ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆ: ಚೀನಾಗೂ ಕರ್ನಾಟಕ ಪೈಪೋಟಿ- ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ

3 ಶತಕೋಟಿ ಡಾಲರ್ ಹೂಡಿಕೆಗೆ ಆಸಕ್ತಿ: ಎಂ.ಬಿ. ಪಾಟೀಲ
Published 12 ಅಕ್ಟೋಬರ್ 2023, 15:37 IST
Last Updated 12 ಅಕ್ಟೋಬರ್ 2023, 15:37 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕಾ ಬಂಡವಾಳ ಸೆಳೆಯಲು ದೇಶದ ಇತರ ರಾಜ್ಯಗಳಲ್ಲದೇ, ಚೀನಾದ ಜತೆಗೂ ತೀವ್ರ ಪೈಪೋಟಿ ನಡೆಸುತ್ತಿದೆ. ಬದಲಾದ ಭೌಗೋಳಿಕ- ರಾಜಕೀಯ ಹಿನ್ನೆಲೆಯಲ್ಲಿ ಅಮೆರಿಕದ ಕಂಪನಿಗಳು  ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೀವ್ರ ಆಸಕ್ತಿ ತೋರಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ಐಟಿ–ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಅಮೆರಿಕಕ್ಕೆ 12 ದಿನಗಳ ವ್ಯಾಪಾರ ಉತ್ತೇಜನಾ ಪ್ರವಾಸ ತೆರಳಿದ್ದ ರಾಜ್ಯ ನಿಯೋಗದ ನೇತೃತ್ವ ವಹಿಸಿದ್ದ ಅವರು ಗುರುವಾರ ವಿಕಾಸಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ಪ್ರವಾಸದ ವೇಳೆ ವಿವಿಧ ಕಂಪನಿಗಳ ಜೊತೆ ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅಲ್ಲಿನ ಕಂಪನಿಗಳಿಂದ ರಾಜ್ಯದಲ್ಲಿ ಸುಮಾರು 3 ಶತಕೋಟಿ ಡಾಲರ್‌ ಹೂಡಿಕೆ ಮಾಡುವ ಆಸಕ್ತಿ ವ್ಯಕ್ತವಾಗಿದೆ. ಇದರಲ್ಲಿ ಶೇ 60 ರಷ್ಟು ಕಾರ್ಯಗತವಾಗುವ ವಿಶ್ವಾಸವನ್ನು ಎಂ.ಬಿ. ಪಾಟೀಲ ವ್ಯಕ್ತಪಡಿಸಿದರು.

‘ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಈಗ ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳು ನಡೆಸುತ್ತಿವೆ. ಇಂತಹ ಸಮಾವೇಶದ ಜೊತೆಗೆ ಹೊಸ ಉಪಕ್ರಮವೊಂದನ್ನು ಕೈಗೊಳ್ಳಬೇಕು ಎಂಬುದು ನಮ್ಮ ಆಲೋಚನೆ ಆಗಿತ್ತು. ಹೀಗಾಗಿ, ಉದ್ಯಮಿಗಳಿರುವ ಹಾಗೂ ಉದ್ಯಮ ಸಂಸ್ಥೆಗಳ ಜಾಗಕ್ಕೆ ನಾವೇ ಹೋಗಿ ರಾಜ್ಯದಲ್ಲಿರುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡುವ ಹೊಸ ಪ್ರಯತ್ನ ಮಾಡಿದೆವು’ ಎಂದು ಎಂ.ಬಿ. ಪಾಟೀಲ ತಿಳಿಸಿದರು.

ರಾಜ್ಯದಲ್ಲಿ 2024 ರ ಕೊನೆಗೆ ಅಥವಾ 2025 ರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಮಾನವ ಸಂಪನ್ಮೂಲದ ಬೇಡಿಕೆಗೆ ಅನುಗುಣವಾಗಿ ಎಂಜಿನಿಯರ್‌ಗಳಿಗೆ ತರಬೇತಿ ನೀಡುವ ಸಂಬಂಧ ಎಎಂಡಿ ಸಂಸ್ಥೆ ಜತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳಲಿದೆ. ಈ ಸಂಸ್ಥೆ 800 ಎಂಜಿನಿಯರ್‌ಗಳನ್ನು ಭಾರತದಲ್ಲಿ ನೇಮಕ ಮಾಡಿಕೊಳ್ಳಲಿದೆ ಎಂದು ಹೇಳಿದರು.

ನಾವೀನ್ಯತಾ ಸೂಚ್ಯಂಕದಲ್ಲಿ ಕರ್ನಾಟಕ 18 ನೇ ಸ್ಥಾನ ಪಡೆದಿದ್ದು ಮುಂದಿನ ದಿನಗಳಲ್ಲಿ 10 ರೊಳಗೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT