ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೇಬಿಕ್ ಶಾಲೆಗಳಲ್ಲೂ ಉತ್ತಮ ಶಿಕ್ಷಣ ಸಿಗಬೇಕು– ಬಿ.ಸಿ.ನಾಗೇಶ್

Last Updated 27 ಅಕ್ಟೋಬರ್ 2022, 9:17 IST
ಅಕ್ಷರ ಗಾತ್ರ

ಮಡಿಕೇರಿ: ರಾಜ್ಯದಲ್ಲಿರುವ ಎಲ್ಲ ಅರೇಬಿಕ್ ಶಾಲೆಗಳ ಮಕ್ಕಳೂ ಬೇರೆ ಶಾಲೆಗಳ ಮಕ್ಕಳಂತೆ ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಅರೇಬಿಕ್ ಶಾಲೆಗಳ ಬೋಧನೆ ಕುರಿತು ವರದಿ ಕೇಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ರಾಜ್ಯದಲ್ಲಿ 106 ಅನುದಾನಿತ ಅರೇಬಿಕ್ ಶಾಲೆಗಳು ಇವೆ. 80 ಅನುದಾನ ರಹಿತ ಶಾಲೆಗಳಿವೆ. ಇಲ್ಲಿ ಶಿಕ್ಷಣ ಇಲಾಖೆಯ ಪಠ್ಯಕ್ರಮದ ಅನುಸಾರ ಬೋಧನೆ ನಡೆಯುತ್ತಿಲ್ಲ ಎಂಬ ಆರೋಪಗಳಿವೆ. ಹೀಗಾಗಿ, ಈ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಗುರುವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.

ಬೇರೆ ಅನುದಾನಿತ ಶಾಲೆಗಳ ರೀತಿಯಲ್ಲಿ ಅರೇಬಿಕ್‌ ಶಾಲೆಗಳೂ ಶಿಕ್ಷಣ ನೀಡಬೇಕು. ಆದರೆ, ಬಹಳಷ್ಟು ಶಾಲೆಗಳಲ್ಲಿ ಭಾಷೆ ಮತ್ತು ವಿಜ್ಞಾನದ ಕಲಿಕೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಇಂತಹ ಶಾಲೆಗಳಿಗೆ ಪ್ರತಿವರ್ಷ ಸುಮಾರು 27 ಸಾವಿರ ಸಂಖ್ಯೆ ಮಕ್ಕಳು ಸೇರುತ್ತಾರೆ. ಆದರೆ, ಎಸ್ಸೆಸ್ಸೆಲ್ಸಿಯಲ್ಲಿ ಕೇವಲ 2 ಸಾವಿರ ವಿದ್ಯಾರ್ಥಿಗಳು ಮಾತ್ರವೇ ಇರುತ್ತಾರೆ. ಬಹಳಷ್ಟು ಶಾಲೆಗಳಲ್ಲಿ ನೋಂದಣಿಯಾದ ವಿದ್ಯಾರ್ಥಿಗಳಿಗೂ, ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೂ ಭಾರಿ ವ್ಯತ್ಯಾಸ ಇದೆ. ಅಂದರೆ ಒಂದು ನಿರ್ದಿಷ್ಟ ಧರ್ಮದ ಮಕ್ಕಳು ಶಾಲೆಗಳಿಂದ ಹೊರಗುಳಿಯುತ್ತಿದ್ದಾರೆ. ಇದು ಆಗಬಾರದು, ಎಲ್ಲರಿಗೂ ಇಂದಿನ ಸ್ಪರ್ಧಾತ್ಮಕ ಯುಗದ‌ಲ್ಲಿ ಉತ್ತಮ ಶಿಕ್ಷಣ ದೊರಕಬೇಕು ಎಂದರು.

ಟಿಪ್ಪು ವೈಭವೀಕರಣ; ಬೇಸರ

‘ಹಿಂದೆ ಪಠ್ಯಪುಸ್ತಕದಲ್ಲಿ ನಮ್ಮನ್ನಾಳಿದ ರಾಜರ ಇತಿಹಾಸ ಇರಲಿಲ್ಲ. ಮೆಕಾಲೆ ಶಿಕ್ಷಣ ಪದ್ಧತಿ ಇತ್ತು. ಟಿಪ್ಪುವಿನಂತಹ ದೊರೆಗಳ ವೈಭವೀಕರಣ ಇತ್ತು. ಕೆಂಪೇಗೌಡರು, ಮೈಸೂರು ರಾಜರ ಇತಿಹಾಸ ತೆಗೆಯಲಾಗಿತ್ತು’ ಎಂದು ಬಿ.ಸಿ.ನಾಗೇಶ್ ಬೇಸರ ವ್ಯಕ್ತಪಡಿಸಿದರು.

‘ಈ ನಾಡನ್ನು ಬ್ರಿಟಿಷರಿಗೂ ಮುನ್ನ ನಮ್ಮ ರಾಜರು ವೈಜ್ಞಾನಿಕವಾಗಿ ಆಳ್ವಿಕೆ ಮಾಡಿದ್ದರು. ಉತ್ತಮ ನಗರಗಳನ್ನು, ಕೆರೆಕಟ್ಟೆಗಳನ್ನು ಕಟ್ಟಿದ್ದರು. ಪ್ರಕೃತಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದರು ಎಂಬುದನ್ನು ತಿಳಿಸುವುದೇ ನಾಡಪ್ರಭು ಕೆಂಪೇಗೌಡ ಅವರ ರಥಯಾತ್ರೆಯ ಉದ್ದೇಶ’ ಎಂದರು.

‘ಕೆಂಪೇಗೇಡ ಅವರು ಜನಹಿತ, ಜನಪರವಾದ ಆಡಳಿತ ನೀಡಿದ್ದರು. ಇಂದಿನ ರಾಜಕಾರಣಿಗಳು, ಅಧಿಕಾರಿಗಳಿಗೆ ಮೇಲ್ಪಂಕ್ತಿಯಾಗಿದ್ದರು. ನವೆಂಬರ್ 11ರಂದು ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅವರ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಉದ್ಘಾಟಿಸಲಿದ್ದಾರೆ. ಅದರ ನಿರ್ಮಾಣಕ್ಕೆ ರಾಜ್ಯದ ಎಲ್ಲ ಭಾಗಗಳಿಂದ ಪವಿತ್ರ ಮಣ್ಣನ್ನು ತರಲಾಗುತ್ತಿದೆ. ಕನಿಷ್ಠ ಪಕ್ಷ ಆ ಪ್ರತಿಮೆ ನೋಡಿಯಾದರೂ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಜನಪರ ಆಡಳಿತ ನೀಡುವ ಮಾನಸಿಕತೆ ಬರಲಿ ಎಂಬುದು ಇದರ ಉದ್ದೇಶ’ ಎಂದು ಹೇಳಿದರು.

ಇದಕ್ಕೂ ಮುನ್ನ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಮಣ್ಣು ಸಂಗ್ರಹಿಸಿ ವಾಹನಕ್ಕೆ ಹಾಕಿ, ಯಾತ್ರೆಗೆ ಚಾಲನೆ ನೀಡಿದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ವಾಹನವನ್ನು ಚಾಲನೆ ಮಾಡಿದರು.

ಬಳಿಕ ವಾಹನವು ಗಾಳಿಬೀಡು, ಕೆ.ನೀಡುಗಣೆ, ಮೇಕೇರಿ, ಹಾಕತ್ತೂರು, ಹೊಸ್ಕೇರಿ, ಮರಗೋಡು, ಕಾಂತೂರು ಮೂರ್ನಾಡು, ಹೊದ್ದೂರು, ನಾಪೋಕ್ಲು, ಕೊಣಂಜಗೇರಿ, ನರಿಯಂದಡ, ಕಕ್ಕಬ್ಬೆ, ಎಮ್ಮೆಮಾಡು, ಬಲ್ಲಮಾವಟಿ, ಅಯ್ಯಂಗೇರಿಗಳಲ್ಲಿ ಮಣ್ಣು ಸಂಗ್ರಹಿಸಿತು. ಅ. 28ರಂದು ಬೆಟ್ಟಗೇರಿ, ಬೇಂಗೂರು, ಕುಂದಚೇರಿ, ಭಾಗಮಂಡಲ, ಕರಿಕೆ, ಪೆರಾಜೆ, ಚೆಂಬು, ಸಂಪಾಜೆ, ಮದೆ, ಕಡಗದಾಳು, ಮಕ್ಕಂದೂರು ಗ್ರಾಮ ಪಂಚಾಯಿತಿಗಳಲ್ಲಿ ಮೃತ್ತಿಕೆ ಸಂಗ್ರಹಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT