ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ಗಿಫ್ಟ್‌ ಕಾರ್ಡ್‌ ಹಂಚಿಕೆ ಆರೋಪ: PIL ಪರಿಗಣಿಸದ ಸುಪ್ರೀಂ ಕೋರ್ಟ್

Published 1 ಸೆಪ್ಟೆಂಬರ್ 2023, 15:36 IST
Last Updated 1 ಸೆಪ್ಟೆಂಬರ್ 2023, 15:36 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ಹಾಗೂ ಅವರ ಏಜೆಂಟ್‌ಗಳು ಹಲವಾರು ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್‌ ಗಿಫ್ಟ್‌ ಕಾರ್ಡ್‌ಗಳನ್ನು ವಿತರಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಪರಿಗಣಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿದ್ದ ಗೌತಮ್‌ ಗೌಡ ಎಂ. (ರಾಮನಗರ) ಹಾಗೂ ಪ್ರಸಾದ್‌ ಕೆ.ಆರ್. (ಮಾಗಡಿ) ಈ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ಜೆ.ಬಿ.ಪಾರ್ದಿವಾಲಾ ಅವರನ್ನು ಒಳಗೊಂಡ ಪೀಠ, ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮೆಟ್ಟಿಲೇರಬಹುದು ಎಂದು ನಿರ್ದೇಶನ ನೀಡಿತು.

ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಮುಖ್ಯ ನ್ಯಾಯಮೂರ್ತಿ, ‘ನಾವೇನು ಮಾಡಬಹುದು? ಚುನಾವಣೆಯಲ್ಲಿ ಹಣ ಹಂಚಲಾಗುತ್ತಿದೆ ಎಂದು ಹೇಳುತ್ತೀರಿ. ನಾವು ಈಗ ಅಲ್ಲಿಗೆ ಹೋಗಿ ತನಿಖೆ ಮಾಡಬೇಕೆಂದು ನೀವು ನಿರೀಕ್ಷಿಸುತ್ತೀರಾ? ಈ ವಿಷಯದ ಕುರಿತು ಈಗಾಗಲೇ ಸಾಕಷ್ಟು ಕಾನೂನುಗಳು ಮತ್ತು ಮಾರ್ಗಸೂಚಿಗಳಿವೆ. ನೀವು ಹೈಕೋರ್ಟ್‌ಗೆ ಹೋಗಬಹುದು. ಹೈಕೋರ್ಟ್‌ಗಳು ತಮ್ಮದೇ ಆದ ವ್ಯಾಪ್ತಿಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಅಧಿಕಾರಗಳನ್ನು ಹೊಂದಿವೆ’ ಎಂದರು. 

ಚುನಾವಣಾ ಅಕ್ರಮದ ಕುರಿತು ಚುನಾವಣಾ ಆಯೋಗಕ್ಕೆ ಹಲವು ದೂರುಗಳನ್ನು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅಕ್ರಮಗಳನ್ನು ತಡೆಗಟ್ಟಲು ಚುನಾವಣಾ ಮಾದರಿ ನೀತಿಸಂಹಿತೆಯಲ್ಲಿ ಇನ್ನಷ್ಟು ಮಾರ್ಗಸೂಚಿಗಳನ್ನು ಸೇರಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು. 

‘ರಾಮನಗರ, ಮಾಗಡಿ ಸೇರಿದಂತೆ ಕರ್ನಾಟಕದ 42 ಕ್ಷೇತ್ರಗಳಲ್ಲಿ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವಾಗ ಉಚಿತ ಗಿಫ್ಟ್‌ ಕಾರ್ಡ್‌ಗಳನ್ನು ಹಂಚಲಾಗಿದೆ. ಈ ಮೂಲಕ ಚುನಾವಣಾ ಅಕ್ರಮ ಎಸಗಲಾಗಿದೆ. ಕಾಂಗ್ರೆಸ್‌ ಪಕ್ಷವು ಐದು ಗ್ಯಾರಂಟಿಗಳನ್ನು ಘೋಷಿಸಿ ಮತದಾರರನ್ನು ಸೆಳೆಯಲು ಪ್ರಯತ್ನಿಸಿದೆ. ಇಂತಹ ಆಮಿಷಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಯಲ್ಲೂ ಈ ಪ್ರವೃತ್ತಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ’ ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT