ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ: ಬಿಜೆಪಿ ನಾಯಕ ಬೊಮ್ಮಾಯಿ

Published 7 ಜನವರಿ 2024, 6:24 IST
Last Updated 7 ಜನವರಿ 2024, 6:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ಸೃಷ್ಟಿಸಿ, ಜನರಲ್ಲಿ ಭಯ ಉಂಟು ಮಾಡುತ್ತಿದೆ' ಎಂದು ಶಾಸಕ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಇದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡದ ದಬ್ಬಾಳಿಕೆ ಸರ್ಕಾರವಾಗಿದೆ. ಅನ್ಯಾಯದ ವಿರುದ್ಧ ಧ್ವನಿ‌ ಎತ್ತಿದರೆ ಪ್ರಕರಣ ದಾಖಲಿಸಿ ಹೆದರಿಸುತ್ತಿದೆ. ಜನರ ಧ್ವನಿಯನ್ನು ಹತ್ತಿಕ್ಕಲು ಮುಂದಾಗುತ್ತಿದೆ. ಸರ್ಕಾರದಲ್ಲಿ ನಡೆದಿರುವ ಹಗರಣಗಳನ್ನು ಮುಚ್ಚಿಡುವ ಹಾಗೂ ದಲಿತ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಕುರಿತು ಮಾತನಾಡದ ಸರ್ಕಾರ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ' ಎಂದರು.

'ರಾಜ್ಯದಲ್ಲಿ ಭಯ ಹುಟ್ಟಿಸುವ ಹಲವಾರು ಘಟನೆಗಳು ಪದೇಪದೇ ನಡೆಯುತ್ತಿವೆ. ಶ್ರೀಕಾಂತ ಪೂಜಾರಿ ವಿರುದ್ಧ ಯಾವುದೇ ಪ್ರಕರಣ ಇಲ್ಲದಿದ್ದರೂ, ಅವರನ್ನು ಬಂಧಿಸಲಾಗಿತ್ತು. ಗಲಭೆ ಪ್ರಕರಣಕ್ಕೆ ಸಂಬಂಧಿಸಿಯೂ ಅವರ ಮೇಲೆ‌ ಪ್ರಕರಣಗಳಿಲ್ಲ. ಪ್ರಕರಣಗಳಿಲ್ಲದೆ ಬಂಧಿಸಿ ಜೈಲಿಗೆ ಕಳುಹಿಸುವುದು ಎಮರ್ಜೆನ್ಸಿಯಲ್ಲಿ ಮಾತ್ರ ಆಗುತ್ತಿತ್ತು. ಅದೇ ಮಾದರಿ ಈಗ ನಡೆಯುತ್ತಿದೆ' ಎಂದರು.

'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬಾರದು ಎನ್ನುವ ಕಾಂಗ್ರೆಸ್ ಕನಸು ಭಗ್ನ ಆಗುತ್ತಿದೆ. ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಆಡಳಿತದ ಎಲ್ಲ‌ ರಾಜ್ಯಗಳಲ್ಲೂ ಹೀಗೆ ಗದ್ದಲ ಆಗುತ್ತಿದೆ' ಎಂದರು.

'ರಾಜ್ಯ ಕಾಂಗ್ರೆಸ್ಸಿಗರ ಅಧಿಕಾರದ ಮದ ಹಾಗೂ ಅಹಂಕಾರದ ವರ್ತನೆಯನ್ನು ಜನ ಬಹಳ ದಿನ ಸಹಿಸುವುದಿಲ್ಲ. ಹೀಗಾಗಿಯೇ ಎಮರ್ಜೆನ್ಸಿ ವಿರುದ್ಧ ಜನ ಸಿಡಿದೆದ್ದು ಬದಲಾವಣೆ ತಂದಿದ್ದು. ಜನವಿರೋಧಿ, ಅಭಿವೃದ್ಧಿ ಶೂನ್ಯ‌, ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ಈ ಕುರಿತು ನಾವು ಸುದೀರ್ಘ ಹೋರಾಟ ಮಾಡುತ್ತೇವೆ.‌ ಜ.‌ 8ರಂದು ಚಿಂತನ ಮಂಥನ ಸಭೆ ನಡೆಯಲಿದ್ದು, ಅಲ್ಲಿ ಈ ಎಲ್ಲ ವಿಷಯಗಳ ಕುರಿತು ಚರ್ಚಿಸುತ್ತೇವೆ' ಎಂದು ತಿಳಿಸಿದರು.

'ಗೋಧ್ರಾ ಮಾದರಿ ದುರಂತ ನಡೆಯಬಹುದು' ಎನ್ನುವ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, 'ಅವರಲ್ಲಿ ಮಾಹಿತಿ ಇದ್ದರೆ ಪೊಲೀಸರಿಗೆ ಕೊಡಬೇಕಿತ್ತು. ಮಾಧ್ಯಮಗಳಿಗೆ ಹೇಳಿಕೆ ನೀಡಿ ಭಯದ ವಾತಾವರಣ ಸೃಷ್ಟಿಸಿರುವುದು ಸರಿಯಲ್ಲ. ಅವರ ಹೇಳಿಕೆ ನಂತರ ಗೃಹ ಸಚಿವರು 'ಹರಿಪ್ರಸಾದ್ ಅವರಲ್ಲಿ ಮಾಹಿತಿ ಇರಬಹುದು, ಸಂದರ್ಭ ಬಂದರೆ ಕೇಳುತ್ತೇವೆ' ಎಂದು ಹೇಳಿಕೆ ನೀಡಿದ್ದು ಅಚ್ಚರಿಯಾಗಿದೆ. ಕಾಂಗ್ರೆಸ್ ತನ್ನ ತಪ್ಪು ಮುಚ್ಚಿಕೊಳ್ಳಲು ಬಿಜೆಪಿಯನ್ನು ಕೋಮುವಾದಿ ಪಕ್ಷ ಎನ್ನುತ್ತದೆ. ನಿಜವಾದ ಕೋಮುವಾದಿ ಪಕ್ಷ ಕಾಂಗ್ರೆಸ್ ಆಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಕೆಜೆ ಹಳ್ಳಿ, ಡಿಜೆ ಹಳ್ಳಿ‌ ಪ್ರಕರಣ ಎಲ್ಲರಿಗೂ ತಿಳಿದಿದೆ. ಅದು ರಾಜ್ಯದ ಮೇಲೆ ನಡೆದ ಯುದ್ಧದಂತೆ ಇತ್ತು. ಅದಕ್ಕಾಗಿ ಪೊಲೀಸರು ಕಟ್ಟುನಿಟ್ಟಿನ‌ ಕ್ರಮ ಕೈಗೊಂಡಿದ್ದರು. ಅದರ ವರದಿಯನ್ನು ಕಾಂಗ್ರೆಸ್ ಸಹ ಒಪ್ಪಿಕೊಂಡಿದೆ. ಅದನ್ನು ಹೇಳದೆ, ಈಗ ಅಮಾಯಕರು ಎಂದು ಹೇಳಿಕೆ ನೀಡುತ್ತಿದೆ. ಇದು ಇಬ್ಬಗೆಯ ನೀತಿಯಾಗಿದೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT