ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮ ಹಗರಣ | ₹ 10 ಕೋಟಿ ಮುಟ್ಟುಗೋಲು; ತಲೆಮರೆಸಿಕೊಂಡ ಆರೋಪಿಗಳಿಗೆ ಶೋಧ

ಖಾತೆದಾರರಿಗೆ ಕಮಿಷನ್‌ ನೀಡಿ ಹಣ ಡ್ರಾ, ತಲೆಮರೆಸಿಕೊಂಡ ಆರೋಪಿಗಳಿಗೆ ಶೋಧ
Published 29 ಜೂನ್ 2024, 23:30 IST
Last Updated 29 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಹಿರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸರು, ಚಿನ್ನಾಭರಣ, ಹೋಟೆಲ್‌ ಹಾಗೂ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ ಮಾಲೀಕರ ಖಾತೆಗಳೂ ಸೇರಿ ಒಟ್ಟು 197 ಖಾತೆಗಳಿಂದ ಅಂದಾಜು ₹10 ಕೋಟಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಆರೋಪಿಗಳಿಂದ ₹14 ಕೋಟಿ, ಬ್ಯಾಂಕ್‌ಗಳಲ್ಲಿ ₹10 ಕೋಟಿ ಮುಟ್ಟುಗೋಲು ಹಾಗೂ ₹4 ಕೋಟಿ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದು, ಇದುವರೆಗೂ ಈ ಪ್ರಕರಣದಲ್ಲಿ ₹28 ಕೋಟಿ ಜಪ್ತಿ ಮಾಡಿಕೊಂಡಂತೆ ಆಗಿದೆ ಎಂದು ಎಸ್‌ಐಟಿ ಪೊಲೀಸರು ಹೇಳಿದರು.

ಹೈದರಾಬಾದ್‌ಗೆ ತೆರಳಿರುವ ಎಸ್‌ಐಟಿ ಪೊಲೀಸರು ಮತ್ತೊಬ್ಬ ಆರೋಪಿ ಶ್ರೀನಿವಾಸ್‌ ಎಂಬುವವರನ್ನು ಬಂಧಿಸಿದ್ದಾರೆ. ಶ್ರೀನಿವಾಸ್‌ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆ ಆಗಿದೆ. ಕಳೆದ ವಾರ ಬಂಧಿಸಿರುವ ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಾಯಿತೇಜ ಹಾಗೂ ತೇಜ ತಮ್ಮಯ್ಯ ಅವರನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಕಾರ್ತಿ ಶ್ರೀನಿವಾಸ್‌ ಎಂಬಾತ ತಲೆಮರೆಸಿಕೊಂಡಿದ್ದು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಹೈದರಾಬಾದ್‌ನ ‘ಫಸ್ಟ್‌ ಫೈನಾನ್ಸ್ ಕ್ರೆಡಿಟ್ ಕೋ– ಆಪರೇಟಿವ್‌ ಸೊಸೈಟಿ’ಯ (ಎಫ್‌ಎಫ್‌ಸಿಸಿಎಸ್‌ಎಲ್‌) ವಿವಿಧ ಖಾತೆಗಳಿಗೆ ವಾಲ್ಮೀಕಿ ನಿಗಮದ ಖಾತೆಯಿಂದ ₹94.73 ಕೋಟಿ ಹಣ ವರ್ಗಾವಣೆ ಆಗಿತ್ತು. ಈ ಬ್ಯಾಂಕ್‌ನ ಖಾತೆಯಿಂದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್, ಚಿನ್ನಾಭರಣ ಅಂಗಡಿ, ಹೋಟೆಲ್‌ ಮಾಲೀಕರು ಹಾಗೂ ಕೆಲವು ಕಂಪನಿಗಳ ಮಾಲೀಕರ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದನ್ನು ಪತ್ತೆ ಹಚ್ಚಲಾಗಿದ್ದು, ಈ ಖಾತೆಗಳಿಂದ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಖಾತೆಗಳಲ್ಲಿನ ವ್ಯವಹಾರ ಸ್ಥಗಿತಗೊಳಿಸಲಾಗಿದೆ. ಕಂಪನಿಗಳ ಮಾಲೀಕರನ್ನು ವಿಚಾರಣೆ ನಡೆಸಲಾಗಿದೆ’ ಎಂದು ಎಸ್‌ಐಟಿ ಪೊಲೀಸರು ಹೇಳಿದರು.

‘ಎಫ್‌ಎಫ್‌ಸಿಸಿಎಸ್‌ಎಲ್‌ ಅಧ್ಯಕ್ಷ ಸತ್ಯನಾರಾಯಣ ಹಾಗೂ ಮಧ್ಯವರ್ತಿಗಳಾದ ಸತ್ಯನಾರಾಯಣ ವರ್ಮಾ, ಚಂದ್ರಮೋಹನ್ ಹಾಗೂ ಜಗದೀಶ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವ ವಿಚಾರವನ್ನು ಬಾಯ್ಬಿಟ್ಟಿದ್ದರು. ಆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಫ್‌ಎಫ್‌ಸಿಸಿಎಸ್‌ಎಲ್‌ ಸೇರಿದಂತೆ ಕೆಲವು ಖಾತೆಗಳಲ್ಲಿ ₹45 ಕೋಟಿ ಹಣವಿದ್ದು ಆ ಹಣವನ್ನು ಡ್ರಾ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ’ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.  

‘ಖಾತೆಗಳಿಗೆ ₹5 ಲಕ್ಷ, ₹10 ಲಕ್ಷ ಹಾಗೂ ₹20 ಲಕ್ಷದಂತೆ ವರ್ಗಾವಣೆ ಮಾಡಲಾಗಿದೆ. ಖಾತೆದಾರರಿಗೆ ಕಮಿಷನ್‌ ನೀಡಿ ಹಣವನ್ನು ನಗದು ರೂಪದಲ್ಲಿ ಆರೋಪಿಗಳು ಪಡೆದುಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಇಡೀ ಪ್ರಕರಣದ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ. ಎಫ್‌ಎಫ್‌ಸಿಸಿಎಸ್‌ಎಲ್‌ ಅಧ್ಯಕ್ಷರ ಜತೆಗೆ ಇವರು ಸೇರಿಕೊಂಡು ಕೃತ್ಯ ಎಸಗಿದ್ದಾರೆ. ಇದೇ ರೀತಿಯ ವಂಚನೆಯನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ವರ್ಮಾ ನಡೆಸಿದ್ದು ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT