ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮ ಹಗರಣ |ನಾಗೇಂದ್ರ ಆಪ್ತರಿಂದ ಜೀವ ಬೆದರಿಕೆ: ವರ್ಮಾ ಆರೋಪ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ
Published 27 ಜೂನ್ 2024, 0:29 IST
Last Updated 27 ಜೂನ್ 2024, 0:29 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತರ ಕಡೆಯಿಂದ ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಇದೆ’ ಎಂದು ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ’ದಲ್ಲಿನ ಬಹುಕೋಟಿ ಹಗರಣದ ಆರೋಪಿ ಸತ್ಯನಾರಾಯಣ ವರ್ಮಾ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯನಾರಾಯಣ ವರ್ಮಾ ಅವರನ್ನು ಎಸ್‌ಐಟಿ ಪೊಲೀಸರು ನಗರದ 3ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ನ್ಯಾಯಾಲಯದ ನ್ಯಾಯಾಧೀಶ ಶ್ರೇಯಾಂಶ್‌ ದೊಡ್ಡಮನಿ ಅವರ ಮುಂದೆ ಬುಧವಾರ ಹಾಜರುಪಡಿಸಿದ್ದರು.

ವಿಚಾರಣೆ ವೇಳೆ ಆರೋಪಿ ಸತ್ಯನಾರಾಯಣ ವರ್ಮಾ, ‘ಎಸ್‌ಐಟಿ ಪೊಲೀಸರು ನನ್ನನ್ನು ಬಂಧಿಸುವುದಕ್ಕೂ ಮುನ್ನ ಬಿ.ನಾಗೇಂದ್ರ ಅವರ ಸಹಚರರು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದರು. ಅಂತೆಯೇ, ಕೋರ್ಟ್‌ನಿಂದ ಹೊರಗೆ ಕರೆದೊಯ್ಯುತ್ತಿದ್ದ ವೇಳೆ ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್‌ ನನ್ನ ಮೇಲೆ ಹಲ್ಲೆ ನಡೆಸುವ ಪ್ರಯತ್ನ ಮಾಡಿದ್ದರು’ ಎಂದು ಆರೋಪಿಸಿದರು.

ಈ ಹೇಳಿಕೆಯನ್ನು ದಾಖಲು ಮಾಡಿಕೊಂಡ ನ್ಯಾಯಾಧೀಶರು, ‘ವರ್ಮಾ ಅವರ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸಿ’ ಎಂದು ಹಲಸೂರು ಗೇಟ್‌ ಠಾಣೆಯ ಪೊಲೀಸರಿಗೆ ಆದೇಶಿಸಿದ್ದಾರೆ. ಸತ್ಯನಾರಾಯಣ ವರ್ಮಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

13ನೇ ಆರೋಪಿ: 

ಹಗರಣದ 13ನೇ ಆರೋಪಿಯಾಗಿರುವ ವರ್ಮಾ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಿ ಅವರಿಂದ ₹8.21 ಕೋಟಿ ನಗದು ಜಪ್ತಿ ಮಾಡಲಾಗಿದೆ. ‘ರಾಜ್ಯದ ಹಲವು ಅಧಿಕಾರಿಗಳು ಹಾಗೂ ರಾಜಕಾರಣಿಗಳ ಜೊತೆ ಒಡನಾಟ ಇಟ್ಟುಕೊಂಡಿದ್ದ ಇವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನಕಲಿ ಕಂಪನಿಗಳ ಹೆಸರಿನಲ್ಲಿನ ಖಾತೆಗಳಿಗೆ ಹಾಕಿಸಿಕೊಂಡು, ಲಾಭ ಮಾಡಿಕೊಳ್ಳುವ ಕೃತ್ಯದಲ್ಲಿ ತೊಡಗಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT