ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಮೊದಲ ಯೋಜನೆ ಜಾರಿ: ಉದ್ಘಾಟನೆಗೆ ‘ಶ್ರಮಿಕ ನಿವಾಸ್’ ಸಿದ್ಧ

Published : 5 ಮಾರ್ಚ್ 2023, 19:54 IST
ಫಾಲೋ ಮಾಡಿ
Comments

ಬೆಂಗಳೂರು: ಕೈಗಾರಿಕೆಗಳು ಸೇರಿ ಸೇರಿ ವಿವಿಧ ಕ್ಷೇತ್ರಗಳ ಕಾರ್ಮಿಕರಿಗೆ ಅವರ ಕೆಲಸದ ಸ್ಥಳದ ಸಮೀಪದಲ್ಲೇ ಅವರು ಅಗತ್ಯವಿರುವಷ್ಟು ದಿನ ವಸತಿ ಸೌಲಭ್ಯ ಕಲ್ಪಿಸಲು ದೇಶದಲ್ಲೇ ಮೊದಲಿಗೆ ‘ಶ್ರಮಿಕ ನಿವಾಸ್’ ವಸತಿ ಯೋಜನೆಯನ್ನು ಕಾರ್ಮಿಕ ಇಲಾಖೆ ಜಾರಿಗೊಳಿಸಿದೆ.

ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ರಾಜ್ಯಕ್ಕೆ ಬರುವ ಕಾರ್ಮಿಕ ವರ್ಗ ರಸ್ತೆ ಬದಿ, ನೈರ್ಮಲ್ಯ ಕೊರತೆ ಇರುವೆಡೆ ಗುಡಿಸಲು ಹಾಕಿ ವಾಸಿಸುತ್ತಾರೆ. ಇಲ್ಲಿ ಮೂಲಸೌಕರ್ಯದ ಕೊರತೆ ಜತೆಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇಂತಹ ಸಮಸ್ಯೆಗಳನ್ನು ಮನಗಂಡ ರಾಜ್ಯ ಸರ್ಕಾರ ‘ಶ್ರಮಿಕ್ ನಿವಾಸ್’ ಯೋಜನೆಯನ್ನು ಜಾರಿಗೆ ತಂದಿದೆ. ಕೈಗಾರಿಕಾ ಪ್ರದೇಶಗಳು ಸೇರಿದಂತೆ ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ಶ್ರಮಿಕ್ ನಿವಾಸ್ ಯೋಜನೆಯಡಿ ವಸತಿ ಸಮುಚ್ಚಯ ಹಾಗೂ ಬಿಡಿ ಮನೆಗಳನ್ನು ನಿರ್ಮಾಣ ಮಾಡುತ್ತಿದೆ.

ಯೋಜನೆಯ ಮೊದಲ ಹಂತವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕೈಗಾರಿಕಾ ವಲಯದ ಬದನಹಳ್ಳಿಯಲ್ಲಿ ₹ 19 ಕೋಟಿ ವೆಚ್ಚದಲ್ಲಿ ಏಕ ವಸತಿ ಮತ್ತು ಕುಟುಂಬ ವಸತಿಯ ಸಮುಚ್ಚಯ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ.

ಏಕ ಹಾಸಿಗೆ ವ್ಯವಸ್ಥೆಯಡಿ 96 ಕಾರ್ಮಿಕರು ಮತ್ತು ದ್ವಿ ಹಾಸಿಗೆ ವ್ಯವಸ್ಥೆಯಡಿ 196 ಕಾರ್ಮಿಕರಿಗೆ ವಸತಿ ಲಭಿಸುತ್ತದೆ. ಕುಟುಂಬದೊಂದಿಗೆ ಇರಬಯಸುವ ಕಾರ್ಮಿಕರಿಗೆ ಪ್ರತ್ಯೇಕ ಮನೆ ನೀಡಲು ವ್ಯವಸ್ಥೆ ಮಾಡಲಾಗಿದೆ.

‘ಒಂದು ಕುಟುಂಬದ ಗರಿಷ್ಠ ನಾಲ್ವರಂತೆ 48 ಕಾರ್ಮಿಕ ಕುಟುಂಬಗಳಿಗೆ ಮೊದಲ ಹಂತದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಕ್ಕೂ ಆದ್ಯತೆ ನೀಡಲಾಗಿದೆ. ಕಾರ್ಮಿಕ ಮಂಡಳಿಯ ಗುರುತಿನ ಚೀಟಿಯನ್ನು ಹೊಂದಿರುವ ಕಾರ್ಮಿಕರಿಗೆ ಈ ಸೌಲಭ್ಯ ದೊರೆಯಲಿದೆ’ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT