ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ನಿಲ್ಲಲ್ಲ: ಸಚಿವ ಚಲುವರಾಯಸ್ವಾಮಿ

Published : 15 ಆಗಸ್ಟ್ 2024, 13:03 IST
Last Updated : 15 ಆಗಸ್ಟ್ 2024, 13:03 IST
ಫಾಲೋ ಮಾಡಿ
Comments

ಮಂಡ್ಯ: ‘ಗ್ಯಾರಂಟಿ ಯೋಜನೆಯಲ್ಲಿ ಪರಿಷ್ಕರಣೆಯಾಗಬೇಕು ಎಂದು ಕೆಲವು ಸಚಿವರು ಹೇಳುತ್ತಿರಬಹುದು. ಪರಿಷ್ಕರಣೆ ಮಾಡುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಅನುಮೋದನೆ ಪಡೆದ ನಂತರ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಗುರುವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ನಮ್ಮ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಅಲ್ಲಿಯವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಸಿದ್ದರಾಮಯ್ಯನವರು ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಕೆಲವರು ಸುಳ್ಳು ದಾಖಲೆ ಕೊಟ್ಟು ಬಿಪಿಎಲ್‌ ಪಡೆದಿದ್ದಾರೆ. ಇದು ಮೊದಲು ಪರಿಷ್ಕರಣೆಯಾಗಬೇಕು’ ಎಂದರು.

‘ಆಗ, ಗ್ಯಾರಂಟಿ ಯೋಜನೆಗಳು ನಿಂತು ಹೋಗುತ್ತವೆ ಅಂದ್ರು, ಈಗ ಅಭಿವೃದ್ಧಿ ಯೋಜನೆಗಳು ನಡೆಯುತ್ತಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿರುವ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಮಾನ ಮಾರ್ಯಾದೆ ಇದೆಯಾ? ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಬೇಕಾದ ₹3,454 ಕೋಟಿ ಬರ ಪರಿಹಾರ ಕೊಡಿಸಲಿಲ್ಲ. ಹಣೆ ಚಚ್ಚಿಕೊಂಡರೂ ನಮ್ಮ ಮನವಿಗೆ ಅಮಿತ್ ಶಾ ಸ್ಪಂದಿಸಲಿಲ್ಲ. ನಾವು ಸುಪ್ರೀಂ ಮೊರೆ ಹೋಗಿ ಬರ ಪರಿಹಾರ ಬಿಡುಗಡೆ ಮಾಡಿಸಿದೆವು’ ಎಂದರು.

‘2018ರಿಂದ 2023ರವರೆಗೆ ಬಿಜೆಪಿ ಸರ್ಕಾರ ಪ್ರತಿ ವರ್ಷ ನಡೆಸಿದ ಅಭಿವೃದ್ಧಿ ಕಾರ್ಯ ಮತ್ತು ನಮ್ಮ ಸರ್ಕಾರ ಒಂದು ವರ್ಷದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಿ. ಆಗ ಗೊತ್ತಾಗುತ್ತದೆ ಯಾರು ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಅಂತ’ ಎನ್ನುವ ಮೂಲಕ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.

‘ಮೈತ್ರಿಯಿಂದ ಜೆಡಿಎಸ್‌ಗೆ ಲಾಭವಿಲ್ಲ’

ಮೈತ್ರಿಯಿಂದ ಜೆಡಿಎಸ್‌ಗೆ ಲಾಭವಾಗಿಲ್ಲ. ಹಿಂದೆ, ದೇವೇಗೌಡ, ಕುಮಾರಸ್ವಾಮಿ ಮತ್ತು ನಾನು (ಚಲುವರಾಯಸ್ವಾಮಿ) ಮೂವರು ಗೆದ್ದು ಸಂಸದರಾಗಿದ್ದೆವು. ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರವೂ ಜೆಡಿಎಸ್‌ ಗೆದ್ದಿದ್ದು 3 ಸ್ಥಾನ ಮಾತ್ರ. ಬಿಜೆಪಿ‌ ಮುಂದಿನ ಚುನಾವಣೆಯಲ್ಲಿ 40 ಸೀಟ್ ಗೆಲ್ಲುತ್ತದೆ. ಯಡಿಯೂರಪ್ಪ, ಯತ್ನಾಳ್ ಇಬ್ಬರೂ ಬೇರೆ ಆಗ್ತಾರೆ. ಇನ್ನು ಮಹಾನ್ ನಾಯಕ ಕುಮಾರಸ್ವಾಮಿ ಎಷ್ಟು ಗೆಲ್ಲುತ್ತಾರೆ ನೋಡೋಣ?’ ಎಂದು ವ್ಯಂಗ್ಯವಾಡಿದರು.

‘ಬಸನಗೌಡ ಪಾಟೀಲ ಯತ್ನಾಳ್‌ ನೇತೃತ್ವದಲ್ಲಿ ಮೊತ್ತೊಂದು ಪಾದಯಾತ್ರೆ ಹೊರಟಿದೆ. ಅದಕ್ಕೆ ಮೈಸೂರಿನ ಮಾಜಿ ಸಂಸದರು (ಪ್ರತಾಪಸಿಂಹ) ಬೆಂಬಲ ನೀಡಿದ್ದಾರೆ. ಯಾತ್ರೆಗೆ ಇನ್ನೂ ಎಷ್ಟು ಶಾಸಕರು ಸೇರ್ಪಡೆಯಾಗಲಿದ್ದಾರೆ ಎಂಬುದನ್ನು ಕಾದು ನೋಡೋಣ’ ಎಂದರು.

‘ಚನ್ನಪಟ್ಟಣ ಉಪಚುನಾವಣೆ ಗೆಲ್ಲುತ್ತೇವೆ’

ಚನ್ನಪಟ್ಟಣ ಉಪಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಬಿಜೆಪಿ–ಜೆಡಿಎಸ್‌ ಮಧ್ಯೆ ಹಾಗೂ ಯೋಗೇಶ್ವರ್‌ ಮತ್ತು ಜೆಡಿಎಸ್‌ ನಡುವೆ ಗೊಂದಲವಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಜಿಲ್ಲೆ ಅದು. ಅವರು ಸಹ ‘ವರ್ಕೌಟ್‌’ ಮಾಡುತ್ತಿದ್ದಾರೆ’ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

‘ಯೋಗೇಶ್ವರ್‌ ಕಾಂಗ್ರೆಸ್‌ ಪಕ್ಷ ಸೇರುವ ಬಗ್ಗೆ ನನಗೆ ಗೊತ್ತಿಲ್ಲ. ಅವರು ಇನ್ನೂ ಬಿಜೆಪಿ ತೊರೆದಿಲ್ಲ. ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಬೇಕಾ? ಯಾರು ಅಭ್ಯರ್ಥಿಯಾಗಬೇಕು? ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ’ ಎಂದರು.

ಮಂಡ್ಯದ ಮಿಮ್ಸ್‌ನಲ್ಲಿ ₹80 ಲಕ್ಷ ಮೌಲ್ಯದ ಅವಧಿ ಮೀರಿದ ಔಷಧ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲರಿಗೆ ತಿಳಿಸಿದ್ದೇನೆ.
–ಎನ್‌. ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT