ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ಕಾರ್ಯದರ್ಶಿಗೆ ‘ಬ್ಲ್ಯಾಕ್‌ಮೇಲ್‌’?

ಎಚ್‌ಎಲ್‌ಸಿ ನೇಮಕಕ್ಕೆ ಪಟ್ಟು: ಆಯೋಗದ ಸಭೆಗೆ ಗೈರಾಗುವುದಾಗಿ 6 ಸದಸ್ಯರ ಪತ್ರ
Published 4 ಜನವರಿ 2024, 0:30 IST
Last Updated 4 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಎಸ್‌ಸಿ ಕಾನೂನು ಕೋಶದ ಮುಖ್ಯಸ್ಥ (ಎಚ್‌ಎಲ್‌ಸಿ) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಕಾರ್ಯದರ್ಶಿಯು ನೇಮಕಾತಿ ಆದೇಶ ನೀಡುವವರೆಗೆ ಆಯೋಗದ ಯಾವುದೇ ಸಭೆಗಳಿಗೆ ಹಾಜರಾಗುವುದಿಲ್ಲ ಮತ್ತು ಆಯ್ಕೆ ಪಟ್ಟಿಗಳಿಗೆ ಅನುಮೋದನೆ ನೀಡುವುದಿಲ್ಲವೆಂದು ಆರು ಸದಸ್ಯರು ಅಧ್ಯಕ್ಷರಿಗೆ ಪತ್ರ ನೀಡಿದ್ದಾರೆ.

ಸದಸ್ಯರ ಈ ವರ್ತನೆ, ಕಾರ್ಯದರ್ಶಿಯನ್ನು ‘ಬ್ಲ್ಯಾಕ್‌ಮೇಲ್‌’ ಮಾಡುವ ತಂತ್ರವೆಂದು ಆರೋಪಿಸಿರುವ ಸರ್ಕಾರಿ ಹುದ್ದೆ ಆಕಾಂಕ್ಷಿಗಳು, ‘ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಜೊತೆ ಕೆಪಿಎಸ್‌ಸಿ ಚೆಲ್ಲಾಟವಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆಯೋಗದ ಮೂವರು ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿಯು ಎಚ್‌ಎಲ್‌ಸಿ ಹುದ್ದೆಗೆ ನಿಯಮಾನುಸಾರ ಆಯ್ಕೆ ಪ್ರಕ್ರಿಯೆ ನಡೆಸಿಲ್ಲ. ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳ ಮೌಲ್ಯಮಾಪನ, ಅಂಕಗಳ ಮಾಹಿತಿಯನ್ನು ಸಮಿತಿಯು ನೀಡಿಲ್ಲ ಎಂಬ ಕಾರಣ ನೀಡಿರುವ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರು, ಕಾನೂನು ಕೋಶದ ಮುಖ್ಯಸ್ಥರ ನೇಮಕಾತಿ ಆದೇಶವನ್ನು ಹೊರಡಿಸದೇ, ಕಡತ ವಾಪಸ್ ಕಳುಹಿಸಿದ್ದರು. ಇದು ಕೆಲವು ಸದಸ್ಯರನ್ನು ಕೆರಳಿಸಿದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಕೆಪಿಎಸ್‌ಸಿಯಲ್ಲಿ ಅಧ್ಯಕ್ಷರು ಹಾಗೂ 10 ಸದಸ್ಯರಿದ್ದಾರೆ. ಈ ಪೈಕಿ, ಆರು ಸದಸ್ಯರು ಸಭೆಗೆ ಹಾಜರಾಗುವುದಿಲ್ಲವೆಂದು ಪತ್ರ ನೀಡಿರುವ ಕಾರಣ ಜ. 2ರಂದು ನಡೆಯಬೇಕಿದ್ದ ಆಯೋಗದ ಸಭೆ ನಡೆದಿಲ್ಲ. ಅಲ್ಲದೆ, ಆಯೋಗದ ಉಪ ಸಮಿತಿಗಳ ಸಭೆಯೂ ನಡೆದಿಲ್ಲ.

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಂದು ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಅನುಮೋದನೆಗಾಗಿ ಒಂಬತ್ತಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ಆಯೋಗದ ಸಭೆಗೆ ಕಾರ್ಯದರ್ಶಿ ಈಗಾಗಲೇ ಮಂಡಿಸಿದ್ದಾರೆ. ಅಲ್ಲದೆ, 10ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ಸಲ್ಲಿಸಲು ಸಿದ್ಧಪಡಿಸಿದ್ದಾರೆ. ಆದರೆ, ಆರು ಸದಸ್ಯರ ಈ ನಡೆಯಿಂದಾಗಿ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸುವ ಮತ್ತು ಹಲವು ಆಯ್ಕೆ ಪಟ್ಟಿಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆ ಅತಂತ್ರವಾಗಿದೆ.

ಏನಿದು ಪ್ರಕರಣ?:

ಆಯೋಗದ ಕಾನೂನು ಕೋಶದ ಮುಖ್ಯಸ್ಥರಾಗಿದ್ದ ಎಸ್‌.ಎಚ್‌. ಹೊಸಗೌಡರ್‌ ಅವರು ಹುದ್ದೆ ತ್ಯಜಿಸಿದ ಕಾರಣ ಹೊಸಬರ ನೇಮಕಾತಿಗೆ ಕೆಪಿಎಸ್‌ಸಿಯು ನ. 15ರಂದು ಅಧಿಸೂಚನೆ ಹೊರಡಿಸಿತ್ತು. ಒಟ್ಟು 16 ಅರ್ಜಿಗಳು ಸಲ್ಲಿಕೆ ಆಗಿದ್ದವು. ಈ ಪೈಕಿ ಎರಡು ಅರ್ಜಿಗಳು ಅವಧಿ ಮುಗಿದ ಬಳಿಕ ಸಲ್ಲಿಕೆಯಾಗಿದ್ದವು. ಅಭ್ಯರ್ಥಿಯ ಆಯ್ಕೆಗೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್, ಸದಸ್ಯರಾದ ಬಿ.ವಿ. ಗೀತಾ ಮತ್ತು ಮುಸ್ತಫಾ ಹುಸೇನ್‌ ಸಯ್ಯದ್‌ ಅಜೀಜ್‌ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಸಲ್ಲಿಕೆಯಾದ ಅರ್ಜಿಗಳಲ್ಲಿ ಎರಡು ತಿರಸ್ಕೃತಗೊಂಡಿದ್ದರೆ, ಇಬ್ಬರು ಸಂದರ್ಶನಕ್ಕೆ ಗೈರಾಗಿದ್ದರು. 10 ಅಭ್ಯರ್ಥಿಗಳನ್ನು ಸಮಿತಿಯು ಡಿ. 13ರಂದು ಸಂದರ್ಶನ ಮಾಡಿತ್ತು. ಸಮಿತಿಯು ಆಯ್ಕೆ ಮಾಡಿದ ಅಭ್ಯರ್ಥಿಗೆ ತಕ್ಷಣ ನೇಮಕಾತಿಗೆ ಆದೇಶ ಹೊರಡಿಸುವಂತೆ ಆಯೋಗವು ಕಾರ್ಯದರ್ಶಿಗೆ ಕಡತ ಕಳುಹಿಸಿತ್ತು. 

ಸಭೆಯ ನಡಾವಳಿಯ ಕಡತದಲ್ಲಿ ಆಯ್ಕೆ ಮಾಡಿದ್ದ ಅಭ್ಯರ್ಥಿಯ ಹೆಸರು ಮಾತ್ರ ಇತ್ತು. ಯಾವ ರೀತಿಯಲ್ಲಿ ಸಂದರ್ಶನ ಪ್ರಕ್ರಿಯೆ ನಡೆಸಲಾಯಿತು, ಮೌಲ್ಯಮಾಪನ ವಿಧಾನ, ಅಂಕಗಳನ್ನು ನೀಡಿರುವ ಕುರಿತಂತೆ ಯಾವುದೇ ಮಾಹಿತಿ ಇರಲಿಲ್ಲ. ಸಂದರ್ಶನಕ್ಕೆ ಆಯ್ಕೆಯಾದ ಇತರ ಅಭ್ಯರ್ಥಿಗಳ ಬಗ್ಗೆಯೂ ವಿವರ ಇರಲಿಲ್ಲ. ನಿಯಮಾನುಸಾರ ಸಂದರ್ಶನ ನಡೆದಿಲ್ಲವೆಂಬ ಕಾರಣ ನೀಡಿ ಆಯೋಗಕ್ಕೆ ಕಡತವನ್ನು ಕಾರ್ಯದರ್ಶಿ ಹಿಂದಿರುಗಿಸಿದ್ದರು ಎಂದು ಆಯೋಗದ ಮೂಲಗಳು ತಿಳಿಸಿವೆ. 

ಅಲ್ಲದೆ, ಆಯ್ಕೆ ಪಾರದರ್ಶಕವಾಗಿ ನಡೆಯಬೇಕಾದರೆ ಸಮಿತಿಯಲ್ಲಿ ಒಬ್ಬರು ಮಹಿಳಾ ಪ್ರತಿನಿಧಿ, ಒಬ್ಬರು ಎಸ್‌ಸಿ ಎಸ್‌ಟಿ ಪ್ರತಿನಿಧಿ, ಸದಸ್ಯ ಕಾರ್ಯದರ್ಶಿಯೊಬ್ಬರು ಇರಬೇಕೆಂಬ ನಿಯಮವೂ ಇದೆ ಎಂದೂ ಕಾರ್ಯದರ್ಶಿ ಉಲ್ಲೇಖಿಸಿದ್ದರು ಎಂದೂ ಗೊತ್ತಾಗಿದೆ.

ಕಾರ್ಯದರ್ಶಿಯ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಆಯೋಗದ ಕೆಲವು ಸದಸ್ಯರು, ‘ಆಯೋಗದ ನಿರ್ಣಯವನ್ನು ಪ್ರಶ್ನಿಸುವ ಅಧಿಕಾರ ಕಾರ್ಯದರ್ಶಿಗೆ ಇಲ್ಲ. ಆಯೋಗಕ್ಕಿಂತ ದೊಡ್ಡವರಂತೆ ಅವರು ವರ್ತಿಸುತ್ತಿದ್ದಾರೆ. ಸಮಿತಿ ಆಯ್ಕೆ ಮಾಡಿ, ಆಯೋಗ ನಿರ್ಣಯಿಸಿದ ಅಭ್ಯರ್ಥಿಗೆ ನೇಮಕಾತಿ ಆದೇಶ ಹೊರಡಿಸಬೇಕು ಅಷ್ಟೆ’ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಕಾರ್ಯದರ್ಶಿ ನೇಮಕಾತಿ ಆದೇಶ ಜಾರಿ ಮಾಡುವವರೆಗೂ ಆಯೋಗದ ಸಭೆಗಳಿಂದ ದೂರ ಉಳಿಯಲು ನಿರ್ಧರಿಸಿ ಡಿ. 27ರಂದು ಆರು ಸದಸ್ಯರು ಅಧ್ಯಕ್ಷರಿಗೆ ಪತ್ರ ನೀಡಿದ್ದಾರೆ. ಅದನ್ನು ಅಧ್ಯಕ್ಷರು 28ರಂದು ಕಾರ್ಯದರ್ಶಿಗೆ ನೀಡಿದ್ದಾರೆ ಎಂದೂ ಮೂಲಗಳು ಹೇಳಿವೆ.

20ಕ್ಕೂ ಹೆಚ್ಚು ಅಧಿಸೂಚನೆಗೆ ಕುತ್ತು

‘ಬಿ’ ಗ್ರೂಪ್‌ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ಅಳವಡಿಸಬೇಕೆಂದು ಪಟ್ಟು ಹಿಡಿದಿರುವ ಆಯೋಗ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದೆ. ಸಂದರ್ಶನಕ್ಕೆ ಅನುಮತಿ ಸಿಗುವವರೆಗೆ, ‘ಬಿ’ ಗ್ರೂಪ್‌ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸುವಂತೆ ಕಾರ್ಯದರ್ಶಿ ಮಂಡಿಸಿರುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡದಿರಲು ಆಯೋಗದ ಸದಸ್ಯರು ನಿರ್ಧರಿಸಿದ್ದಾರೆ. ಸಂದರ್ಶನ ಅಳವಡಿಸುವ ಕುರಿತಂತೆ ಸರ್ಕಾರ ನೀಡುವ ನಿರ್ದೇಶನಕ್ಕೆ ಬದ್ಧವೆಂದು ಷರತ್ತು ಹಾಕಿ ಅಧಿಸೂಚನೆ ಹೊರಡಿಸಲು ಕೂಡಾ ಆಯೋಗ ಸಿದ್ಧವಿಲ್ಲ. ಇದರಿಂದಾಗಿ 2 ಸಾವಿರಕ್ಕೂ ಹೆಚ್ಚು ಹುದ್ದೆಗಳ 20ಕ್ಕೂ ಹೆಚ್ಚು ನೇಮಕಾತಿ ಅಧಿಸೂಚನೆ ಪ್ರಸ್ತಾವನೆ
ಗಳು ನನೆಗುದಿಯಲ್ಲಿವೆ ಎಂದೂ ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಆರು ಸದಸ್ಯರ ಪತ್ರದಲ್ಲಿ ಏನಿದೆ?
‘ಕಾರ್ಯದರ್ಶಿ ಅನಾವಶ್ಯಕವಾಗಿ ಆಕ್ಷೇಪವನ್ನು ಸೃಷ್ಟಿ ಮಾಡಿಕೊಂಡು ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಿ ಆಯೋಗದ ನಿರ್ಣಯವನ್ನು ಅಗೌರವಿಸುತ್ತಾರೆ. ಕಾರ್ಯದರ್ಶಿಯವರೇ ಆಯೋಗಕ್ಕಿಂತ ಮೇಲಿನವರು ಎಂಬಂತೆ ವರ್ತಿಸುತ್ತಾರೆ. ಕಾರ್ಯದರ್ಶಿಯವರ ಈ ರೀತಿಯ ವರ್ತನೆ ನಿಯಮದ ಪ್ರಕಾರ ಸರಿಯಾದುದಲ್ಲ. ಆದ್ದರಿಂದ, ಕಾರ್ಯದರ್ಶಿಯು ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಸಮಿತಿ ಶಿಫಾರಸು ಮಾಡಿರುವ ಅಭ್ಯರ್ಥಿಗೆ ನೇಮಕಾತಿ ಆದೇಶ ಜಾರಿ ಮಾಡುವವರೆಗೂ ಈ ಪತ್ರಕ್ಕೆ ಸಹಿ ಹಾಕಿರುವ ನಾವು ಆಯೋಗದ ಸಭೆಗಳಿಗೆ ಹಾಜರಾಗುವುದಿಲ್ಲವೆಂದೂ ಮತ್ತು ಆಯೋಗಕ್ಕೆ ಸಲ್ಲಿಕೆಯಾಗುವ ಯಾವುದೇ ಆಯ್ಕೆ ಪಟ್ಟಿಗಳಿಗೆ ಅನುಮೋದನೆ ನೀಡುವುದಿಲ್ಲವೆಂದು ಅಧ್ಯಕ್ಷರಿಗೆ ಪತ್ರ ನೀಡಿದ್ದೇವೆ’ ಎಂದು ಸಹಿ ಹಾಕಿದ ಸದಸ್ಯರೊಬ್ಬರು ಹೇಳಿದರು. ಪತ್ರಕ್ಕೆ ವಿಜಯಕುಮಾರ್‌ ಡಿ. ಕುಚನೂರೆ, ಎಂ.ಬಿ. ಹೆಗ್ಗಣ್ಣವರ, ಡಾ. ಶಾಂತಾ ಹೊಸಮನಿ, ಡಾ.ಎಚ್‌.ಎಸ್‌. ನರೇಂದ್ರ, ಬಿ.ವಿ. ಗೀತಾ, ಮುಸ್ತಫಾ ಹುಸೇನ್‌ ಸಯ್ಯದ್‌ ಅಜೀಜ್‌ ಸಹಿ ಹಾಕಿದ್ದಾರೆ. ಸದಸ್ಯರಾದ ರೊನಾಲ್ಡ್‌ ಅನಿಲ್‌ ಫರ್ನಾಂಡಿಸ್‌, ಆರ್‌. ಗಿರೀಶ್‌, ಬಿ. ಪ್ರಭುದೇವ, ಶಕುಂತಲಾ ಎಸ್‌. ದುಂಡಿಗೌಡರ್‌ ಸಹಿ ಹಾಕಿಲ್ಲ.
ಸಭೆಗೆ ಹಾಜರಾಗುವುದಿಲ್ಲ, ಆಯ್ಕೆ ಪಟ್ಟಿಗೆ ಅನುಮೋದನೆ ನೀಡುವುದಿಲ್ಲವೆಂದು ಆರು ಸದಸ್ಯರು ಸಹಿ ಹಾಕಿ ಪತ್ರ ನೀಡಿರುವುದು ನಿಜ. ಇದು ಆಂತರಿಕ ವಿಚಾರ. ಈ ಬಗ್ಗೆ ಹೆಚ್ಚೇನೂ ಮಾತನಾಡುವುದಿಲ್ಲ.
-ಕೆ.ಎಸ್‌. ಲತಾಕುಮಾರಿ, ಕಾರ್ಯದರ್ಶಿ, ಕೆಪಿಎಸ್‌ಸಿ
ಕೆಪಿಎಸ್‌ಸಿ ಸದಸ್ಯರ ಬ್ಲ್ಯಾಕ್‌ಮೇಲ್ ತಂತ್ರದಿಂದಾಗಿ ಹಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಜೊತೆ ಆಯೋಗ ಚೆಲ್ಲಾಟವಾಡುತ್ತಿದೆ.
-ಭವ್ಯಾ ನರಸಿಂಹಮೂರ್ತಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT