ಬೆಂಗಳೂರು: ವಕ್ಫ್ ಕಾಯ್ದೆ ತಿದ್ದುಪಡಿ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿ, ರಾಜ್ಯ ವಕ್ಫ್ ಮಂಡಳಿ ಗುರುವಾರ ನಿರ್ಣಯ ಅಂಗೀಕರಿಸಿತು.
ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಬಾಷಾ ನೇತೃತ್ವದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ನೇತೃತ್ವದ ನಿಯೋಗ, ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿರುವ ಮಂಡಳಿ ನಿರ್ಣಯ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಕೋರಿತು.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ಜಮೀರ್ ಅಹಮದ್ ಖಾನ್, ‘ವಕ್ಫ್ ಮಂಡಳಿ ಸ್ವಾಯತ್ತ ಸಂಸ್ಥೆ. ಹಾಗಾಗಿ, ಕೇಂದ್ರ ಸರ್ಕಾರ ರಚನೆ ಮಾಡಿರುವ ಜಂಟಿ ಸಲಹಾ ಸಮಿತಿಗೂ ಮಾಹಿತಿ ಕೊಡುವುದಿಲ್ಲ. ಕಾಯ್ದೆಯ ತಿದ್ದುಪಡಿ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದರ ಹಿಂದಿನ ಉದ್ದೇಶ ಬೇರೆ ಇದೆ. ಈ ಎಲ್ಲ ವಿಷಯವನ್ನು ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಲಾಗಿದೆ’ ಎಂದರು.
‘ಮುಂದಿನ ಅಧಿವೇಶನದಲ್ಲಿ ರಾಜ್ಯ ಸರ್ಕಾರದಿಂದ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಮನವಿ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.