ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆರಿಗೆ ಅನ್ಯಾಯ | ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಇರಬೇಕೇ?: ನಾಗಮೋಹನ್‌ದಾಸ್

Published : 11 ಸೆಪ್ಟೆಂಬರ್ 2024, 14:07 IST
Last Updated : 11 ಸೆಪ್ಟೆಂಬರ್ 2024, 14:07 IST
ಫಾಲೋ ಮಾಡಿ
Comments

ಬೆಂಗಳೂರು: ‘ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಪ್ರತಿ ಒಂದು ರೂಪಾಯಿಯಲ್ಲಿ ವಾಪಸ್‌ ಬರುವುದು 15 ಪೈಸೆ ಮಾತ್ರ. ಇದು ಹೀಗೇ ಮುಂದುವರಿಯುವುದಾದರೆ, ಕರ್ನಾಟಕವು ಈ ಒಕ್ಕೂಟ ವ್ಯವಸ್ಥೆಯಲ್ಲಿ ಇರಬೇಕೇ ಎಂಬ ಪ್ರಶ್ನೆ ಹುಟ್ಟುತ್ತದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಹೇಳಿದರು.

ಸಮಾಜವಾದಿ ಅಧ್ಯಯನ ಕೇಂದ್ರವು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೆನಪಿನಲ್ಲಿ ಬುಧವಾರ ಆಯೋಜಿಸಿದ್ದ ‘ಕೇಂದ್ರ ಮತ್ತು ರಾಜ್ಯಗಳ ಸಂಬಂಧ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹೇಗಿರಬೇಕು ಎಂಬುದನ್ನು ಸಂವಿಧಾನ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಿ, ಅಧಿಕಾರವು ವಿಕೇಂದ್ರೀಕರಣದ ಸ್ವರೂಪದಲ್ಲಿ ಇರಬೇಕು ಎಂದು ನಿರ್ಧರಿಸಲಾಗಿತ್ತು. 1947ಕ್ಕೂ ಮುನ್ನ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತವು ಒಂದೇ ರಾಜಕೀಯ ಆಡಳಿತದಲ್ಲಿ ಇರಲಿಲ್ಲ. ಸುಮಾರು 600 ಸಂಸ್ಥಾನಗಳನ್ನು ಒಗ್ಗೂಡಿಸಲು ಪ್ರಬಲ ಕೇಂದ್ರ ಸರ್ಕಾರದ ಅಗತ್ಯ ಇತ್ತು. ಹೀಗಾಗಿಯೇ ಕೇಂದ್ರ ಸರ್ಕಾರಕ್ಕೆ ಸಂವಿಧಾನವು ಹೆಚ್ಚಿನ ಅಧಿಕಾರ ಕೊಟ್ಟಿದೆ. ಆ ಅಧಿಕಾರ ಈಗ ದುರುಪಯೋಗವಾಗುತ್ತಿದೆ’ ಎಂದರು.

‘ಬಲಿಷ್ಠ ಕೇಂದ್ರ ಸರ್ಕಾರವು ಈಗ ದಮನಕಾರಿ ಮತ್ತು ಸರ್ವಾಧಿಕಾರಿ ಸರ್ಕಾರವಾಗಿ ಬದಲಾಗುತ್ತಿದೆ. ಅಧಿಕಾರವನ್ನು ಕೇಂದ್ರೀಕರಣ ಮಾಡುತ್ತಿದೆ. ಅದರ ಫಲವೇ ಆರ್ಥಿಕ ಕೇಂದ್ರೀಕರಣ. ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಿರುವ ತೆರಿಗೆ ಪಾಲು ಸಿಗುತ್ತಿಲ್ಲ. ಈ ಅನ್ಯಾಯ ಮುಂದುವರಿಯುತ್ತಲೇ ಇದ್ದರೆ, ಈ ವ್ಯವಸ್ಥೆಯಲ್ಲಿ ಏಕೆ ಇರಬೇಕು ಎಂಬ ಪ್ರಶ್ನೆ ಎದುರಾಗುತ್ತದೆ’ ಎಂದರು.

‘ವಿರೋಧ ಪಕ್ಷವೇ ಇರಬಾರದು ಎಂಬ ಮನಃಸ್ಥಿತಿಯಲ್ಲಿ ಈಗಿನ ಕೇಂದ್ರ ಸರ್ಕಾರ ಇದೆ. ಎಲ್ಲೆಡೆ ಡಬಲ್‌ ಎಂಜಿನ್‌ ಸರ್ಕಾರ ಇರಬೇಕು ಎನ್ನುತ್ತಿದೆ. ಇತರ ಪಕ್ಷಗಳ ಚುನಾಯಿತ ಸರ್ಕಾರವನ್ನು ಖರೀದಿಸುತ್ತಿದೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಮೂಲಕ ರಾಜಕೀಯ ಕೇಂದ್ರೀಕರಣ ಮಾಡುತ್ತಿದೆ. ಇದು ಕರ್ನಾಟಕಕ್ಕೆ ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳಿಗೂ ಎದುರಾಗಿರುವ ಗಂಡಾಂತರ. ಇದರ ವಿರುದ್ಧ ನಾವು ಎಚ್ಚೆತ್ತುಕೊಳ್ಳಬೇಕಿದೆ’ ಎಂದರು.

ರಾಜ್ಯಸಭೆಯ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಮಾತನಾಡಿ, ‘ಹಣಕಾಸು ಆಯೋಗವು ರಾಜ್ಯಕ್ಕೆ ನೀಡಿರುವ ತೆರಿಗೆ ಪಾಲೇ ಕಡಿಮೆ ಇದೆ. ಅದನ್ನೂ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಕೊಡುತ್ತಿಲ್ಲ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇದನ್ನು ಪ್ರಶ್ನಿಸಿದವರನ್ನು, ಜಾಮೀನಿಗೆ ಅವಕಾಶವೇ ಇಲ್ಲದ ಯುಎಪಿಎ ಕಾಯ್ದೆ ಅಡಿ ಬಂಧಿಸುತ್ತಿದೆ. ಒಕ್ಕೂಟ ವ್ಯವಸ್ಥೆಯ ಎಲ್ಲ ನೀತಿಗಳನ್ನು ಮುರಿಯುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT