ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇ.ಡಿ ಅಧಿಕಾರಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

Published 2 ಫೆಬ್ರುವರಿ 2024, 15:47 IST
Last Updated 2 ಫೆಬ್ರುವರಿ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಚಾರಣೆ ವೇಳೆ ಹೊಡೆದಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.

ಈ ಸಂಬಂಧ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಇಡಿ ಉಪ ನಿರ್ದೇಶಕ ಮನೋಜ್ ಮಿತ್ತಲ್ ಮತ್ತು ಸಹಾಯಕ ನಿರ್ದೇಶಕ ಅಜಯ್ ಕುಮಾರ್‌ ವೈದ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್.ವಿ.ರಾಜು, ‘ವಿಚಾರಣೆ ವೇಳೆ ಇ.ಡಿ ಅಧಿಕಾರಿಗಳು ಪ್ಲಾಸ್ಟಿಕ್ ಪೈಪ್‌ನಲ್ಲಿ ಹೊಡೆದಿದ್ದಾರೆ ಎಂದು ದೂರಲಾಗಿದೆ. ವಾಸ್ತವದಲ್ಲಿ ಇದೊಂದು ಸುಳ್ಳು ದೂರು. ದೂರುದಾರರು ಆರೋಪವನ್ನು ಪುಷ್ಟೀಕರಿಸುವ ಯಾವುದೇ ದಾಖಲೆಯನ್ನೂ ಒದಗಿಸಿಲ್ಲ. ಆದ್ದರಿಂದ, ತನಿಖೆಗೆ ತಡೆ ನೀಡಬೇಕು’ ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ ದೂರುದಾರರೂ ಆದ ಕೊಮುಲ್‌ ನಿರ್ದೇಶಕ ವೈ.ಬಿ.ಅಶ್ವತ್ಥ ನಾರಾಯಣ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?: ‘ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನನ್ನ ವಿಚಾರಣೆ ನಡೆಸುವ ವೇಳೆ ಇ.ಡಿ ಅಧಿಕಾರಿಗಳಾದ ಮನೋಜ್ ಮಿತ್ತಲ್ ಮತ್ತು ಅಜಯ್ ಕುಮಾರ್ ವೈದ್ಯ ಲಾಠಿ ಹಾಗೂ ಪ್ಲಾಸಿಕ್ ಪೈಪ್‌ನಿಂದ ನನಗೆ ಹೊಡೆದಿದ್ದಾರೆ’ ಎಂದು ವೈ.ಬಿ.ಅಶ್ವತ್ಥ ನಾರಾಯಣ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT