ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಆರೋಪಿಗಳಿಗೆ ರಾಜ್ಯಪಾಲರಿಂದ ರಕ್ಷಣೆ: ವಿ.ಎಸ್‌. ಉಗ್ರಪ್ಪ ಆರೋಪ

Last Updated 2 ಜುಲೈ 2021, 11:39 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ ಅನುಮತಿ ನಿರಾಕರಿಸುವ ಮೂಲಕ ರಾಜ್ಯಪಾಲ ವಜುಭಾಯಿ ವಾಲಾ ಅವರು ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಆರೋಪಿಸಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಎಂ. ರೇವಣ್ಣ ಅವರೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬಹುಮಹಡಿ ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರನಿಂದ ಯಡಿಯೂರಪ್ಪ ಅವರ ಮಗ ಮತ್ತು ಮೊಮ್ಮಗ ₹ 25 ಕೋಟಿ ಲಂಚ ಪಡೆದಿದ್ದಾರೆ. ಈ ಕುರಿತು ವಿಚಾರಣೆಗೆ ಅನುಮತಿ ನಿರಾಕರಿಸುವ ಮೂಲಕ ರಾಜ್ಯಪಾಲರು ಆರೋಪಿಗಳನ್ನು ರಕ್ಷಿಸಿದ್ದಾರೆ’ ಎಂದು ದೂರಿದರು.

‘ಶೆಲ್‌’ ಕಂಪನಿಗಳನ್ನು ಸೃಷ್ಟಿಸಿ ಹಣ ಪಡೆದಿರುವುದಕ್ಕೆ ದಾಖಲೆಗಳಿವೆ. ಇದೇ ವಿಚಾರವಾಗಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿರುವ ಟಿ.ಜೆ. ಅಬ್ರಹಾಂ, ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರು. ನಿಯಮದ ಪ್ರಕಾರ, ನಾಲ್ಕು ತಿಂಗಳೊಳಗೆ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕಿತ್ತು. ಏಳೂವರೆ ತಿಂಗಳ ಬಳಿಕ ಅಬ್ರಹಾಂ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಉಗ್ರಪ್ಪ ಹೇಳಿದರು.

ರಾಜ್ಯಪಾಲರು ತಮ್ಮ ನಿರ್ಧಾರವನ್ನು ಅರ್ಜಿದಾರರಿಗೆ ತಿಳಿಸಬೇಕಿತ್ತು. ಆದರೆ, ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್‌ಪಿಗೆ ತಿಳಿಸಿದ್ದಾರೆ. ರಾಜ್ಯಪಾಲರ ಕಚೇರಿ ಅಥವಾ ಮುಖ್ಯಮಂತ್ರಿಯವರ ಕಚೇರಿಯಿಂದ ಅಧಿಕಾರ ದುರ್ಬಳಕೆ ಆಗಿರುವ ಸಂಶಯವಿದೆ ಎಂದರು.

ತುಳಿಯುವ ಯತ್ನ: ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಒಬ್ಬ ಆಪ್ತ ಸಹಾಯಕ ಕೆಲವು ತಿಂಗಳ ಹಿಂದೆ ನಿಗೂಢವಾಗಿ ಮೃತಪಟ್ಟಿದ್ದರು. ಈಗ ರಾಜಣ್ಣ ಎಂಬ ಆಪ್ತ ಸಹಾಯಕನನ್ನು ಮುಖ್ಯಮಂತ್ರಿಯವರ ಮಗ ಬಿ.ವೈ. ವಿಜಯೇಂದ್ರ ದೂರು ನೀಡಿ, ಬಂಧನ ಮಾಡಿಸಿದ್ದಾರೆ. ಕೆಲವರ ತಪ್ಪು ಮುಚ್ಚಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಇದು ಎಂದು ಉಗ್ರಪ್ಪ ಆರೋಪಿಸಿದರು.

‘ಬಿಜೆಪಿ ಸರ್ಕಾರ ವಾಲ್ಮೀಕಿ ಸಮುದಾಯವನ್ನು ತುಳಿಯುತ್ತಿದೆ. ಜಾರಕಿಹೊಳಿ ಕುಟುಂಬದವರು ಮತ್ತು ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ನಂಬಿಸಿ, ವಂಚಿಸಲಾಗಿದೆ’ ಎಂದರು.

ಎಚ್‌.ಎಂ. ರೇವಣ್ಣ ಮಾತನಾಡಿ, ‘ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಚೆಕ್‌ ಮೂಲಕ ಲಂಚ ಪಡೆದಿದ್ದರು. ಈಗ ಆರ್‌ಟಿಜಿಎಸ್‌ ಮೂಲಕ ಪಡೆದಿದ್ದಾರೆ. ಅವರ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಶ್ರೀರಾಮುಲು ಆಪ್ತ ಸಹಾಯಕನನ್ನು ಬಂಧಿಸಲಾಗಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT