ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಅಭಿವೃದ್ಧಿ ಕಾಣದ ಶಾಂತವೇರಿ

ಜನ್ಮ ಶತಮಾನೋತ್ಸವ ಆಚರಣೆಗೆ ರಾಜ್ಯ ಸರ್ಕಾರದಿಂದ ವಿವಿಧ ಕಾರ್ಯಕ್ರಮ
Last Updated 17 ಮಾರ್ಚ್ 2022, 20:21 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ರಾಜ್ಯದ 7.80 ಲಕ್ಷಕ್ಕೂ ಹೆಚ್ಚು ಗೇಣಿದಾರರ ಭೂಮಿಯ ಹಕ್ಕಿಗಾಗಿ ಶ್ರಮಿಸಿದ್ದ ಶಾಂತವೇರಿ ಗೋಪಾಲಗೌಡರ ಜನ್ಮಭೂಮಿ ಇಂದಿಗೂ ಅಭಿವೃದ್ಧಿ ಕಂಡಿಲ್ಲ. ಹುಟ್ಟೂರಿನಲ್ಲಿ ಅವರ ಕುರುಹುಗಳು ಮಾಸಿವೆ.20 ಅಡಿ ಜಾಗದಲ್ಲಿದ್ದ ಹುಲ್ಲಿನ ಗುಡಿಸಲಿನ ನೆಲಗಟ್ಟು, ಒಂದು ಹಳೆಯ ತೆಂಗಿನಮರ ಮಾತ್ರ ಕಾಣಬಹುದು.

ಗೋಪಾಲಗೌಡರ ಸ್ಮರಣೆಗಾಗಿ ಮಲೆನಾಡು ಅಭಿವೃದ್ಧಿ ಮಂಡಳಿಯಿಂದ 2012-13ರಲ್ಲಿ ₹ 5 ಲಕ್ಷ ಮೊತ್ತದಲ್ಲಿ ನಿರ್ಮಾಣವಾದ ಸಮುದಾಯ ಭವನ ಉದ್ಘಾಟನೆಗೂ ಮುನ್ನವೇ ಶಿಥಿಲಾವಸ್ಥೆ ತಲುಪಿದೆ. ಇಂದಿಗೂ ಶಾಂತವೇರಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಸಮುದಾಯ ಭವನದ ಕಟ್ಟಡದ ಪಕ್ಕದಲ್ಲಿ ಸುಮಾರು 1 ಕಿ.ಮೀ ದೂರದ ಆರಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಡಿಯುವ ನೀರು ಪೂರೈಕೆಗೆಂದು 2020ರಲ್ಲಿ ₹ 1.5 ಲಕ್ಷ ವೆಚ್ಚದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಶಾಲೆ ಮತ್ತು ಸ್ಥಳೀಯರಿಗೂ ಈ ಕೊಳವೆಬಾವಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ಗ್ರಾಮದ ಮಹಿಳೆಯರ ದೂರು.

ಪುರಂದರ ದಾಸರ ಹುಟ್ಟೂರು ಆರಗ ಸಮೀಪದ ಕ್ಷೇಮಪುರ ಎಂದು 2018ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇದೇ ನೆಲದಿಂದ ಸ್ವತಃ ಗೋಪಾಲಗೌಡರು,ಪಟ್ಟಮಕ್ಕಿ ರತ್ನಾಕರ್‌ ಆರಿಸಿ ಬಂದಿದ್ದರು.

ಸಮೀಪದ ಕೋಣಂದೂರು ಲಿಂಗಪ್ಪ,‌ ಕಿಮ್ಮನೆ ರತ್ನಾಕರ್ ವಿಧಾನಸಭೆಯಲ್ಲಿ ತೀರ್ಥಹಳ್ಳಿಯನ್ನು ಪ್ರತಿನಿಧಿಸಿದ್ದರು. ಇಲ್ಲಿನವರೇ ಆದಆರಗ ಜ್ಞಾನೇಂದ್ರಗೃಹಸಚಿವರಾಗಿದ್ದಾರೆ.

ಗೋಪಾಲಗೌಡರ ಶತಮಾನೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಪ್ರತಿಷ್ಠಾನ, ಶತಮಾನೋತ್ಸವ ಸಮಿತಿಯ ಮೂಲಕ ಪುಸ್ತಕ ಬಿಡುಗಡೆ, ಮುಂತಾದ ಯೋಜನೆ ಹೊಂದಿದೆ.

*

ಶಾಂತವೇರಿ ಗೋಪಾಲಗೌಡರ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಗುಡಿಸಲು ಹಾಳಾಗಿದೆ. ಗೌಡರದ್ದು ಎನ್ನುವುದಕ್ಕೆ ಕುರುಹುಗಳು ಏನೂ ಉಳಿದಿಲ್ಲ.
– ಶಕುಂತಲಾ, ಗ್ರಾಮಸ್ಥೆ, ಶಾಂತವೇರಿ

*

ಕ್ಷೇತ್ರದಿಂದ ಆಯ್ಕೆಯಾದ ಬಹುತೇಕರು ಗೋಪಾಲಗೌಡರ ಹೆಸರಿನಿಂದ ಚುನಾವಣೆ ನಡೆಸಿದ್ದಾರೆ. ಅವರಲ್ಲಿ ಬದ್ಧತೆ, ಸಿದ್ಧಾಂತಕ್ಕಾಗಿ ಹೋರಾಡುವ ಮನೋಭಾವ ಕಡಿಮೆಯಾಗಿದೆ.
– ನೆಂಪೆ ದೇವರಾಜ್, ಸಮಾಜವಾದಿ ಚಿಂತಕ

*

ಸತ್ಯ, ಪ್ರಾಮಾಣಿಕತೆಯಿಂದ ಗೋಪಾಲಗೌಡರು ಇಟ್ಟ ಹೆಜ್ಜೆ ಗೇಣಿದಾರರ ಬದುಕು ಬದಲಿಸಿದೆ. ಅವರ ಸಮಾಜ ಪರವಾದ ಚಿಂತನೆ ಶಾಶ್ವತವಾದದ್ದು.
– ಎ.ಪಿ. ರಾಮಪ್ಪ, ಹಿರಿಯ ಸಮಾಜವಾದಿ, ಶಾಂತವೇರಿ ಗೋಪಾಲಗೌಡರ ಅಕ್ಕನ ಮಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT