ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವತಂತ್ರ ಧರ್ಮ ಹೋರಾಟಕ್ಕೆ ಒಗ್ಗಟ್ಟಿನ ಮಂತ್ರ

ಜಾಗತಿಕ ಲಿಂಗಾಯತ ಮಹಾಸಭಾದಿಂದ ಅರಿವು ಅಭಿಯಾನ
Last Updated 16 ಸೆಪ್ಟೆಂಬರ್ 2018, 13:51 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮವಾಗಿ ಘೋಷಿಸುವ ಕುರಿತು ಒತ್ತಡ ಹೇರುವ, ಈ ಬಗ್ಗೆ ಹರಡಿರುವ ಅಪಪ್ರಚಾರದ ವಿರುದ್ಧ ಧ್ವನಿಯೆತ್ತುವ ಕುರಿತ ಒಗ್ಗಟ್ಟಿನ ಮಂತ್ರ ನಗರದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾದ ಅರಿವು ಅಭಿಯಾನದಲ್ಲಿ ಕೇಳಿಬಂದಿತು.

‘ಲಿಂಗಾಯತ ಧರ್ಮದ ಬಗ್ಗೆ ಹೋರಾಟ ಆರಂಭವಾದಾಗ ನಾವು ದೇಶದ್ರೋಹಿಗಳು, ಹಿಂದೂ ವಿರೋಧಿಗಳು ಎಂದೆಲ್ಲಾ ಬಿಂಬಿಸಿದರು. ನಾವು ಯಾರ ವಿರೋಧಿಗಳೂ ಅಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಕುರಿತ ಬೇಡಿಕೆ 1920ರಿಂದ 2017ರವರೆಗೆ ಬಂದಿದೆ. ಈಗ ಮೂರನೇ ಬಾರಿ ಹೋರಾಟ ನಡೆಯುತ್ತಿದೆ. ಸ್ವತಂತ್ರ ಧರ್ಮ ಘೋಷಣೆಯ ಪ್ರಸ್ತಾವ ಪದೇಪದೇ ತಿರಸ್ಕಾರಕ್ಕೆ ಒಳಗಾಗುತ್ತಲೇ ಇದೆ. ಈ ನಡುವೆ ಕೆಲವರು ನಮ್ಮನ್ನು ಒಡೆದು ಆಳಲು ಬಂದರು. ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾಗಿರುವುದು ರಾಜಕೀಯ ಕಾರಣಕ್ಕಾಗಿ ಅಲ್ಲವೇ. ಆದರೆ, ನಮ್ಮದು ರಾಜಕೀಯ ಹೋರಾಟ ಅಲ್ಲ. ನಮ್ಮದು ಧರ್ಮದ ಹೋರಾಟ. ಈ ಮಾಹಿತಿಯನ್ನು ನಮ್ಮವರಿಗೆ, ನಮ್ಮ ಹೋರಾಟಟದ ವಿರೋಧಿಗಳಿಗೆ ತಲುಪಿಸಬೇಕು’ ಎಂದು ಮಹಾಸಭಾದ ಅಧ್ಯಕ್ಷ ಎಸ್‌.ಎಂ. ಜಾಮದಾರ್‌ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.

ಕೇಂದ್ರದ ನಡೆ ಮೇಲೆ ಸಂದೇಹ...

‘ರಾಜ್ಯ ಸರ್ಕಾರ ಸ್ವತಂತ್ರ ಧರ್ಮದ ಮಾನ್ಯತೆಯ ಪ್ರಸ್ತಾವವನ್ನು ಕೇಂದ್ರಕ್ಕೆ ಕಳುಹಿಸಿದೆ. ಲಿಂಗಾಯತರ ಮತಗಳು ಕೈ ತಪ್ಪಬಹುದೋ ಎಂಬ ಆತಂಕದಿಂದ ಕೇಂದ್ರವು ಸ್ವತಂತ್ರ ಧರ್ಮದ ಘೋಷಣೆ ಮಾಡುವುದು ಅನುಮಾನ. ಹಿಂದೂಪರ ಶಕ್ತಿಗಳು ಈ ಪ್ರಸ್ತಾವ ಜಾರಿಗೆ ಬರದಂತೆ ಹುನ್ನಾರ ನಡೆಸುತ್ತಲೂ ಇವೆ. ಒಂದು ವೇಳೆ ಈ ಧರ್ಮ ಅಸ್ತಿತ್ವಕ್ಕೆ ಬಂದರೆ ಹಿಂದೂ ಧರ್ಮದ ಲೋಪ ದೋಷಗಳನ್ನು ಒಪ್ಪಿಕೊಂಡಂತಾಗತ್ತದೆ. ಹೀಗೆ ಹಲವು ಅಂಶಗಳ ಹಿನ್ನೆಲೆಯಲ್ಲಿ ಈ ಘೋಷಣೆಗೆ ವಿಳಂಬವಾಗುತ್ತಿದೆ’ ಎಂದು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ ಹೇಳಿದರು.

ವೀರಶೈವ, ಹಿಂದೂ ಎಂಬುದು ಧರ್ಮವೇ ಅಲ್ಲ

‘ವೀರಶೈವ ಅನ್ನುವುದು ಧರ್ಮ ಅಲ್ಲ. ಅದೊಂದು ಮತ. ಅದು ಸ್ವಲ್ಪ ಹಿಂದೂ ಧರ್ಮ ಮತ್ತು ಸ್ವಲ್ಪ ಲಿಂಗಾಯತ ಧರ್ಮದ ಅಂಶಗಳನ್ನು ಅಳವಡಿಸಿಕೊಂಡು ಬಂದಿದೆ. ವಾಸ್ತವವಾಗಿ ಹಿಂದೂ ಎನ್ನುವುದೂ ಧರ್ಮ ಅಲ್ಲ. ಅದು ಭೌಗೋಳಿಕತೆ ಸೂಚಿಸುವ ಶಬ್ದ. ಸಿಂಧೂ ನದಿಯ ಪ್ರಾಂತ್ಯದಲ್ಲಿನ ನಿವಾಸಿಗಳೆಲ್ಲರೂ ಹಿಂದೂಗಳು ಎಂದು ಬ್ರಿಟೀಷರು, ಪರ್ಷಿಯನ್ನರು ಕರೆದರು. ಹೀಗೆ ಬೌಗೋಳಿಕ ದೃಷ್ಟಿಯಲ್ಲಿ ನೋಡಿದರೆ ಎಲ್ಲರೂ ಹಿಂದೂಗಳು. ಆದರೆ, ವೈದಿಕರು ವೈದಿಕ ಆಚರಣೆಗಳನ್ನು ಒಳಗೊಂಡ ಧರ್ಮವನ್ನೇ ಹಿಂದೂ ಧರ್ಮ ಎಂದು ಪರಿವರ್ತಿಸಿಕೊಂಡರು’ ಎಂದು ಸ್ವಾಮೀಜಿ ಹೇಳಿದರು.

ಚಿಂತಕ ಗೊ.ರು.ಚನ್ನಬಸಪ್ಪ ಮಾತನಾಡಿ, ‘ಲಿಂಗಾಯತ ಎಂಬುದು ಸ್ವತಂತ್ರ ಧರ್ಮ. ಅದು ವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕವೇ ಹುಟ್ಟಿಕೊಂಡಿದೆ. ಮುಂದೆ ಈ ಸಮುದಾಯದವರು ಬಸವಣ್ಣನ ತತ್ವಗಳ ಹಾದಿಯಲ್ಲಿ ನಡೆಯಬೇಕಿತ್ತು ಎಂಬ ಆಶಯ ಇತ್ತು. ಆದರೆ, ನಾನು ಆ ಪ್ರಯತ್ನದಲ್ಲಿ ಸೋತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾನತೆ ಸ್ವಾಮಿಗಳಲ್ಲೂ ಬರಲಿ...: ಲಿಂಗಾಯತ ಧರ್ಮ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಈ ಸಮಾನತೆ ಸ್ವಾಮೀಜಿಗಳಲ್ಲೂ ಬರಬೇಕು. ಪಾದಪೂಜೆ, ಪಾದಮುಟ್ಟಿ ನಮಸ್ಕಾರ ಮಾಡುವುದು, ಸ್ವಾಮಿಗಳ ಪಾದ ತೊಳೆದು ಪಾದೋದಕ ಸೇವನೆ ಮಾಡುವುದು ನಿಲ್ಲಬೇಕು. ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳಬೇಡಿ. ನಮ್ಮ ಪ್ರಚಾರ ಧನಾತ್ಮಕವಾಗಿರಲಿ. ನಾವು ವೈದಿಕ ಧರ್ಮದ ನುಡಿಗಟ್ಟುಗಳನ್ನು ಬಳಸಬಾರದು. ನಮ್ಮದೇ ಆದ ನುಡಿಗಟ್ಟುಗಳು ಇರಲಿ. ನಾವು ಯಾವ ವರ್ಣಕ್ಕೂ ಸೇರಿದವರಲ್ಲ. ನಾವು ಲಿಂಗಾಯತರು ಎಂದು ಅಷ್ಟೇ ಹೇಳಿಕೊಳ್ಳೋಣ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಲಿಂಗಾಯತ ಹೋರಾಟ: ಪ್ರಶ್ನೆ –ಪರಿಹಾರ ಹೆಸರಿನ ಕಿರುಹೊತ್ತಿಗೆ, ಲಿಂಗಾಯತ ಹೋರಾಟ ಹಿಂದೂ ವಿರೋಧಿಯೇ ಮತ್ತು ದೇಶ ವಿರೋಧಿಯೇ ಹೆಸರಿನ ಕರಪತ್ರ, ವೆಬ್‌ಸೈಟ್‌ ಬಿಡುಗಡೆ ಮಾಡಲಾಯಿತು.

ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT