತಿದ್ದಾರೆ. ಕಿರುಕುಳ ಕೊಡಲು ಯೋಜನೆ ರೂಪಿಸುತ್ತಿದ್ದಾರೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಊಟದ ತಟ್ಟೆಯಲ್ಲೂ ನಾನೇ ಕಾಣುತ್ತಿದ್ದೇನೆ’ ಎಂದರು.

‘ಹಾಸನದಲ್ಲಿ ಕುತಂತ್ರ ಮಾಡಿ, ಹೆಣ್ಣು ಮಕ್ಕಳ ಜೀವನ ಹಾಳು ಮಾಡಿ ಗೆಲುವು ಪಡೆದಿದ್ದಾರೆ. ಪೆನ್‌ಡ್ರೈವ್ ಪ್ರಕರಣದಲ್ಲಿ ಆಡಿಯೊ ಬಂತಲ್ಲಾ, ಅದರ ಬಗ್ಗೆ ಏನು ಕ್ರಮ ತೆಗೆದುಕೊಂಡರು? ಸಿ.ಡಿ ಶಿವು ಅವರೇ, ನಾನು ಕೇಂದ್ರ ಸಚಿವನಾಗಿದ್ದೇನೆ. ಈಗ ನಾನು ನಿಮ್ಮ ಮಟ್ಟಕ್ಕೆ ಇಳಿಯುವುದಿಲ್ಲ. ಕುಮಾರಸ್ವಾಮಿ ವರ್ಚಸ್ಸು ನಾಶ ಮಾಡಿ ನಾವೇ ಅಧಿಪತಿ ಆಗಬೇಕು ಅಂತ ಹೊರಟಿದ್ದವರಿಗೆ ಮತದಾರರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ನಿರ್ನಾಮ ಖಚಿತ. ರಾಜ್ಯದ ಜನರು ಕೊಟ್ಟಿರುವ ಶಕ್ತಿಯನ್ನು ದ್ವೇಷಕ್ಕೆ ಬಳಸಿಕೊಳ್ಳುವುದನ್ನು ಮೊದಲು ಬಿಡಬೇಕು’ ಎಂದು ಹೇಳಿದರು.

ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ
ಕೇಂದ್ರ ಸಚಿವರಾದ ನಂತರ ಮೊದಲ ಬಾರಿ ಬೆಂಗಳೂರಿಗೆ ಬಂದ ಕುಮಾರಸ್ವಾಮಿ ಅವರಿಗೆ ಪಕ್ಷದ ಮುಖಂಡರು ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಜೆಡಿಎಸ್‌ ಪಕ್ಷದ ಕಚೇರಿಗೆ ಬಂದ ಅವರನ್ನು ಕಾರ್ಯಕರ್ತರು ಮುತ್ತಿಕೊಂಡರು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಕ್ಷದ ಮುಖಂಡರು ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದ ನಂತರ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ನಂತರ ಪದ್ಮನಾಭ ನಗರಕ್ಕೆ ತೆರಳಿ ತಂದೆ ಎಚ್‌.ಡಿ. ದೇವೇಗೌಡ–ತಾಯಿ ಚನ್ನಮ್ಮ ಅವರ ಆಶೀರ್ವಾದ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT