ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್: ಕನ್ನಡಿಗರ ವಾಪಸಾತಿ ಭರವಸೆ

ಜೀವಭಯದಲ್ಲಿ ನಲುಗಿರುವ ನೂರಾರು ಜನ; ಕರೆ ಮಾಡಿ ಧೈರ್ಯ ಹೇಳಿದ ರಾಜ್ಯದ ಅಧಿಕಾರಿ
Last Updated 19 ಏಪ್ರಿಲ್ 2023, 23:30 IST
ಅಕ್ಷರ ಗಾತ್ರ

ದಾವಣಗೆರೆ: ಸೇನಾಪಡೆಗಳ ಸಂಘರ್ಷದಿಂದ ನಲುಗಿರುವ ಸುಡಾನ್‌ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ಜೀವಭಯದಿಂದ ದಿನ ದೂಡುತ್ತಿದ್ದು, ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವು ದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.

ಬುಧವಾರ ಸಂತ್ರಸ್ತ ಕುಟುಂಬ ಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ರಾಜ್ಯ ವಿಪತ್ತು ನಿರ್ವ ಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ್‌ ರಾಜನ್‌, ‘ಯಾರೂ ಅಪಾಯಕಾರಿ ಸ್ಥಳಕ್ಕೆ ತೆರಳಬೇಡಿ. ಮನೆ ಗಳಿಂದ ಹೊರಬರಬೇಡಿ, ಶೀಘ್ರವೇ ನಿಮ್ಮೆಲ್ಲರನ್ನೂ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆತರಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅಭಯ ನೀಡಿದ್ದಾರೆ.

‘ಕರ್ನಾಟಕದ ಅಧಿಕಾರಿಗಳು ಧೈರ್ಯ ತುಂಬಿದ್ದಾರೆ. ಸಂಘರ್ಷದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳನ್ನೂ ವಶಕ್ಕೆ ಪಡೆಯಲಾಗಿದೆ. ವಾಪಸ್ ಕರೆತರಲು ಅನ್ಯ ಮಾರ್ಗಗಳಿವೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ’ ಎಂದು ಚನ್ನಗಿರಿ ತಾಲ್ಲೂಕಿನ ಗೋಪನಾಳ್‌ ಗ್ರಾಮದ ಪ್ರಭು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಾವೆಲ್ಲ ಆಹಾರ, ನೀರು ಸಿಗದೇ ಪರಿತಪಿಸುತ್ತಿದ್ದೇವೆ. ಮಹಿಳೆಯರು, ಮಕ್ಕಳು ಜೊತೆಗಿದ್ದಾರೆ. ಮಂಗಳವಾರದಿಂದ ವಿದ್ಯುತ್ ಕಡಿತಗೊಂಡಿದ್ದು, ಕತ್ತಲ್ಲಲ್ಲಿ ಕಾಲ ದೂಡುವಂತಾಗಿದೆ. ನಮ್ಮವರನ್ನು ಸಂಪರ್ಕಿಸಲು ಮೊಬೈಲ್ ಬ್ಯಾಟರಿ ಚಾರ್ಚ್‌ ಮಾಡಿಕೊಳ್ಳಲೂ ವಿದ್ಯುತ್ ಇಲ್ಲದಂತಾಗಿದೆ’ ಎಂದು ಗೋಪನಾಳ್ ಗ್ರಾಮದ ಶಿವಾನಂದ್ ಅಲ್ಲಿನ ಸ್ಥಿತಿಗತಿ ಕುರಿತು ವಿವರಿಸಿದರು.

‘200ಕ್ಕೂ ಹೆಚ್ಚು ಕನ್ನಡಿಗರು ಒಂದೇ ವಸತಿಗೃಹದಲ್ಲಿ ಎರಡು ತಿಂಗಳಿನಿಂದ ಉಳಿದುಕೊಂಡಿದ್ದೇವೆ. ವಿದ್ಯುತ್ ಕಡಿತಗೊಂಡಿದ್ದರಿಂದ ಕುಡಿಯುವ ನೀರು ಸಿಗುತ್ತಿಲ್ಲ. ಶೌಚಾಲಯದ ನೀರೇ ಗತಿಯಾಗಿದೆ’ ಎಂದು ಅವರು ಸಂಕಷ್ಟ ತೋಡಿಕೊಂಡರು. ‘ಮೂರು ದಿನಗಳ ಹಿಂದೆ ಅನತಿ ದೂರದಲ್ಲೇ ಬಾಂಬ್ ದಾಳಿ ನಡೆದಿದ್ದರಿಂದ ನಾವಿರುವ ಹೋಟೆಲ್‌ನ ಮಾಲೀಕರು ನಾಪತ್ತೆಯಾಗಿದ್ದಾರೆ. ಬೇಗನೇ ಹೋಟೆಲ್ ಖಾಲಿ ಮಾಡುವಂತೆ ಹೋಟೆಲ್‌ ಸಿಬ್ಬಂದಿ ಒತ್ತಡ ಹೇರುತ್ತಿದ್ದು, ದಿಕ್ಕು ತೋಚದಂತಾಗಿದೆ. ಕ್ಷಿಪಣಿ ದಾಳಿಗೆ ನಮ್ಮ ಹೋಟೆಲ್ ಪಕ್ಕದಲ್ಲಿನ ಕಟ್ಟಡವೊಂದು ನೆಲ‌ಕ್ಕುರುಳಿ ಬಿದ್ದಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಬೆಳಗಿನ ಜಾವ 3 ಗಂಟೆಗೆ ಗುಂಡಿನ ದಾಳಿ ಆರಂಭವಾಗುತ್ತದೆ. ನಿದ್ರೆಯ ಮಂಪರಿನಲ್ಲಿದ್ದ ನಮ್ಮನ್ನು ಕ್ಷಿಪಣಿ, ಬಾಂಬ್ ಸದ್ದು ಎಚ್ಚರಗೊಳಿಸುತ್ತವೆ’ ಎಂದು ಗೋಪನಾಳ್‌ ಗ್ರಾಮದ ಪ್ರಭು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT