ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಶಿಸ್ತುಕ್ರಮ: ಇನ್ನಷ್ಟು ಸಿಬ್ಬಂದಿ ವಜಾ

13 ದಿನಗಳನ್ನು ಪೂರೈಸಿದ ಮುಷ್ಕರ; ವಿವಿಧೆಡೆ ಸಾರಿಗೆ ನೌಕರರಿಂದ ಉಪವಾಸ ಸತ್ಯಾಗ್ರಹ
Last Updated 19 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಮುಷ್ಕರ 13 ದಿನಗಳನ್ನು ಪೂರೈಸಿದ್ದು, ಚಳವಳಿನಿರತ ನೌಕರರ ವಿರುದ್ಧ ಶಿಸ್ತುಕ್ರಮದ ಪ್ರಕ್ರಿಯೆಯೂ ಮುಂದುವರಿದಿದೆ. ಸೋಮವಾರ ಮೂರು ನಿಗಮಗಳ ಒಟ್ಟು 518 ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ.

251 ಮಂದಿ ತರಬೇತಿ ಸಿಬ್ಬಂದಿ ಯನ್ನು ವಜಾ ಮಾಡಿರುವುದಾಗಿ ಕೆಎಸ್‌ಆರ್‌ಟಿಸಿ ಪ್ರಕಟಿಸಿದೆ.

ಬಿಎಂಟಿಸಿ 200 ಮಂದಿ ಕಾಯಂ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತು ಹಾಕಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) 67 ನೌಕರರನ್ನು ವಜಾಗೊಳಿಸಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಸೋಮವಾರ ಯಾವುದೇ ನೌಕರರ ವಿರುದ್ಧ ಕ್ರಮ ಜರುಗಿಸಿಲ್ಲ.

ನೌಕರರಿಂದ ಉಪವಾಸ ಸತ್ಯಾಗ್ರಹ: ರಾಜ್ಯದ ಹಲವು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಾರಿಗೆ ನಿಗಮಗಳ ನೌಕರರು ವೇತನ ಪರಿಷ್ಕರಣೆಗೆ ಆಗ್ರಹಿಸಿ ಮಹಾತ್ಮ ಗಾಂಧಿ ಪ್ರತಿಮೆಗಳ ಎದುರು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು. ಬೆಂಗಳೂರಿನಲ್ಲಿ ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ನೌಕರರನ್ನು ವಶಕ್ಕೆ ಪಡೆದ ಪೊಲೀಸರು, ಸಂಜೆ ಬಿಡುಗಡೆ ಮಾಡಿದರು.

ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೋರಾಟದ ನಡುವೆಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು. ಪೊಲೀಸ್‌ ಅಧಿಕಾರಿಗಳೇ ತಮ್ಮನ್ನು ಕರೆದೊಯ್ದು ಗೃಹ ಸಚಿವರನ್ನು ಭೇಟಿ ಮಾಡಿಸಿದ್ದಾರೆ ಎಂದು ಭೇಟಿಯ ಬಳಿಕ ಅವರು ತಿಳಿಸಿದರು.

ಮಾತುಕತೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ‘ಸಾರಿಗೆ ನೌಕರರ ಬೇಡಿಕೆಗಳ ಕುರಿತು ಕೋಡಿಹಳ್ಳಿ ಚಂದ್ರಶೇಖರ್‌ ಪ್ರಸ್ತಾಪ ಮಾಡಿದರು. ಮೊದಲು ನೌಕರರು ಮುಷ್ಕರ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಅವರ ಎಲ್ಲ ಬೇಡಿಕೆಗಳನ್ನೂ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದೇನೆ’ ಎಂದರು.

‘ಕೋವಿಡ್‌ ಕಾರಣದಿಂದ ಹೋರಾಟದ ಸ್ವರೂಪದಲ್ಲಿ ಹೊಸ ಬದಲಾವಣೆಗಳಿಲ್ಲ. ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ಮುಂದುವರಿಸಲಾಗುವುದು. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್‌ ತಿಳಿಸಿದ್ದಾರೆ.

ಏಳು ಬಸ್‌ಗಳಿಗೆ ಹಾನಿ: ಮುಷ್ಕರದ ನಡುವೆಯೂ ಸಂಚರಿಸಿದ ಸಾರಿಗೆ ನಿಗಮಗಳ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಗಳು ಸೋಮವಾರವೂ ನಡೆದಿವೆ. ಸೋಮವಾರ ಏಳು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಮುಷ್ಕರ ಆರಂಭವಾದ ದಿನದಿಂದ ಈವರೆಗೆ ಒಟ್ಟು 112 ಬಸ್‌ಗಳಿಗೆ ಕಲ್ಲು ತೂರಾಟದಿಂದ ಹಾನಿಯಾಗಿದೆ ಎಂದು ಸಾರಿಗೆ ನಿಗಮಗಳ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ಗಳಿಗೆ ಹಾನಿ ಮಾಡಿರುವ ಆರೋಪದಡಿ ಸೋಮವಾರ 16 ಪ್ರಕರಣಗಳನ್ನು ದಾಖಲಿಸಲಾಗಿದೆ. ಬಸ್‌ ಸಂಚಾರಕ್ಕೆ ಅಡ್ಡಿಪಡಿಸಿದವರ ವಿರುದ್ಧ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಅಡಿಯಲ್ಲಿ ಹೊಸದಾಗಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಹಿಂದೆ ದಾಖಲಿಸಿದ್ದ ಪ್ರಕರಣಗಳ ಕೆಲವು ಆರೋಪಿಗಳನ್ನು ರೈತ ಸಂಘದ ಕಚೇರಿಯಿಂದ ಸೋಮವಾರ ಬೆಳಿಗ್ಗೆ ಬಂಧಿಸಿ ಕರೆದೊಯ್ಯಲಾಗಿದೆ.

‘ಸಂಚರಿಸುತ್ತಿರುವ ಬಸ್‌ ಸಂಖ್ಯೆ ಕುರಿತು ಸಂಶಯ’

ಮುಷ್ಕರದ ನಡುವೆಯೂ ಸಂಚಾರ ನಡೆಸುತ್ತಿರುವ ಬಸ್‌ಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಎಂದು ಸಾರಿಗೆ ನಿಗಮಗಳ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈ ಸಂಖ್ಯೆಯ ಕುರಿತು ಸಾರಿಗೆ ನೌಕರರ ಕೂಟದ ಮುಖಂಡರು ಸಂಶಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸಂಜೆಯವರೆಗೆ ನಾಲ್ಕು ನಿಗಮಗಳ ಒಟ್ಟು 6,000 ಬಸ್‌ಗಳು ಸಂಚಾರ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇದು ಸತ್ಯಾಂಶವಲ್ಲ ಎಂದಿರುವ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ಆದಾಯದ ವಿವರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ‘ಒಂದಷ್ಟು ಬಸ್‌ಗಳು ಓಡುತ್ತಿರುವುದು ನಿಜ. ಕೆಲವು ಕಾರ್ಮಿಕ ಸಂಘಟನೆಗಳು ಮುಷ್ಕರದ ಅವಧಿಯಲ್ಲಿ ಬಸ್‌ ಸಂಚಾರಕ್ಕೆ ಬೆಂಬಲ ನೀಡುತ್ತಿವೆ. ಹಿರಿಯ ಅಧಿಕಾರಿಗಳೂ ಚಾಲಕ, ನಿರ್ವಾಹಕರ ಕೆಲಸ ಮಾಡುತ್ತಿದ್ದಾರೆ. ನಿವೃತ್ತರು, ಗುತ್ತಿಗೆ ಸಿಬ್ಬಂದಿಯನ್ನೂ ಬಳಸಲಾಗುತ್ತಿದೆ. ಆದರೆ, ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ ಪ್ರಮಾಣದ ಬಸ್‌ಗಳ ಸಂಚಾರ ನಡೆಯುತ್ತಿಲ್ಲ’ ಎಂದು ಚಂದ್ರಶೇಖರ್ ಹೇಳಿದರು.

ಸಂಧಾನ ಸಭೆ ನಡೆದಿಲ್ಲ: ಲಕ್ಷ್ಮಣ ಸವದಿ

ಬೆಂಗಳೂರು: ಮುಷ್ಕರನಿರತ ಸಾರಿಗೆ ನೌಕರರ ಸಂಘಟನೆಯ ಮುಖಂಡರ ಜತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂಧಾನ ಸಭೆ ನಡೆಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

‘ಕೋಡಿಹಳ್ಳಿ ಚಂದ್ರಶೇಖರ್‌ ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ. ಅಲ್ಲಿ ಯಾವ ಸಂಧಾನವೂ ನಡೆದಿಲ್ಲ. ನೌಕರರ ಸಂಘಟನೆಯ ಮುಖಂಡರು ಸುಳ್ಳು ಸುದ್ದಿ ಹರಿಯಬಿಟ್ಟಿದ್ದಾರೆ’ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.

ಕೋವಿಡ್‌ ಸಂಕಷ್ಟದ ಕಾಲದಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ. ಬಸ್‌ಗಳ ಮೇಲೆ ಕಲ್ಲು ತೂರಾಟ, ಹಾನಿ ಮಾಡುವುದು, ಹಿಂಸಾಚಾರ ಮಾಡುವುದರಿಂದ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕರಪತ್ರಕ್ಕೆ ಆಕ್ಷೇಪ: ಸಭೆಯ ಸಂದರ್ಭದಲ್ಲಿ ತಾವು ಯಾವುದೇ ಭರವಸೆ ನೀಡಿಲ್ಲ. ಕೋಡಿಹಳ್ಳಿ ಚಂದ್ರಶೇಖರ್‌ ತಪ್ಪು ಮಾಹಿತಿಯುಳ್ಳ ಕರಪತ್ರ ಮುದ್ರಿಸಿ, ಹಂಚುವ ಮೂಲಕ ನೌಕರರನ್ನು ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT