ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಹಂಚಿಕೆ ವಿಷಯ ತಿರುಚುತ್ತಿರುವ ಮೋದಿ: ಟೀಕೆ

Published 30 ಏಪ್ರಿಲ್ 2024, 14:26 IST
Last Updated 30 ಏಪ್ರಿಲ್ 2024, 14:26 IST
ಅಕ್ಷರ ಗಾತ್ರ

ಬೆಂಗಳೂರು: ಅಸಮಾನತೆ ನಿವಾರಣೆ ಕುರಿತ ಕಾಂಗ್ರೆಸ್‌ ಪಕ್ಷದ ನಿಲುವನ್ನು ಬಿಜೆಪಿ ಹಾಗೂ ದೇಶದ ಪ್ರಧಾನಿ ಸಂಕುಚಿತವಾಗಿ ಅರ್ಥೈಸುತ್ತಿದ್ದಾರೆ. ಮತ ಬ್ಯಾಂಕ್‌ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಅಪಪ್ರಚಾರಕ್ಕೆ ಕಾಂಗ್ರೆಸ್ ಪಕ್ಷ, ಕಿವಿಗೊಡದೆ ಅಧಿಕಾರಕ್ಕೆ ಬಂದಾಗ ಹಂಚಿಕೆಯ ಸಮಗ್ರ ಕಾರ್ಯಯೋಜನೆ ರೂಪಿಸಬೇಕು ಎಂದು ಸಾಹಿತಿಗಳು, ಹೋರಾಟಗಾರರು ಒತ್ತಾಯಿಸಿದ್ದಾರೆ.

ಜಿಡಿಪಿ, ಅಭಿವೃದ್ಧಿ ದರಗಳಂತಹ ಶುಷ್ಕ ಆರ್ಥಿಕ ಮಾನದಂಡಗಳ ಆಧರಿಸಿ ಭಾರತ ಪ್ರಗತಿ ಪಥದಲ್ಲಿದೆ ಎಂದು ಬಿಂಬಿಸಲಾಗುತ್ತಿದೆ. ದೇಶದಲ್ಲಿ ಬಡತನ, ಹಸಿವು, ಅಪೌಷ್ಟಿಕತೆ ತಾಂಡವಾಡುತ್ತಿವೆ. ಆದಾಯ ಮತ್ತು ಸಂಪತ್ತು ಕೆಲವರ ಪಾಲಾಗುತ್ತಿವೆ. ಜಾಗತಿಕ ವರದಿಯ ಪ್ರಕಾರ ಶೇ 40ರಷ್ಟು ರಾಷ್ಟ್ರದ ಸಂಪತ್ತು ಶೇ 1ರಷ್ಟು ಶ್ರೀಮಂತರ ಕೈವಶವಾಗಿರುತ್ತದೆ. ಕೆಳಸ್ತರದ ಅರ್ಧ ಭಾಗ ಜನಸಂಖ್ಯೆಯ ಆದಾಯದ ಪಾಲು ಶೇಕಡ 6 ರಷ್ಟಿದೆ. ಇಂತಹ ಅಸಮಾನತೆ ಹೋಗಲಾಡಿಸಲು ಕಾಂಗ್ರೆಸ್‌ ನೀಡಿದ ಹೇಳಿಕೆ ತಿರುಚಲಾಗಿದೆ ಎಂದು ಸಾಹಿತಿ ಹಾಗೂ ಹೋರಾಟಗಾರರಾದ ಎಸ್‌. ಜಿ. ಸಿದ್ದರಾಮಯ್ಯ, ಮೈಕೇಲ್‌ ಬಿ ಫರ್ನಾಂಡಿಸ್, ಅಲ್ಲಮಪ್ರಭು ಬೆಟ್ಟದೂರು, ವಿಜಯಾ, ವಿನೋದ ವ್ಯಾಸಲು, ಎಸ್‌. ಜಾಫೆಟ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

10 ವರ್ಷಗಳಲ್ಲಿ ಆದಾಯ ಮತ್ತು ಸಂಪತ್ತಿನ ಹಂಚಿಕೆಯಲ್ಲಿನ ಅಸಮಾನತೆಗಳು ದೇಶದಲ್ಲಿ ಉಲ್ಬಣಗೊಂಡಿವೆ. ಇದಕ್ಕೆ ಪರಿಹಾರವಾಗಿ ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರದಾದ್ಯಂತ ವಿವಿಧ ಜಾತಿ ಮತ್ತು ಉಪಜಾತಿಗಳ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸಿ, ಹೊರ ಹೊಮ್ಮುವ ಫಲಿತಾಂಶದ ಆಧಾರದ ಮೇಲೆ ದೃಢವಾದ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದು ಸ್ವಾಗತಾರ್ಹ. ಆದರೆ, ಸಮಾಜವಾದ, ಜಾತ್ಯತೀತತೆ ಮತ್ತಿತರ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಾತ್ವಿಕ ಬುನಾದಿ ನೀಡುವ ಯಾವುದೇ ಉದಾತ್ತ ಧ್ಯೇಯಗಳನ್ನು ಅರಗಿಸಿಕೊಳ್ಳದ ನರೇಂದ್ರ ಮೋದಿ, ಅಸಮಾನತೆ ಮತ್ತು ಹಂಚಿಕೆ ವಿಚಾರಗಳನ್ನೂ ತಿರುಚುತ್ತಿದ್ದಾರೆ. ತನ್ನ ಕೈಗೊಂಬೆ ಮಾಧ್ಯಮಗಳ ಮೂಲಕ ಬಿತ್ತರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

'ಜನರು ಸಂಪಾದಿಸಿದ ಆಸ್ತಿ, ಆಭರಣ, ವಾಹನ, ಅಷ್ಟೇಕೆ ಮಹಿಳೆಯರ ಮಾಂಗಲ್ಯವನ್ನೂ ಕಾಂಗ್ರೆಸ್‌ ಪಕ್ಷ ಕಿತ್ತುಕೊಂಡು ತನ್ನ  ಓಲೈಕೆಯ ಮತಬ್ಯಾಂಕ್‌ಗೆ (ಮುಸ್ಲಿಂ ಸಮುದಾಯಕ್ಕೆ) ಹಸ್ತಾಂತರಿಸಲಿದೆ' ಎನ್ನುವ ಮೂಲಕ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಒಡೆದಾಳುವ ರಾಜಕಾರಣಕ್ಕೆ ಪ್ರಯತ್ನಿಸುತ್ತಿದೆ. ಇಂತಹ ಅಪಪ್ರಚಾರದ ಸಂಚಿಗೆ ಕಾಂಗ್ರೆಸ್ ವಿಚಲಿತಗೊಳ್ಳದೆ ಜಾಗತೀಕರಣ, ನವ ಉದಾರಿಕರಣ ನೀತಿಗಳ ಬಗೆಗಿನ ನಿಲುವನ್ನು ಸರಿಪಡಿಸಿಕೊಂಡು ಸಂವಿಧಾನದ ವಿಧಿ 39 (ಬಿ) ಮತ್ತು (ಸಿ) ಅನ್ವಯ ಅಸಮಾನತೆ ಹೊಡೆದೋಡಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT