ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ನೀಡಲು ನಿಯಮ ಉಲ್ಲಂಘನೆ

136 ಅಧಿಕಾರಿಗಳ ಬಡ್ತಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ತರಾತುರಿ ಪ್ರಕ್ರಿಯೆ
Published 4 ಜನವರಿ 2024, 23:50 IST
Last Updated 4 ಜನವರಿ 2024, 23:50 IST
ಅಕ್ಷರ ಗಾತ್ರ

ಬೆಂಗಳೂರು: ರದ್ದುಗೊಂಡಿದ್ದ 312 ನಿಲಯ ಪಾಲಕರ (ಹಾಸ್ಟೆಲ್‌ ವಾರ್ಡನ್‌) ಹುದ್ದೆಗಳಿಗೆ ಐದು ತಿಂಗಳ ಹಿಂದೆ ಬಡ್ತಿ ನೀಡಿ ವಿವಾದಕ್ಕೆ ಒಳಗಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಈಗ ಅರ್ಹತೆ ಪಡೆಯದ 136 ಮಂದಿಗೆ ತಾಲ್ಲೂಕು ಕಲ್ಯಾಣಾಧಿಕಾರಿಗಳ ಹುದ್ದೆಗೆ ಬಡ್ತಿ ನೀಡಲು ಮುಂದಾಗಿದೆ.

‘ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇವಾ (ವೃಂದ ಮತ್ತು ನೇಮಕಾತಿ) ನಿಯಮಗಳು–2019’ ಪ್ರಕಾರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಒಂದು ಬಡ್ತಿ ಪಡೆದ ನಂತರ ಮತ್ತೊಂದು ಬಡ್ತಿ ಪಡೆಯಲು ಕನಿಷ್ಠ ಐದು ವರ್ಷಗಳ ಕಾರ್ಯನಿರ್ವಹಿಸಿರಬೇಕು. ಮಂಜೂರಾದ ಹುದ್ದೆಗಳಲ್ಲಿ ಶೇ 50ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕು. ಈ ಎರಡೂ ನಿಯಮಗಳನ್ನು ಪಾಲಿಸದೇ ತಾಲ್ಲೂಕು ಕಲ್ಯಾಣಾಧಿಕಾರಿಗಳು/ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಗಳಿಗೆ ಬಡ್ತಿ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ.

ನೇರ ನೇಮಕಾತಿಯ 106 ಹುದ್ದೆಗಳಿಗೂ ಬಡ್ತಿ: ಕಲ್ಯಾಣ ಕರ್ನಾಟಕ ವೃಂದದ 19 ಹುದ್ದೆಗಳು ಸೇರಿದಂತೆ ನೇರ ನೇಮಕಾತಿಗೆ ಮೀಸಲಾದ 106 ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಗಳು ಖಾಲಿ ಇವೆ. ಹಲವು ವರ್ಷಗಳಿಂದ ಹುದ್ದೆ ಭರ್ತಿ ಮಾಡದ ಕಾರಣ ಕೆಳ ಹಂತದ ಅಧಿಕಾರಿಗಳೇ ಪ್ರಭಾರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇಂತಹ ನೇರ ನೇಮಕಾತಿ ಹುದ್ದೆಗಳನ್ನೂ ಸೇರಿಸಿ ಬಡ್ತಿ ನೀಡಲು ಜ್ಯೇಷ್ಠತಾ ಪಟ್ಟಿ ಬಿಡುಗಡೆ ಮಾಡಲಾಗಿದೆ. 

ಮೊದಲ ಬಡ್ತಿ ಪಡೆದು ಮೂರೇ ವರ್ಷ: ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಹುದ್ದೆಗೆ ಬಡ್ತಿ ನೀಡಲು ಸಿದ್ಧಪಡಿಸಿರುವ ಪಟ್ಟಿಯಲ್ಲಿ ಇರುವ ಎಲ್ಲರೂ ವಿಸ್ತರಣಾಧಿಕಾರಿ, ನಿಲಯ ಪಾಲಕರ ಹುದ್ದೆಗಳಿಗೆ ಬಡ್ತಿ ಪಡೆದು ಮೂರು ವರ್ಷಗಳೂ ಆಗಿಲ್ಲ. 2020ರ ಅಕ್ಟೋಬರ್‌, ನವೆಂಬರ್‌ನಲ್ಲಿ ಬಡ್ತಿ ಪಡೆವರೇ ಜ್ಯೇಷ್ಠತಾ ಪಟ್ಟಿಯಲ್ಲಿ ಉನ್ನತ ಕ್ರಮಾಂಕದಲ್ಲಿದ್ದಾರೆ. 

‘ಜ್ಯೇಷ್ಠತಾ ಪಟ್ಟಿ ಬಿಡುಗಡೆ ಮಾಡಿದ ನಂತರ ಇಲಾಖೆಯ ಆಯಾ ಜಿಲ್ಲೆಗಳ ಜಿಲ್ಲಾ ಅಧಿಕಾರಿಗಳು (ಡಿಒ) ಕರೆ ಮಾಡಿ, ಆಯುಕ್ತರ ಕಚೇರಿಯ ಆಡಳಿತ ವಿಭಾಗದ ಜಂಟಿ ನಿರ್ದೇಶಕರನ್ನು ಕಾಣಲು ಸೂಚಿಸುತ್ತಿದ್ದಾರೆ. ಕಾಣುವುದು ಎನ್ನುವುದಕ್ಕೆ, ಅರ್ಥ, ವ್ಯಾಖ್ಯಾನ ಬೇಕಿಲ್ಲ ಎಂದುಕೊಳ್ಳುವೆ. ಬಡ್ತಿ ನೀಡುತ್ತಿರುವ ಇಂತಹ ತರಾತುರಿಯ ಹಿಂದೆ ನೌಕರರ ಹಿತಾಸಕ್ತಿ ಯಂತೂ ಇಲ್ಲ ಎನ್ನುವುದನ್ನಷ್ಟೇ ಹೇಳಬಲ್ಲೆ’ ಎನ್ನುತ್ತಾರೆ ಬಡ್ತಿ ಪಟ್ಟಿಯಲ್ಲಿ ಹೆಸರಿರುವ ಒಬ್ಬ ಅಧಿಕಾರಿ. 

ಡಿಒ ಹುದ್ದೆಗೂ ಇಲ್ಲ ನಿಯಮ ಪಾಲನೆ

ರಾಜ್ಯದಲ್ಲಿ 31 ಜಿಲ್ಲೆಗಳು ಸೇರಿ ಜಿಲ್ಲಾ ಅಧಿಕಾರಿ (ಡಿಒ) ದರ್ಜೆಯ 41 ಹುದ್ದೆಗಳಿವೆ. ನಿಯಮದಂತೆ ಅವುಗಳಲ್ಲಿ ಅರ್ಧದಷ್ಟು ಹುದ್ದೆಗಳಿಗೆ ನೇರ ನೇಮಕಾತಿ ಮಾಡಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 15 ಜಿಲ್ಲಾ ಅಧಿಕಾರಿಗಳಿಗೆ ಬಡ್ತಿ ನೀಡಲಾಗುತ್ತಿದ್ದು, ಖಾಲಿಯಾಗುವ ಆ ಹುದ್ದೆಗಳಿಗೂ ಬಡ್ತಿ ಪಟ್ಟಿ ಸಿದ್ಧಪಡಿಸಲಾಗಿದೆ.

ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ ಜಿಲ್ಲಾ ಅಧಿಕಾರಿಗಳ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅನ್ಯ ಇಲಾಖೆಯ ಅಧಿಕಾರಿಗಳನ್ನು ನೇಮಿಸಬಾರದು ಎಂಬ ನಿಯಮವಿದೆ. ಆದರೆ, 20ಕ್ಕೂ ಹೆಚ್ಚು ಹುದ್ದೆಗಳಲ್ಲಿ ಅನ್ಯ ಇಲಾಖೆಯ ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ.

****

ಒಬ್ಬ ಅಧಿಕಾರಿ ಹಲವು ಪ್ರಭಾರ ನಿಭಾಯಿಸುತ್ತಿದ್ದಾರೆ. ಅಂಥವರಿಗೆ ನಿಯಮಾನುಸಾರವೇ ಬಡ್ತಿ ನೀಡಲಾಗುತ್ತಿದೆ. ಈ ಬಗ್ಗೆ ಮರುಪರಿಶೀಲಿಸಲಾಗುವುದು

-ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT