ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಓಘದಲ್ಲಿ ಹೇಳಿರಬಹುದು: ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟನೆ

Last Updated 15 ಜುಲೈ 2019, 16:04 IST
ಅಕ್ಷರ ಗಾತ್ರ

ತುಮಕೂರು: ‘ಮದುವೆಯ ತೀರ್ಮಾನ ಕೈಗೊಳ್ಳುವಾಗ ಪೋಷಕರ ಅಭಿಪ್ರಾಯಗಳನ್ನು ಗೌರವಿಸಿ, ದುಡುಕಿ ತೀರ್ಮಾನ ಕೈಗೊಂಡು ಜೀವನ ಹಾಳು ಮಾಡಿಕೊಳ್ಳಬೇಡಿ ಎಂಬ ಸಂದೇಶ ನೀಡುವಾಗ ಮಾತಿನ ಓಘದಲ್ಲಿ ಉದಾಹರಣೆಯೊಂದನ್ನು ತಪ್ಪಾಗಿ ಹೇಳಿರಬಹುದು’ ಎಂದು ಸಿದ್ದರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

‘ನಮ್ಮ ಮಾತುಗಳು ತಪ್ಪಾಗಿ ಅರ್ಥವಾಗಿರಬಹುದು. ಇಲ್ಲವೇ ನಮ್ಮ ಸಂವಹನದಲ್ಲಿ ಲೋಪವಾಗಿರಬಹುದು. ಉದ್ದೇಶಪೂರ್ವಕವಾಗಿ ವರದಿಯಾಗಿರುವ ರೀತಿ ಮಾತನಾಡಿಲ್ಲ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಇದರಿಂದ ನಮಗೂ ಸಹ ನೋವಾಗಿದೆ. ಈ ಬಗ್ಗೆ ವಿಚಾರಿಸಿದ ಹಿರಿಯ ಸ್ವಾಮೀಜಿಗಳಲ್ಲಿ ಕ್ಷಮೆ ಕೋರಿದ್ದೇವೆ. ಕಡೆಯದಾಗಿ, ನಮ್ಮಿಂದ ಸಾರ್ವಜನಿಕರಿಗೆ ನೋವಾಗಿದ್ದಲ್ಲಿ ವಿಷಾದಿಸುತ್ತೇವೆ’ ಎಂದು ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘ಪೋಷಕರೊಬ್ಬರು ಎಸ್‌.ಎಸ್‌.ಎಲ್‌.ಸಿ. ಓದುತ್ತಿದ್ದ ಮಗಳನ್ನು ಒಂದು ದಿನ ಕರೆತಂದಿದ್ದರು. ಯಾರನ್ನೋ ಪ್ರೀತಿಸುತ್ತಿರುವುದಾಗಿ, ಅವನನ್ನೆ ಮದುವೆ ಆಗುವುದಾಗಿ ಹಠ ಮಾಡುತ್ತಿದ್ದಳು. ಆಗ ಹುಡುಗಿಯ ತಂದೆ, ‘ಇವಳು ಹೀಗೆಯೇ ಹಠ ಮಾಡಿದರೆ ಕೈ–ಕಾಲು ಮುರಿದು ಕೂರಿಸ್ತೆವೆ, ಇಲ್ಲವೇ ನಾವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ನಮ್ಮ ಬಳಿ ಹೇಳಿದರು. ತಂದೆಯ ಮಾತನ್ನೆ ಹುಡುಗಿಗೆ ಹೇಳಿದ್ದೆವು. ಅದಕ್ಕೂ ಆಕೆ ಜಗ್ಗಲಿಲ್ಲ. ಮಗಳನ್ನು ದಂಡಿಸಬೇಡಿ ಎಂದು ಪೋಷಕರನ್ನು ಸಮಾಧಾನ ಪಡಿಸಿ, ವಯಸ್ಸಿಗೆ ಬಂದಾಗ ಮದುವೆ ಮಾಡಿಕೊಡಿ ಎಂದು ಹೇಳಿ ಕಳುಹಿಸಿದ್ದೆವು. ಅದು ಹಾಗೆಯೇ ಆಯಿತು’ ಎಂದು ಪ್ರಕಟಣೆಯಲ್ಲಿ ವಿವರ ನೀಡಿದ್ದಾರೆ.

‘ಇದಿಷ್ಟು ನಾವು ಹೇಳಬೇಕಿದ್ದ ವಿಚಾರ ಮತ್ತು ನಮ್ಮ ಮನಸ್ಸಿನಲ್ಲಿದ್ದ ವಿಷಯ. ಮಾತಿನ ಓಘದಲ್ಲಿ ತಪ್ಪಾಗಿ ಹೇಳಿರಬಹುದು’ ಎಂದು ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ತುಮಕೂರು ಜಿಲ್ಲಾ ವೀರಶೈವ–ಲಿಂಗಾಯತ ಸೇವಾ ಸಮಿತಿ ಜುಲೈ 14ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿ, ‘ಪೋಷಕರ ಮಾತು ಕೇಳದೆ, ಇಷ್ಟದ ಹುಡುಗಗನ್ನೆ ಮದುವೆ ಆಗುವುದಾಗಿ ಹಠ ಹಿಡಿದಿದ್ದ ಮಗಳ ಕೈಯೋ–ಕಾಲೋ ಮುರಿದು ಮನೆಯಲ್ಲಿ ಕೂರಿಸಿ ಎಂದು ಸಲಹೆ ನೀಡಿದ್ದೇನೆ’ ಎಂದು ಭಾಷಣದಲ್ಲಿ ಉದಾಹರಣೆಯೊಂದನ್ನು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT