ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಮಾಹಿತಿ ಕಳವು: ಚಿಲುಮೆ ಟ್ರಸ್ಟ್‌ ನಡೆಸಿದ ಅಕ್ರಮಕ್ಕೆ ಸಾಕ್ಷ್ಯ ಲಭ್ಯ

ಚಿಲುಮೆ ಟ್ರಸ್ಟ್‌ ನಡೆಸಿದ ಅಕ್ರಮಕ್ಕೆ ಸಾಕ್ಷ್ಯ ಲಭ್ಯ: ತನಿಖಾ ವರದಿ
Last Updated 18 ಏಪ್ರಿಲ್ 2023, 6:31 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ಮಾಹಿತಿ ಕಳವು ಮಾಡಿ ವಾಣಿಜ್ಯ ಉದ್ದೇಶಗಳಿಗೆ ಚಿಲುಮೆ ಟ್ರಸ್ಟ್‌ ಸಂಗ್ರಹಿಸುತ್ತಿದೆ ಎಂಬ ಆರೋಪಕ್ಕೆ ಸಾಕ್ಷ್ಯ ದೊರೆತಿದ್ದು, ವಿದೇಶಿ ಸರ್ವರ್‌ನಲ್ಲಿ ಅಕ್ರಮವಾಗಿ ದತ್ತಾಂಶ ಶೇಖರಿಸಿಡಲಾಗಿದೆ ಎಂಬುದು ಸಮಗ್ರ ತನಿಖಾ ವರದಿ ತಿಳಿಸಿದೆ.

ಈ ಮಾಹಿತಿಯನ್ನು ತೆರಿಗೆ ವಂಚಿಸಲು ಅನುವಾಗುವಂತೆ ಹಲವು ಬ್ಯಾಂಕ್‌ಗಳ ಖಾತೆಯನ್ನು ಸೃಷ್ಟಿಸಲು ಮತ್ತು ರಾಜಕೀಯ ಪಕ್ಷಗಳಿಗೆ ಹಣಕ್ಕಾಗಿ ಮಾರಾಟ ಮಾಡಲು ಬಳಸಿಕೊಳ್ಳಲಾಗುತ್ತಿತ್ತು. ಚುನಾವಣೆ ಇಲ್ಲದ ಸಂದರ್ಭದಲ್ಲೂ ಆರ್‌.ಆರ್‌. ನಗರದಲ್ಲಿ ಮತದಾರರ ಜಾಗೃತಿ ಕಾರ್ಯ
ಕ್ರಮಕ್ಕೆ ಈ ಸಂಸ್ಥೆಯನ್ನು ಬಿಬಿಎಂಪಿ ನಿಯೋಜಿಸಿತ್ತು ಎಂದು 49 ಪುಟಗಳ ತನಿಖಾ ವರದಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಮುಖ್ಯ ಚುನಾವಣೆ ಅಧಿಕಾರಿ ವೆಬ್‌ಸೈಟ್‌ನಲ್ಲಿ ಸಮಗ್ರ ವರದಿಯನ್ನು ಅಪ್‌ಲೋಡ್‌ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಲುಮೆ ಟ್ರಸ್ಟ್‌ ಮತದಾರರ ಗುರುತಿನ ಚೀಟಿಯನ್ನು ಸಂಗ್ರಹಿಸಿ, ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ
ವನ್ನು ತನಿಖೆ ನಡೆಸಿದ ನಂತರ ಈ ವರದಿಯನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಲ್ಮಾನ್‌ ಆದಿತ್ಯ ಬಿಸ್ವಾಸ್‌ ಸಿದ್ಧಪಡಿಸಿದ್ದಾರೆ.

ಡಿಜಿಟಲ್‌ ಸಮೀಕ್ಷಾ ಎಂಬ ಅನಧಿಕೃತ ಖಾಸಗಿ ಡಿಜಿಟಲ್‌ ಆ್ಯಪ್‌ ಮೂಲಕ ಎನ್‌ಜಿಒ ಚಿಲುಮೆ ಅಕ್ರಮಗಾಗಿ ಮತದಾರರ ಮಾಹಿತಿ ಸಂಗ್ರಹಿಸಿದೆ. ಇದನ್ನು ವಿದೇಶದ ಸರ್ವರ್‌ನಲ್ಲಿ ಶೇಖರಿಸಿಡಲಾಗಿದ್ದು, ಈ ಮಾಹಿತಿಯನ್ನು ದುರುದ್ದೇಶ ಮತ್ತು ತಮ್ಮ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ‘ಈ ಬಗ್ಗೆ ಪೊಲೀಸರಿಂದ ಪ್ರತ್ಯೇಕ ತನಿಖೆಯ ಅಗತ್ಯವಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅವರು ಪಡೆದಿರುವ ದತ್ತಾಂಶವನ್ನು ಕೂಡಲೇ ಮರು ಪಡೆದುಕೊಳ್ಳಬೇಕು ಎಂದು ಹೇಳಿದೆ.

ಶಿವಾಜಿನಗರ, ಚಿಕ್ಕಪೇಟೆ, ಮಹದೇವಪುರ ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ವಂಚನೆ ಅಥವಾ ಅಕ್ರಮ ನಡೆದಿಲ್ಲ ಎಂದು ತನಿಖಾ ವರದಿ ತಿಳಿಸಿದೆ. ‘ಗರುಡಾ ಆ್ಯಪ್‌ ಅಥವಾ ero.net ಮೂಲಕ ಮಾಹಿತಿ ಕಳವು ಅಥವಾ ತಿದ್ದಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ’ ಎಂದಿದೆ.

ಸಮನ್ವಯ ಟ್ರಸ್ಟ್‌ ಪ್ರಥಮವಾಗಿ ಎನ್‌ಜಿಒ ಚಿಲುಮೆ ವಿರುದ್ಧ ದೂರು ಸಲ್ಲಿಸಿದಾಗ, ಬಿಬಿಎಂಪಿಯ ಚುನಾವಣೆ ವಿಭಾಗದ ವಿಶೇಷ ಆಯುಕ್ತ ಎಸ್‌. ರಂಗಪ್ಪ ತಡವಾಗಿ ಕ್ರಮ ಕೈಗೊಂಡಿದ್ದಾರೆ. ಈ ವಿಳಂಬದಿಂದ, 2019ರಿಂದ ಹಲವು ಸಂದರ್ಭದಲ್ಲಿ ಚಿಲುಮೆಯ ಪ್ರಸ್ತಾವಗಳು ಮತ್ತು ಬಿಲ್‌ಗಳ ಪ್ರಕ್ರಿಯೆ ಬಿರುಸುಗೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

2018ರ ನವೆಂಬರ್‌ನಿಂದ 2022ರ ಆಗಸ್ಟ್‌ವರೆಗೆ ಮತದಾರರ ಜಾಗೃತಿ ಚಟುವಟಿಕೆಗಳಲ್ಲಿ ಚಿಲುಮೆ ಟ್ರಸ್ಟ್‌ ಭಾಗವಹಿಸಲು ಆದೇಶ ನೀಡಿದ್ದ ಮಂಜುನಾಥ ಪ್ರಸಾದ್‌ ಹಾಗೂ ತುಷಾರ್‌ ಗಿರಿನಾಥ್‌ ಅವರಿಗೆ ಈ ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ನೀಡಲಾಗಿದೆ. ತಮ್ಮ ಅಧೀನ ಅಧಿಕಾರಿಗಳ ಅಸಮರ್ಥ ವಿಮರ್ಶೆಯಿಂದ ಈ ದುರುದ್ದೇಶಪೂರ್ವಕವಲ್ಲದ ಆದೇಶಗಳನ್ನು ಇವರು ಹೊರಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಎನ್‌ಜಿಒಗಳ ಬಳಕೆಯಲ್ಲಿ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿ, ಪ್ರಕ್ರಿಯೆಗಳನ್ನು ಅನುಸರಿಸಬೇಕು. ಉಚಿತ ಸೇವೆ ಎಂಬ ನೆಪದಲ್ಲಿ ಕೆಲವು ಎನ್‌ಜಿಒಗಳು ಬೇರೆ ರೀತಿಯ ಹೆಜ್ಜೆಗಳನ್ನು ಇರಿಸಬಹುದು. ಇವು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

49 ಪುಟಗಳ ವರದಿಯಲ್ಲಿ ಸಿ.ಎನ್‌. ಅಶ್ವತ್ಥನಾರಾಯಣ ಫೌಂಡೇಷನ್‌, ಮಲ್ಲೇಶ್ವರ ಸ್ಪೋರ್ಟ್ಸ್‌ ಫೌಂಡೇಷನ್‌ ಮತ್ತು ಡಿಎಪಿ ಹೊಂಬಾಳೆ ಪ್ರೈ. ಲಿ., ಉಲ್ಲೇಖವಿದೆ. ಎನ್‌ಜಿಒ ಚಿಲುಮೆಯ ಸಹವರ್ತಿಗಳು ಮತ್ತು ನಿರ್ದೇಶಕರು ತೆರಿಗೆ ತಪ್ಪಿಸಲು ಮತ್ತು ಅಕ್ರಮ ಹಣ ವರ್ಗಾವಣೆಗೆ ಹಲವು ರೀತಿಯ ಕಂಪನಿ ಮತ್ತು ಬ್ಯಾಂಕ್‌ ಖಾತೆಗಳನ್ನು ಸೃಷ್ಟಿಸಿದ್ದಾರೆ. ‘ಡಿಜಿಟಲ್‌ ಸಮೀಕ್ಷಾ ಖಾತೆಗೆ ಹೊಂಬಾಳೆ ಫಿಲ್ಸ್ಮ್ಸ್‌ನಿಂದ ಬೃಹತ್‌ ಮೊತ್ತ ಜಮೆಯಾಗಿದೆ’ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT