ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ‘ ವರದಿಗೂ ಎಚ್ಚೆತ್ತುಕೊಳ್ಳದ ಸರ್ಕಾರ: ಕೋಟ ಶ್ರೀನಿವಾಸ ಪೂಜಾರಿ

ರದ್ದಾದ 313 ಹುದ್ದೆಗೆ ಬಡ್ತಿ ವಿಷಯ ಪ್ರಸ್ತಾಪಿಸಿದ ಕೋಟ ಶ್ರೀನಿವಾಸ ಪೂಜಾರಿ
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಾಲ್ಕು ವರ್ಷಗಳ ಹಿಂದೆಯೇ ರದ್ದುಗೊಂಡಿದ್ದ 313 ನಿಲಯ ಪಾಲಕರ (ಹಾಸ್ಟೆಲ್‌ ವಾರ್ಡನ್‌) ಹುದ್ದೆಗಳಿಗೆ ನಿಯಮಬಾಹಿರವಾಗಿ ಬಡ್ತಿ ನೀಡಿದ್ದ ಪ್ರಕರಣ ಸರ್ಕಾರದ ಕಾರ್ಯವೈಖರಿಗೆ ಸಾಕ್ಷಿ. ‘ಪ್ರಜಾವಾಣಿ’ ವರದಿ, ಸಂಪಾದಕೀಯಕ್ಕೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಹಿಂದಿನ ಸರ್ಕಾರದ ಅವಧಿಯಲ್ಲೇ ಬಡ್ತಿ ಪ್ರಸ್ತಾವ ಬಂದಿತ್ತು. ಅಂದು ಸಚಿವನಾಗಿದ್ದ ನಾನು ತಿರಸ್ಕರಿಸಿದ್ದೆ. ಸಂಪುಟ ಸಭೆಯ ಮುಂದೆ ಮಂಡಿಸುವಂತೆ ಸೂಚಿಸಿದ್ದೆ. ಅಷ್ಟರಲ್ಲಿ ಚುನಾವಣೆ ಬಂತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಸಂಪುಟ ಸಭೆಯ ಒಪ್ಪಿಗೆ ಪಡೆಯದೇ ಹುದ್ದೆಗಳನ್ನು ಮರು ಸೃಜಿಸಿ ತರಾತುರಿಯಲ್ಲಿ ಬಡ್ತಿ ನೀಡಿತು. ಈ ಕುರಿತು ಆಗಸ್ಟ್‌ನಲ್ಲೇ ‘ಪ್ರಜಾವಾಣಿ’ಯು ವರದಿ ಹಾಗೂ ಸಂಪಾದಕೀಯ ಬರೆದು ಎಚ್ಚರಿಸಿತ್ತು’ ಎಂದು ವರದಿಗಳನ್ನು ಪ್ರದರ್ಶಿಸಿದರು. 

ಸರ್ಕಾರ ತಪ್ಪು ತಿದ್ದಿಕೊಳ್ಳಲಿಲ್ಲ. ಈಗ ಹುದ್ದೆಗಳಿಗೆ ನೀಡಿದ್ದ ಬಡ್ತಿಯನ್ನು ರದ್ದುಪಡಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಹೊರಡಿಸಿದೆ. ಅರ್ಜಿದಾರರಿಗೆ ತಲಾ ₹5 ಸಾವಿರ ಪರಿಹಾರ ನೀಡಲು ಸೂಚಿಸಿದೆ. ಇದೇನಾ ನಿಮ್ಮ ಪಾರದರ್ಶಕ ಆಡಳಿತ ಎಂದು ಪ್ರಶ್ನಿಸಿದರು.

ಮಹಾಭಾರತ ಯುದ್ಧದಲ್ಲಿ ದುರ್ಯೋಧನನಿಂದ ‘ಅಶ್ವತ್ಥಾಮ ಹತಃ..ಕುಂಜರಹ’ ಹೇಳಿಸಿದಂತೆ ಸತ್ಯವಂತ ರಾಜ್ಯಪಾಲರಿಂದ ಸರ್ಕಾರ ಹಲವು ಸುಳ್ಳುಗಳನ್ನು ಹೇಳಿಸಿದೆ ಎಂದು ಟೀಕಿಸಿದರು.

ಚರ್ಚೆಗೆ ನಾಂದಿಯಾದ ‘ಹಾಲುವರ್ತಿ’ ಘಟನೆ:

ಪರಿಶಿಷ್ಟರ ಅನುದಾನ ಬಳಕೆ ಕುರಿತು ಮಾತನಾಡುವಾಗಲೂ ‘ಪ್ರಜಾವಾಣಿ’ಯ ಫೆ.15ರ ಸಂಚಿಕೆಯಲ್ಲಿ ಪ್ರಕಟವಾದ ಕೊಪ್ಪಳ ತಾಲ್ಲೂಕಿನ ಹಾಲುವರ್ತಿ ಗ್ರಾಮದಲ್ಲಿ ದಲಿತರಿಗೆ ಹೋಟೆಲ್‌, ಕ್ಷೌರದ ಅಂಗಡಿಗಳಲ್ಲಿ ಪ್ರವೇಶ ನಿರಾಕರಣೆ ಕುರಿತ ಲೇಖನ ಪ್ರದರ್ಶಿಸಿದರು.

ಇಂತಹ ನಡವಳಿಕೆಗಳಿಗೆ ಮನು ಸಂಸ್ಕೃತಿ ಅನುಸರಣೆ ಕಾರಣ ಎಂಬ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಮತ್ತು ಉಮಾಶ್ರೀ ಅವರ ಹೇಳಿಕೆ ಬಿಜೆಪಿ–ಕಾಂಗ್ರೆಸ್‌ ಮಧ್ಯೆ ವಾಗ್ವಾದ ಹುಟ್ಟು ಹಾಕಿತು.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಪುರಿ ದೇವಸ್ಥಾನದ ಪ್ರವೇಶ ನಿರಾಕರಣೆ, ದ್ರೌಪದಿ ಮುರ್ಮು ಅವರನ್ನು ಆಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನಿಸದೇ ಇರುವುದು ಯಾವ ಪದ್ಧತಿ? ಇಂತಹ ಆಚರಣೆಗಳ ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಗಾಂಧಿ ಕೊಂದ ಗೋಡ್ಸೆ ಆರಾಧಕರು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಆರೋಪಿಸಿದರು. 

‘ನಿಮ್ಮದು ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್‌ ಅಲ್ಲ, ಈಗ ಸೋನಿಯಾ ಕಾಂಗ್ರೆಸ್‌. ಮಹಾತ್ಮಾ ಗಾಂಧಿ ಬೇರೆ, ನಿಮ್ಮ ಸೋನಿಯಾ ಗಾಂಧಿ ಬೇರೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT