ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಲ ವಿವಾದ | ಪ್ರಧಾನಿ ಮೋದಿ ಬಳಿಗೆ ಸರ್ವಪಕ್ಷ ನಿಯೋಗ: ಸಿದ್ದರಾಮಯ್ಯ

‘ಸುಪ್ರೀಂ’ನಲ್ಲಿ ವಸ್ತುಸ್ಥಿತಿ ಮನವರಿಕೆ ಮಾಡಲು ಬಿಜೆಪಿ, ಜೆಡಿಎಸ್‌ ಆಗ್ರಹ
Published : 23 ಆಗಸ್ಟ್ 2023, 23:30 IST
Last Updated : 23 ಆಗಸ್ಟ್ 2023, 23:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಕಾವೇರಿ, ಮೇಕೆದಾಟು, ಮಹದಾಯಿ, ಕೃಷ್ಣಾ ಸಮಸ್ಯೆಗಳ ಕುರಿತು ಪ್ರಧಾನಿ ಬಳಿಗೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲು ನಿರ್ಧರಿಸಿದ್ದು, ಅದಕ್ಕೆ ಸಹಕಾರ ನೀಡಲು ಎಲ್ಲ ಪಕ್ಷಗಳ ಮುಖಂಡರು ಒಪ್ಪಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿವಿಧ ಜಲ ವಿವಾದಗಳ ಕುರಿತಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಐದಾರು ವರ್ಷಗಳಿಗೊಮ್ಮೆ ಮಳೆ ಕೊರತೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಂಕಷ್ಟ ಎದುರಾಗುತ್ತದೆ. ಸಾಮಾನ್ಯ ಜಲವರ್ಷದಲ್ಲಿ ನೀರು ಹಂಚಿಕೆಯ ತೀರ್ಮಾನ ಆಗಿದೆಯೇ ಹೊರತು, ಸಂಕಷ್ಟ ಸೂತ್ರ ನಿರ್ದಿಷ್ಟ‌ಪಡಿಸಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸುವಂತೆ ರಾಜ್ಯದ ವಕೀಲರಿಗೆ ಸಲಹೆ ನೀಡಲಾಗಿದೆ’ ಎಂದರು.

‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಸಂಕಷ್ಟ ಹಂಚಿಕೆ ಸೂತ್ರದ ಕುರಿತು ತೀರ್ಮಾನ ಆಗಲೇಬೇಕು. 67 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯದ ಮೇಕೆದಾಟು ಸಮತೋಲನಾ ಜಲಾಶಯ ನಿರ್ಮಿಸಿದರೆ, ಇಂತಹ ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡಲು ಅನುಕೂಲವಾಗುತ್ತದೆ. ಈ ಯೋಜನೆಗೆ ತಮಿಳುನಾಡು ವಿನಾಕಾರಣ ವಿರೋಧಿಸುತ್ತಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಕೊಟ್ಟ ಬಳಿಕ 2018ರಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಸ್ಥಾಪನೆಯಾಗಿದೆ. ಪ್ರಾಧಿಕಾರ 22 ಸಭೆ ಹಾಗೂ ನಿಯಂತ್ರಣ ಸಮಿತಿ 84 ಸಭೆಗಳನ್ನು ನಡೆಸಿವೆ. ಈ ಸಮಿತಿಗಳು ರಚನೆಯಾದ ಬಳಿಕ, ರಾಜ್ಯದಲ್ಲಿ ಸಂಕಷ್ಟದ ದಿನಗಳು ಎದುರಾಗಿವೆ. ಆಗ ಪ್ರಾಧಿಕಾರ ಮತ್ತು ಸಮಿತಿಯಲ್ಲಿ ಚರ್ಚಿಸಿ, ಅದರ ತೀರ್ಮಾನದಂತೆ ನಡೆದುಕೊಂಡ ಅನೇಕ ನಿದರ್ಶನಗಳಿವೆ’ ಎಂದರು.

‘‍ಇಲ್ಲಿಯವರೆಗೆ 86.38 ಟಿಎಂಸಿ ಅಡಿ ನೀರು ಬಿಡಬೇಕಾಗಿತ್ತು. ಇದೇ 20ರವರೆಗೆ 24 ಟಿಎಂಸಿ ಅಡಿಯಷ್ಟು ನೀರು ಬಿಟ್ಟಿದ್ದೇವೆ. ನೀರು ಬಿಡಲು ಯಾಕೆ ಸಾಧ್ಯ ಇಲ್ಲವೆಂಬ ವಾಸ್ತವವನ್ನು ಪ್ರಾಧಿಕಾರದ ಮುಂದೆ ಬಿಡಿಸಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಮಳೆ ಕೊರತೆಯಿಂದಾಗಿ ಬೆಳೆಗಳಿಗೆ ನೀರು ಬಿಟ್ಟಿಲ್ಲ. ಕುಡಿಯಲು ನೀರು ಬೇಕಾಗುತ್ತದೆ ಎಂದು ವಿವರಿಸಲಾಗಿದೆ’ ಎಂದರು.

‘15 ಸಾವಿರ ಕ್ಯುಸೆಕ್‌ ನೀರು ಕೊಡಲಾಗದು ಎಂದು ನಮ್ಮ ಅಧಿಕಾರಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ವಾದ ಮಂಡಿಸುತ್ತಿದ್ದಾಗ ತಮಿಳುನಾಡಿನ ಅಧಿಕಾರಿಗಳು ಸಭಾತ್ಯಾಗ ಮಾಡಿದರು. ನಮ್ಮ ಅಧಿಕಾರಿಗಳು ವಾದ ಮಾಡಿದ್ದರಿಂದ 10 ಸಾವಿರ ಕ್ಯುಸೆಕ್‌ಗೆ ಇಳಿಸಲು ಸೂಚಿಸಿತು. ಅದನ್ನೂ ಮರು ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದ್ದೆವು. ನಂತರ ಸುಪ್ರೀಂ ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದು ಸುಪ್ರೀಂ ಕೋರ್ಟ್‌ ರಚಿಸಿರುವ ಪೀಠವು ಇದೇ 25ರಂದು ಪ್ರಕರಣ ವಿಚಾರಣೆ ನಡೆಸಲಿದೆ.’ ಎಂದರು.

ಸಭೆಯಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ವೀರಪ್ಪ ಮೊಯಿಲಿ, ಜಗದೀಶ ಶೆಟ್ಟರ್, ಸಂಸದರಾದ ಸುಮಲತಾ, ತೇಜಸ್ವಿಸೂರ್ಯ, ಜಗ್ಗೇಶ, ಎಲ್. ಹನುಮಂತಯ್ಯ, ಮುನಿಸ್ವಾಮಿ, ಜಿ.ಎಂ. ಸಿದ್ದೇಶ್ವರ, ಜಿ.ಸಿ. ಚಂದ್ರಶೇಖರ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಮೊದಲಾದವರು ರಾಜ್ಯದ ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಸರ್ವಪಕ್ಷಗಳ ಸಭೆಯಲ್ಲಿ ಜಗದೀಶ ಶೆಟ್ಟರ್‌ ವೀರಪ್ಪ ಮೊಯಿಲಿ ಸದಾನಂದ ಗೌಡ ಬಸವರಾಜ ಬೊಮ್ಮಾಯಿ ಎಚ್‌.ಡಿ. ಕುಮಾರಸ್ವಾಮಿ ಬಿ.ಎಸ್‌. ಯಡಿಯೂರಪ್ಪ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ   ಪ್ರಜಾವಾಣಿ ಚಿತ್ರ
ಸರ್ವಪಕ್ಷಗಳ ಸಭೆಯಲ್ಲಿ ಜಗದೀಶ ಶೆಟ್ಟರ್‌ ವೀರಪ್ಪ ಮೊಯಿಲಿ ಸದಾನಂದ ಗೌಡ ಬಸವರಾಜ ಬೊಮ್ಮಾಯಿ ಎಚ್‌.ಡಿ. ಕುಮಾರಸ್ವಾಮಿ ಬಿ.ಎಸ್‌. ಯಡಿಯೂರಪ್ಪ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ   ಪ್ರಜಾವಾಣಿ ಚಿತ್ರ

‘ಸುಪ್ರೀಂ’ನಲ್ಲಿ ವಸ್ತುಸ್ಥಿತಿ ಮನವರಿಕೆ ಮಾಡಲಿ– ಬೊಮ್ಮಾಯಿ

‘ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ‘ರಾಜ್ಯದ ರೈತರಿಗೆ ನೀರು ಕೊಡದೆ ತಮಿಳುನಾಡಿಗೆ ನೀರು ಬಿಟ್ಟಿರುವುದು ಸರಿಯಲ್ಲ.‌ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ವಾದ ಮಾಡುವುದರಲ್ಲಿ ಮತ್ತು ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸದೆ ಎಡವಿರುವುದಾಗಿ ಹೇಳಿದ್ದೇವೆ. ಮಹದಾಯಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನಂತರ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ಆಲೋಚಿಸುವಂತೆ ಸಲಹೆ ನೀಡಿದ್ದೇವೆ’ ಎಂದೂ ತಿಳಿಸಿದರು.

‘ಸುಪ್ರೀಂ’ಗೆ ಆಕ್ಷೇಪ ಸಲ್ಲಿಸುವ ಮೊದಲು ನೀರು ಹರಿಸಿದ್ದೇಕೆ– ಎಚ್‌ಡಿಕೆ

‘ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಅರ್ಜಿ ಸಲ್ಲಿಸಿದ ತಕ್ಷಣ ರಾಜ್ಯ ಸರ್ಕಾರ ನೀರು ಹರಿಸುವ ನಿರ್ಧಾರ ಕೈಗೊಳ್ಳುವ ಬದಲು ತಕರಾರು ಅರ್ಜಿ ಸಲ್ಲಿಸಬೇಕಿತ್ತು. ಈ ವಿಷಯದಲ್ಲಿ ಸರ್ಕಾರದಿಂದ ಲೋಪವಾಗಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ‘ನೆಲ ಜಲ ಭಾಷೆ ವಿಚಾರದಲ್ಲಿ ವಿರೋಧ ಪಕ್ಷಗಳು ಪ್ರಶ್ನೆ ಮಾಡಿದರೆ ಅದನ್ನು ರಾಜಕೀಯ ಎಂದು ಭಾವಿಸುವುದು ತಪ್ಪು. ಸರ್ಕಾರ ಹೊಣೆಗಾರಿಕೆಯಿಂದ ವರ್ತಿಸಬೇಕು. ತಮಿಳುನಾಡಿಗೆ ನೀರು ಹರಿಸುವ ಮೊದಲೇ ಸರ್ವಪಕ್ಷ ಸಭೆ ಕರೆದಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು.‌ ಅಲ್ಲದೆ ಸರ್ವಪಕ್ಷಗಳ ಸಭೆಯಲ್ಲಿ ಏನೇ ವಾದ ಮಾಡಿದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪರಿಣಾಮಕಾರಿ ವಾದ ಮಂಡಿಸಬೇಕು’ ಎಂದರು.

ರಾಜ್ಯದ ನೆಲ ಜಲ ಗಡಿ ಭಾಷೆಗಳ ಬಗ್ಗೆ ಮೊದಲಿನಿಂದಲೂ ರಾಜಕೀಯ ಮಾಡುವ ಪ್ರಯತ್ನವನ್ನು ಯಾರೂ ಮಾಡಿಲ್ಲ ಮಾಡಲೂಬಾರದು. ರಾಜ್ಯದ ಹಿತ ಕಾಪಾಡುವುದು ಎಲ್ಲರ ಜವಾಬ್ದಾರಿ
-ಸಿದ್ದರಾಮಯ್ಯ ಮುಖ್ಯಮಂತ್ರಿ
ನೀರಾವರಿ ವಿಷಯದಲ್ಲಿ ರಾಜ್ಯದ ಹಿತ ಕಾಪಾಡುವುದಕ್ಕೆ ಬದ್ಧ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕಾನೂನು ಹೋರಾಟ ಮುಂದುವರೆಯಲಿದ್ದು ಎಲ್ಲ ಪಕ್ಷಗಳ ಮುಖಂಡರು ಸಹಕರಿಸಬೇಕು
-ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT