ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು, ತಿರುಪತಿಗೆ ಬೆಳಗಾವಿಯಿಂದ ವಿಮಾನ

Last Updated 17 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಿಂದ ಮೈಸೂರು, ತಿರುಪತಿ ಹಾಗೂ ಹೈದರಾಬಾದ್‌ಗೆ ವಿಮಾನಗಳ ಹಾರಾಟ ಕಾರ್ಯಾಚರಣೆಯನ್ನು ಮೆ. ಟ್ರೂಜೆಟ್ ಕಂಪನಿಯು ‘ಉಡಾನ್‌–3’ ಯೋಜನೆಯಡಿ ಶುಕ್ರವಾರದಿಂದ ಆರಂಭಿಸಿತು.

ಇಲ್ಲಿ ಪ್ರಥಮ ಬಾರಿಗೆ ಕಾರ್ಯಾಚರಣೆ ಆರಂಭಿಸಿದ ಟ್ರೂಜೆಟ್‌ ವಿಮಾನಕ್ಕೆ ಅಗ್ನಿಶಾಮಕ ದಳದಿಂದ ವಾಟರ್‌ ಸಲ್ಯೂಟ್’ (ಜಲ ಫಿರಂಗಿ) ಸ್ವಾಗತ ನೀಡಲಾಯಿತು. ಇದರೊಂದಿಗೆ ಇಲ್ಲಿಂದ ಮತ್ತಷ್ಟು ನಗರಗಳಿಗೆ ವಿಮಾನ ಸಂಪರ್ಕ ಸಾಧ್ಯವಾದಂತಾಗಿದೆ.

ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ಕಂಪನಿಯು ಚೆನ್ನೈ, ಪುಣೆ, ಮುಂಬೈ, ಕಡಪ, ನವದೆಹಲಿ ಮೊದಲಾದ ಕಡೆಗಳಿಗೆ ವಿಮಾನ ಹಾರಾಟ ಆರಂಭಿಸಬೇಕು’ ಎಂದು ಕೋರಿದರು.

ಟ್ರೂಜೆಟ್‌ ಕಂಪನಿಯ ಸಿಸಿಒ ಸುಧೀರ್‌ ರಾಘವನ್ ಮಾತನಾಡಿ, ‘ಕಂಪನಿಯು ವಿಮಾನಯಾನ ಉದ್ಯಮದಲ್ಲಷ್ಟೇ ತೊಡಗಿಲ್ಲ. ಸಿಎಸ್‌ಆರ್‌ ಚಟುವಟಿಕೆಗಳ ಮೂಲಕ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುತ್ತಿದೆ. ವೃದ್ಧಾಶ್ರಮ ವಾಸಿಗಳು, ಅನಾಥಾಲಯದ ಮಕ್ಕಳು ಮೊದಲಾದ ಅಶಕ್ತರಿಗೆ ವಿಮಾನ ಹಾರಾಟದ ಅನುಭವ ನೀಡುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ. ಈ ನಗರದಲ್ಲೂ ಇಂತಹ ಚಟುವಟಿಕೆಗಳನ್ನು ನಡೆಸಲಾಗುವುದು’ ಎಂದು ತಿಳಿಸಿದರು.

ವಿಮಾನಿಲ್ದಾಣ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ, ‘ಬೆಳಗಾವಿ ವಿಮಾನನಿಲ್ದಾಣದಿಂದ ಈವರೆಗೆ ಬೆಂಗಳೂರು, ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್‌ಗೆ ವಿಮಾನಗಳಿದ್ದವು. ಈಗ ಸೇರ್ಪಡೆಯಾಗಿರುವ ತಿರುಪತಿ, ಮೈಸೂರು ಹಾಗೂ ಹೈದರಾಬಾದ್‌ಗೆ (ಇನ್ನೊಂದು ವಿಮಾನ) ವಿಮಾನ ಸೇರಿ ಹಲವು ನಗರಗಳಿಗೆ ವಿಮಾನಗಳ ಹಾರಾಟ ಕಾರ್ಯಾಚರಣೆ ಸಾಧ್ಯವಾಗಿದೆ. ಇತ್ಯವೂ ಆಗಮನ-ನಿರ್ಗಮನ ಸೇರಿ ಒಟ್ಟು 24 ಟ್ರಿಪ್‌ಗಳು ಇಲ್ಲಿಂದ ಆಗುತ್ತಿವೆ. ಚಟುವಟಿಕೆಯಿಂದ ಕೂಡಿದ್ದು, ಕ್ರಿಯಾಶೀಲ ವಿಮಾನ ಎನಿಸಿಕೊಂಡಿದೆ. ಇದಕ್ಕೆ ಉಡಾನ್‌–3 ಯೋಜನೆ ಸಹಕಾರಿಯಾಗಿದೆ’ ಎಂದು ಮಾಹಿತಿ ನೀಡಿದರು.

‘ಜ. 20ರಿಂದ ಇಂದೋರ್‌ಗೆ ವಿಮಾನ ಕಾರ್ಯಾಚರಣೆ ಆರಂಭಿಸುವುದಾಗಿ ಮೆ.ಗೋಡಾವತ್‌ ಸಮೂಹ ತಿಳಿಸಿದೆ’ ಎಂದು ಹೇಳಿದರು.

ವಿಮಾನನಿಲ್ದಾಣ ಸಲಹಾ ಸಮಿತಿ ಸದಸ್ಯರಾದ ಭರತ್ ದೇಶಪಾಂಡೆ, ಸುರೇಶ ಕಿಲ್ಲೇಕರ, ವೃತ್ತಿಪರರ ವೇದಿಕೆಯ ಸದಸ್ಯೆ ಡಾ.ನೇತ್ರಾವತಿ ಸಬ್ನಿಸ್ ಹಾಗೂ ಸಿಬ್ಬಂದಿ ಇದ್ದರು.

‘ಟ್ರೂಜೆಟ್ ವಿಮಾನವು (ಟಿ2 548/543) ತಿರುಪತಿಯಿಂದ ಬೆಳಗಾವಿಗೆ ನಿತ್ಯವೂ ಹಾರಾಡಲಿದೆ. ತಿರುಪತಿಯಿಂದ ಬೆಳಿಗ್ಗೆ 9.20ಕ್ಕೆ ಬಂದು, ಮೈಸೂರಿಗೆ 9.40ಕ್ಕೆ ನಿರ್ಗಮಿಸುತ್ತದೆ. ಮೈಸೂರಿನಿಂದ ಬೆಳಗಾವಿಗೆ ಮಧ್ಯಾಹ್ನ 12.40ಕ್ಕೆ ಹೊರಡಲಿದೆ. ಹೈದರಾಬಾದ್ ವಿಮಾನ ಮಧ್ಯಾಹ್ನ 1ಕ್ಕೆ ಹೊರಡಲಿದೆ. ಅಲ್ಲಿಂದ ಸಂಜೆ 5.20ಕ್ಕೆ ಬರಲಿದೆ. ಸಂಜೆ 6ಕ್ಕೆ ಹೈದರಾಬಾದ್‌ಗೆ ನಿರ್ಗಮಿಸಲಿದೆ. 72 ಸೀಟುಗಳ ಈ ಎಟಿಆರ್‌ ವಿಮಾನದಲ್ಲಿ ಮೊದಲ ದಿನವಾದ ಶುಕ್ರವಾರ ತಿರುಪತಿಯಿಂದ 40 ಹಾಗೂ ಮೈಸೂರಿಗೆ 34 ಪ್ರಯಾಣಿಕರು ಪ್ರಯಾಣಿಸಿದರು’ ಎಂದು ರಾಜೇಶ್‌ಕುಮಾರ್‌ ಮೌರ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT