ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆಯಲ್ಲಿ ಅಕ್ರಮ: ‘ದೋಷ’ಕ್ಕೆ ಅಧಿಕಾರಿಗಳಲ್ಲ, ಸಮಾಲೋಚಕರು ಕಾರಣ!

ಬೃಹತ್‌ ನೀರಾವರಿ ಯೋಜನೆಯಲ್ಲಿ ಅಕ್ರಮ: ಸತ್ಯಶೋಧನಾ ತಂಡದ ಶೋಧ
Last Updated 10 ಅಕ್ಟೋಬರ್ 2021, 3:04 IST
ಅಕ್ಷರ ಗಾತ್ರ

ಬೆಂಗಳೂರು: ನೂರಾರು ಕೋಟಿ ಮೊತ್ತ ವೆಚ್ಚದಲ್ಲಿ ಜಲಸಂಪನ್ಮೂಲ ಇಲಾಖೆ ಅನುಷ್ಠಾನಗೊಳಿಸುವ ಬೃಹತ್‌ ನೀರಾವರಿ ಯೋಜನೆಗಳಲ್ಲಿ ಅಕ್ರಮ, ಭ್ರಷ್ಟಾಚಾರಗಳಿಗೆ, ಈ ಯೋಜನೆಗಳ ದೋಷಪೂರಿತ ಅಂದಾಜು ಪಟ್ಟಿ ತಯಾರಿಸುವ ‘ಖಾಸಗಿ ಸಮಾಲೋಚಕರು( ಕನ್ಸಲ್ಟಂಟ್‌)’ ಕಾರಣವೇ ಹೊರತು ಅಧಿಕಾರಿಗಳು ಅಲ್ಲ!

ಡಿ.ವೈ. ಉಪ್ಪಾರ್‌ ಸಹಭಾಗಿತ್ವದ ‘ಎಡಿಯು ಇನ್ಪ್ರಾ’ ಎಂಬ ಕಂಪನಿ ಗುತ್ತಿಗೆ ವಹಿಸಿದ್ದ ₹ 17,685 ಕೋಟಿಗೂ ಹೆಚ್ಚು ಮೊತ್ತದ ಎಂಟು ಬೃಹತ್‌ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪಗಳ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ರಚಿಸಿದ ಸತ್ಯಶೋಧನಾ ತಂಡದ ಶೋಧನೆಯಿದು!

ಇಲಾಖೆಯ ನಿವೃತ್ತ ಕಾರ್ಯದರ್ಶಿ ಎಸ್‌.ಜೆ. ಚನ್ನಬಸಪ್ಪ ಮತ್ತು ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ತಾಂತ್ರಿಕ ಸಲಹೆಗಾರರಾಗಿದ್ದ ಎಂ.ಕೆ. ವೆಂಕಟರಾಮ್‌ ಅವರು ಈ ತಂಡದ ಸದಸ್ಯರು.

‘ಕಾಮಗಾರಿ ಕೈಗೊಳ್ಳುವ ಕ್ಷೇತ್ರದ ಸಮೀಕ್ಷೆ ಮತ್ತು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಿ, ಅಂದಾಜು ಪಟ್ಟಿ ತಯಾರಿಸುವ ಕೆಲಸವನ್ನು ಖಾಸಗಿ ಕನ್ಸಲ್ಟಂಟ್‌ಗಳಿಗೆ ನಿಗಮಗಳು ವಹಿಸುತ್ತಿವೆ. ಹೀಗಾಗಿ, ಯೋಜನೆಗಳ ಅನುಷ್ಠಾನದಲ್ಲಿ ಲೋಪವಾದರೆ ಅಥವಾ ನೈಜ ಟೆಂಡರ್‌ ದರಕ್ಕಿಂತ ಒಟ್ಟು ಮೊತ್ತ ಹೆಚ್ಚಳವಾದರೆ ನೀರಾವರಿ ನಿಗಮಗಳ ಅಧಿಕಾರಿಗಳನ್ನು ಹೊಣೆ ಮಾಡುವುದು ಸರಿಯಲ್ಲ’ ಎಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಉಲ್ಲೇಖಿಸಿದೆ.

ಆ ಮೂಲಕ, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಎಂಜಿನಿಯರ್‌ಗಳು, ಸೂಪರಿಟೆಂಡೆಂಟ್‌ ಎಂಜಿನಿಯರ್‌ಗಳು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಎಲ್ಲ ಆಪಾದನೆಗಳಿಂದ ಸತ್ಯ ಶೋಧನಾ ತಂಡ ಮುಕ್ತಗೊಳಿಸಿದೆ. ಅಲ್ಲದೆ, ಇನ್ನು ಮುಂದೆ ಅಂದಾಜು ಪಟ್ಟಿ ಮತ್ತು ಡಿಪಿಆರ್‌ ತಯಾರಿಸುವ ಕೆಲಸಕ್ಕೆ ಖಾಸಗಿ ಕನ್ಸಲ್ಟಂಟ್‌ಗಳನ್ನು ನಿಯೋಜಿಸಬಾರದು ಎಂದೂ ಶಿಫಾರಸು ಮಾಡಿದೆ.

ತಂಡದ ಈ ಶಿಫಾರಸ್ಸಿನ ಬಗ್ಗೆ ನೀರಾವರಿ ನಿಗಮಗಳ ಕೆಲವು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಖಾಸಗಿ ಕನ್ಸಲ್ಟಂಟ್‌ಗಳು, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾಮಗಾರಿ ವಹಿಸಿಕೊಳ್ಳುವ ಗುತ್ತಿಗೆದಾರರ ನಡುವೆ ‘ಹೊಂದಾಣಿಕೆ‘ ಇದೆ. ಗುತ್ತಿಗೆದಾರರು ಸೂಚಿಸಿದ ಕನ್ಸಲ್ಟಂಟ್‌ಗಳ ಮೂಲಕ ನಿಗಮದ ಅಧಿಕಾರಿಗಳು ಡಿಪಿಆರ್‌ ಮಾಡಿಸಿಕೊಳ್ಳುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ವಿವರಿಸಿದರು.

‘ಖಾಸಗಿ ಕನ್ಸಲ್ಟಂಟ್‌ಗಳು ತಯಾರಿಸಿದ ಅಂದಾಜು ಪಟ್ಟಿಯನ್ನು ನಿವೃತ್ತ ಎಂಜಿನಿಯರ್ ಇನ್‌ ಚೀಫ್‌ ಮತ್ತು ನಿವೃತ್ತ ಮುಖ್ಯ ಎಂಜಿನಿಯರ್‌ಗಳನ್ನು ಒಳಗೊಂಡ ‘ಅಂದಾಜು ಪರಿಶೀಲನಾ ಸಮಿತಿ’ ಪರಿಶೀಲಿಸಿ ಅಂತಿಮಗೊಳಿಸುತ್ತದೆ. ಈ ಸಮಿತಿ ಅಂದಾಜು ಪಟ್ಟಿಯನ್ನು ಸಮರ್ಪಕವಾಗಿ ಪರಿಶೀಲಿಸದೇ ಇರುವುದು ಕೂಡಾ ಲೋಪಗಳಿಗೆ ಕಾರಣವಾಗಿದೆ. ಯಾವುದೇ ಕಾಮಗಾರಿಯ ಅನುಷ್ಠಾನದಲ್ಲಿ ಅಧಿಕಾರಿಗಳ ಕಾರಣಕ್ಕೆ ಟೆಂಡರ್‌ ಮೊತ್ತ ಹೆಚ್ಚಳ ಆಗಿಲ್ಲ. ಹೀಗಾಗಿ, ಮೊತ್ತ ಹೆಚ್ಚಿಸಿ ಅಕ್ರಮಗಳಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಹೇಳಲು ಸಾಧ್ಯ ಇಲ್ಲ’ ಎಂದೂ ತಂಡ ಸಲ್ಲಿಸಿದ ವಿಚಾರಣಾ ವರದಿಯಲ್ಲಿದೆ.

‘ನಾಲೆಗಳ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಖಾಸಗಿ ಕನ್ಸಲ್ಟಂಟ್‌ಗಳು ಅಸಮರ್ಪಕ ಮತ್ತು ಅನುಚಿತವಾಗಿ ಸಮೀಕ್ಷೆ ನಡೆಸಿವೆ. ಒಂದು ಕಡೆ ಅಗೆದ ಮಣ್ಣು ಮತ್ತು ಮತ್ತೊಂದು ಕಡೆ ತುಂಬ ಬೇಕಾದ ಭಾರಿ ಪ್ರಮಾಣದ ಮಣ್ಣನ್ನು ಲೆಕ್ಕ ಹಾಕುವ ಸಂದರ್ಭದಲ್ಲಿ ತಪ್ಪುಗಳಾಗಿವೆ. ಅಗೆದ ಮಣ್ಣು ಮರು ಬಳಕೆ ಮಾಡುವ ಬಗ್ಗೆ ಅಂದಾಜು ಪಟ್ಟಿಯಲ್ಲಿ ಪ್ರಸ್ತಾವವೇ ಇಲ್ಲ. ಹೀಗಾಗಿ, ಅಂದಾಜು ಪಟ್ಟಿಗಳೇ ದೋಷಪೂರಿತವಾಗಿವೆ’ ಎಂದೂ ವರದಿಯಲ್ಲಿ ಟೀಕಿಸಲಾಗಿದೆ.

‘ಹೀಗೆ ದೋಷಪೂರಿತ ಅಂದಾಜು ಪಟ್ಟಿಯಿಂದ ಕಾಮಗಾರಿಯ ಮೊತ್ತ ಹೆಚ್ಚಳವಾದರೆ ಅದಕ್ಕೆ ಖಾಸಗಿ ಕನ್ಸಲ್ಟಂಟ್‌ಗಳನ್ನು ಉತ್ತರದಾಯಿ ಮಾಡಲು ಅವಕಾಶ ಇಲ್ಲ. ಆದರೆ, ಲೆಕ್ಕ ಪರಿಶೋಧನೆಯ ಆಕ್ಷೇಪಗಳಿಗೆ ನಿಗಮಗಳ ಅಧಿಕಾರಿಗಳೇ ಉತ್ತರಿಸಬೇಕಾಗುತ್ತದೆ. ಅಲ್ಲದೆ, ದೋಷಪೂರಿತ ಅಂದಾಜು ಪಟ್ಟಿಯಿಂದ ಟೆಂಡರ್‌ ಮೊತ್ತದಲ್ಲಿ ಭಾರಿ ಹೆಚ್ಚಳವಾದರೆ ವಿಧಾನ ಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿಯ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ’ ಎಂದೂ ವರದಿಯಲ್ಲಿದೆ.

ಮಣ್ಣು ಸುರಿದು 'ಕೋಟಿ' ಗುಳುಂ!
'ನೂರಾರು ಕೋಟಿ ಮೊತ್ತದ ಅಂದಾಜು ಪಟ್ಟಿಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಲು ಅಂದಾಜು ಪರಿಶೀಲನಾ ಸಮಿತಿ ವಿಫಲವಾಗಿದೆ. ಕೆಲವು ಯೋಜನೆಗಳಲ್ಲಿ ಕಾಲುವೆ ತೋಡುವಾಗ ತೆಗೆದ ಮಣ್ಣಿನ ಮರು ಬಳಕೆಗೆ ಅಂದಾಜು ಪಟ್ಟಿಯಲ್ಲಿ ಅವಕಾಶ ಕಲ್ಪಿಸಿಲ್ಲ. ಹೀಗಾಗಿ, ಹೆಚ್ಚಿನ ಯೋಜನೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಬೇರೆ ಕಡೆಯಿಂದ ಪಡೆದು ಬಳಸಲಾಗಿದೆ. ಅದಕ್ಕೆ ನೂರಾರು ಕೋಟಿ ರೂಪಾಯಿ ವೆಚ್ಚವಾಗಿದೆ. ಕಾಮಗಾರಿಯೊಂದರಲ್ಲಿ 1,064 ಕಿ.ಮೀ. ವರೆಗಿನ ಅಂದಾಜು ಪಟ್ಟಿಗೆ ಅಂದಾಜು ಪರಿಶೀಲನಾ ಸಮಿತಿ ಒಪ್ಪಿಗೆ ನೀಡಿರುವುದು ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ' ಎಂದು ಸತ್ಯಶೋಧನಾ ತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT