ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ದಾಸ್ತಾನು: ನಿಯಮ ಉಲ್ಲಂಘನೆ, ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಹೋದರೂ ಪಟಾಕಿ ದಾಸ್ತಾನು ಮಳಿಗೆಗಳಿಗೆ ಪರವಾನಗಿ ನೀಡಿರುವ ರಾಜ್ಯ ಸರ್ಕಾರದ ಕಂದಾಯ ಅಧಿಕಾರಿಗಳ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ‘ಪಟಾಕಿ ದಾಸ್ತಾನು ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಸಮಗ್ರ ಮಾರ್ಗಸೂಚಿಯನ್ನು ರೂಪಿಸಲಾಗುವುದು‘ ಎಂಬ ಇಂಗಿತ ವ್ಯಕ್ತಪಡಿಸಿದೆ.

ಪಟಾಕಿ ದಾಸ್ತಾನು ಜಪ್ತಿ ಮಾಡಿರುವ ಕಂದಾಯ ಇಲಾಖೆಯ ಕ್ರಮವನ್ನು ಪ್ರಶ್ನಿಸಲಾದ 15ಕ್ಕೂ ಹೆಚ್ಚು ಪ್ರಕರಣಗಳಿಗೆ ಸಂಬಂಧಿಸಿದ ರಿಟ್‌ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ’ಕಾನೂನು ಬಾಹಿರವಾಗಿ ಪಟಾಕಿ ದಾಸ್ತಾನು ಮತ್ತು ಮಾರಾಟಕ್ಕೆ ಏಕೆ ಪರವಾನಗಿ ಕೊಡುತ್ತಿದ್ದೀರಿ‘ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಇದೇ ವೇಳೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪರ ಡೆಪ್ಯೂಟಿ ಸಾಲಿಸಿಟರ್‌ ಜನರಲ್‌ ಶಾಂತಿಭೂಷಣ್‌ ಸ್ಥಳ ಪರಿಶೀಲನೆ ನಡೆಸಿದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ.

‘ಪಟಾಕಿ ದಾಸ್ತಾನಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿರುವ ಹಲವು ಪ್ರಕರಣಗಳಲ್ಲಿ ಸ್ಫೋಟಕ ಕಾಯ್ದೆ-1984ರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ. 500 ಕೆ.ಜಿ ತೂಕದವರೆಗೂ ಪಟಾಕಿ ದಾಸ್ತಾನು ಮಾಡಲು ಜಿಲ್ಲಾಧಿಕಾರಿ ಪರವಾನಗಿ ನೀಡಲು ಅವಕಾಶವಿದೆ. ಪಟಾಕಿ ದಾಸ್ತಾನು ಇರಿಸಿದ ಮತ್ತು ಮಾರಾಟ ಮಾಡುವ ಜಾಗ, ಅಂಗಡಿ, ಮನೆಗಳ ನಡುವೆ 15 ಮೀಟರ್‌ ಅಂತರವಿರಬೇಕು. ಅಗ್ನಿ ಸುರಕ್ಷತೆ ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿದಂತೆ ನಿಯಮದ ಹಲವು ಚೌಕಟ್ಟುಗಳನ್ನು ಮೀರಲಾಗಿದೆ‘ ಎಂದು ಶಾಂತಿಭೂಷಣ್‌ ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕಾನೂನು ಬಾಹಿರ ಪರವಾನಗಿಗಳನ್ನು ಯಾಕೆ ಕೊಡುತ್ತಿದ್ದೀರಿ. ಕಂದಾಯ ನಿರೀಕ್ಷಕರು ಏಕೆ ದಾಸ್ತಾನು ಮಳಿಗೆಗೆ ಬೀಗ ಹಾಕಿದ್ದಾರೆ? ಅವರಿಗೆ ಯಾವ ಅಧಿಕಾರವಿದೆ? ದೀಪಾವಳಿ ಹಬ್ಬದಲ್ಲಿ ಏನಾದರೂ ಅನುಕೂಲ ಪಡೆಯಲು ಈ ರೀತಿಯ ಪರವಾನಗಿ ನೀಡಿದ್ದೀರಾ. ಅವರಿಗೆ ಏನಾದರೂ ಪಟಾಕಿ ಬೇಕಿತ್ತಾ?‘ ಎಂದು ಕುಟುಕಿದೆ.

‘ಪ್ರತಿವರ್ಷ ದೀಪಾವಳಿ ಹಬ್ಬ ಸಮೀಪಿಸಿದಾಗಲೆಲ್ಲಾ ಇಂತಹುದೇ ನಡವಳಿಕೆಗಳು ಪುನರಾವರ್ತನೆಯಾಗುತ್ತಿದೆ. ಆದ್ದರಿಂದ, ಪಟಾಕಿ ದಾಸ್ತಾನಿಗೆ ಅನುಮತಿ ನೀಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು‘ ಎಂದು ತಿಳಿಸಿರುವ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಪ್ರಕರಣಗಳೇನು?: ‘ಪೊಲೀಸರು ಹಾಗೂ ಜಿಲ್ಲಾಧಿಕಾರಿ ನಿರ್ದೇಶನದಂತೆ ಕಂದಾಯ ನಿರೀಕ್ಷಕರು ದಾಸ್ತಾನು ಜಪ್ತಿ ಮಾಡಿ ಮಾರಾಟ ಮಳಿಗೆಗೆ ಬೀಗ ಹಾಕಿರುವುದನ್ನು ಕಾನೂನು ಬಾಹಿರ ಎಂದು ಘೋಷಿಸಬೇಕು. ವ್ಯಾಪಾರದಲ್ಲಿ ಪೊಲೀಸರು, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಅನಗತ್ಯ ಹಸ್ತಕ್ಷೇಪ ಮಾಡದಂತೆ ನಿರ್ದೇಶಿಸಬೇಕು‘ ಎಂಬುದು ಅರ್ಜಿದಾರರು ಮನವಿ. ‘ಅರ್ಜಿ ವಿಲೇವಾರಿಯಾಗುವ ತನಕ ಪಟಾಕಿ ಮಾರಾಟಕ್ಕೆ ಅವಕಾಶ ನೀಡಿ ಬೀಗ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಬೇಕು‘ ಎಂದು ಮಧ್ಯಂತರ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT