ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುಜಿಸಿಇಟಿ, ಯುಜಿನೀಟ್: ಎರಡನೇ ಸುತ್ತಿನ ಸೀಟು ಹಂಚಿಕೆ ಅಂತಿಮ ಪಟ್ಟಿ ಪ್ರಕಟ

ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಪ್ರವೇಶ ಇಂದಿನಿಂದ
Published : 22 ಸೆಪ್ಟೆಂಬರ್ 2024, 15:50 IST
Last Updated : 22 ಸೆಪ್ಟೆಂಬರ್ 2024, 15:50 IST
ಫಾಲೋ ಮಾಡಿ
Comments

ಬೆಂಗಳೂರು: ಯುಜಿ–ಸಿಇಟಿ ಮತ್ತು ಯುಜಿ–ನೀಟ್‌ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಭಾನುವಾರ ಪ್ರಕಟಿಸಿದೆ. ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳ ಎರಡನೇ ಹಂತದ ಪ್ರವೇಶ ಪ್ರಕ್ರಿಯೆ ಸೋಮವಾರದಿಂದ (ಸೆ.23) ಆರಂಭವಾಗಲಿದೆ.

ವೈದ್ಯಕೀಯ ಕೋರ್ಸ್‌ಗಳನ್ನು ಹೊರತುಪಡಿಸಿ, ಸೀಟು ಹಂಚಿಕೆಯಾದ ಇತರ ಎಲ್ಲ ಕೋರ್ಸ್‌ಗಳ ಅಭ್ಯರ್ಥಿಗಳು ಸೆ.23ರ ಬೆಳಿಗ್ಗೆ 11ರಿಂದ ಸೆ.25ರ ರಾತ್ರಿ 11.59ರವರೆಗೆ ‘ಚಾಯ್ಸ್‌’ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಚಾಯ್ಸ್‌–1 ಮತ್ತು ಚಾಯ್ಸ್‌–2 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಮಾತ್ರ ಸೆ.23ರಿಂದ ಸೆ.26ರ ನಡುವೆ ಶುಲ್ಕ ಪಾವತಿಸಬೇಕು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಚಾಯ್ಸ್‌–1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಸೆ.23ರಿಂದ ಸೆ.26ರ ನಡುವೆ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಂತಹ ಅಭ್ಯರ್ಥಿಗಳು ಸೆ.26ರ ಒಳಗೆ ಆಯಾ ಕಾಲೇಜಿಗೆ ವರದಿ ಮಾಡಿಕೊಂಡು ಪ್ರವೇಶ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.

ವೈದ್ಯಕೀಯ ಕೋರ್ಸ್‌ಗಳಿಗೆ ‘ಚಾಯ್ಸ್‌’ ಆಯ್ಕೆ ಇಲ್ಲ: ‘ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್‌ ಕೋರ್ಸ್‌ಗಳಿಗೆ ಎರಡನೇ ಸುತ್ತಿನಲ್ಲಿ ಚಾಯ್ಸ್‌ ಇರುವುದಿಲ್ಲ. ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಸೆ.24ರಿಂದ ಸೆ.26ರ ನಡುವೆ ಶುಲ್ಕ ಪಾವತಿಸಬೇಕು (ಹಿಂದಿನ ಸುತ್ತಿನಲ್ಲಿ ಪಾವತಿಸಿದ್ದ ಶುಲ್ಕವನ್ನು ಎರಡನೇ ಸುತ್ತಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ). ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಂಡು, ನಿಗದಿತ ದಿನಾಂಕದೊಳಗೆ ಆಯಾ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು’ ಎಂದು ಕೆಇಎ ಹೇಳಿದೆ.

‘ವೈದ್ಯಕೀಯ ಸೀಟಿಗೆ ಪಾವತಿಸಿದ್ದ ಕಾಷನ್ ಡಿಪಾಸಿಟ್ ಅನ್ನು ಈ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿದ್ದರೆ ಮಾತ್ರ ಹೊಂದಾಣಿಕೆ ಮಾಡಲಾಗುವುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮರುಪಾವತಿಸಲಾಗುವುದು. ಆದರೆ, ಹಂಚಿಕೆಯಾದ ಬೇರೆ ಕೋರ್ಸುಗಳಿಗೆ ಇದನ್ನು ಹೊಂದಾಣಿಕೆ ಮಾಡುವುದಿಲ್ಲ. ಹಂಚಿಕೆಯಾಗಿರುವ ವೈದ್ಯಕೀಯ ಸೀಟು ಬೇಡವೆನಿಸಿದಲ್ಲಿ ಸೆ.25 ರ ಸಂಜೆ 5.30ರೊಳಗೆ ಕೆಇಎ ಕಚೇರಿಗೆ ಬಂದು ರದ್ದುಪಡಿಸಿಕೊಳ್ಳಬೇಕು. ಹೀಗೆ ರದ್ದುಪಡಿಸಿಕೊಂಡವರಿಗೆ ಆನ್‌ಲೈನ್ ಮಾಪ್ ಅಪ್ ರೌಂಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು’ ಎಂದು ಕೆಇಎ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT