ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಕಾರಿ ಅಧೀಕ್ಷಕ ಹುದ್ದೆ ನಿರಾಕರಿಸುತ್ತಿರುವ ಅಧಿಕಾರಿಗಳು!

ಹುದ್ದೆ ದುರ್ಬಲ ಎಂಬ ಕಾರಣಕ್ಕೆ ಬಡ್ತಿಗೆ ಹಿಂದೇಟು *ಮೂರು ವರ್ಷದಿಂದ ಖಾಲಿ ಉಳಿದ ಸ್ಥಾನಗಳು
Published 25 ಆಗಸ್ಟ್ 2023, 21:27 IST
Last Updated 25 ಆಗಸ್ಟ್ 2023, 21:27 IST
ಅಕ್ಷರ ಗಾತ್ರ

ಬೆಂಗಳೂರು: ‘ದುರ್ಬಲ’ ಹುದ್ದೆ ಎಂಬ ಕಾರಣಕ್ಕಾಗಿ ಅಬಕಾರಿ ಇಲಾಖೆಯ ಅಧೀಕ್ಷಕ (ಎಸ್‌ಪಿಇ) ಸ್ಥಾನಕ್ಕೆ ನೀಡಿದ್ದ ಬಡ್ತಿಯನ್ನೇ ಉಪ ಅಧೀಕ್ಷಕರು (ಡಿವೈಎಸ್‌ಇ) ನಿರಾಕರಿಸುತ್ತಾ ಬಂದಿದ್ದು, ಹೆಚ್ಚಿನ ಜಿಲ್ಲೆಗಳಲ್ಲಿ ಅಧೀಕ್ಷಕರ ಸ್ಥಾನ ಖಾಲಿ ಉಳಿದಿವೆ. 

ಡಿವೈಎಸ್‌ಇಗಳು ಕಳೆದ ಮೂರು ವರ್ಷಗಳಿಂದ ವಿವಿಧ ಕಾರಣ ನೀಡಿ ಬಡ್ತಿ ನಿರಾಕರಿಸುತ್ತಿದ್ದಾರೆ. ಅಬಕಾರಿ ಇಲಾಖೆ ಮತ್ತೊಮ್ಮೆ ಬಡ್ತಿ ಪ್ರಕ್ರಿಯೆ ಆರಂಭಿಸಲು ಅಧಿಸೂಚನೆ ಹೊರಡಿಸಿದೆ. ಇಲಾಖಾ ವಿಚಾರಣೆ, ಶಿಸ್ತುಕ್ರಮ ಬಾಕಿ ಇರುವವರನ್ನು ಹೊರತುಪಡಿಸಿ, ಸಕಾರಣವಿಲ್ಲದೇ ಬಡ್ತಿ ನಿರಾಕರಿಸುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಇಲಾಖೆ ನೀಡಿದ್ದ ಬಡ್ತಿಯನ್ನು ಕೆಲ ವರ್ಷಗಳಿಂದ ಡಿವೈಎಸ್‌ಇಗಳು ನಿರಾಕರಿಸುತ್ತಾ ಬಂದಿರುವುದರಿಂದ 35 ಎಸ್‌ಪಿಇ ಸ್ಥಾನಗಳು ಖಾಲಿ ಉಳಿದಿದ್ದವು. ಅವುಗಳ ಜತೆಗೆ ಸ್ಥಳೀಯ ವೃಂದದ ಐದು ಸ್ಥಾನಗಳು ಸೇರಿ 39 ಹುದ್ದೆಗಳ ಭರ್ತಿಗಾಗಿ ರಾಜ್ಯಮಟ್ಟದ ಜ್ಯೇಷ್ಠತಾ ಪಟ್ಟಿಯನ್ನು ಬಿಡುಗಡೆ ಮಾಡಿರುವ ಇಲಾಖೆಯ ಆಯುಕ್ತರು, 2020ರ ನಂತರ ಬಡ್ತಿ ನಿರಾಕರಿಸಿದವರ ಪಟ್ಟಿಯನ್ನು ಪ್ರತ್ಯೇಕವಾಗಿ ‘ಪರ್ಫಾಮೆನ್ಸ್‌ ರಿಪೋರ್ಟಿಂಗ್ ಸಿಸ್ಟಂ’ನಲ್ಲಿ ಅಳವಡಿಸಲು ಸೂಚಿಸಿದ್ದಾರೆ.

ಡಿವೈಎಸ್‌ಇಗಳ ಮರ್ಜಿಯಲ್ಲಿ ಅಧೀಕ್ಷಕರು!

ಪ್ರತಿ ಅಬಕಾರಿ ಜಿಲ್ಲೆಯಲ್ಲೂ ‘ಎ’ ಗ್ರೂಪ್‌ನ ತಲಾ ಒಂದು ಉಪ ಆಯುಕ್ತ, ಅಧೀಕ್ಷಕರ ಹುದ್ದೆಗಳಿವೆ. ಉಪ ಆಯುಕ್ತರಿಗೆ ಇಲಾಖೆಯ ವಾಹನ, ಸಿಬ್ಬಂದಿ ಮೇಲೆ ಉಸ್ತುವಾರಿ, ಅಬಕಾರಿ ಪ್ರಕರಣಗಳ ಕಾರ್ಯಾಚರಣೆ, ತನಿಖೆಯ ಅಧಿಕಾರ ನೀಡಲಾಗಿದೆ. ಇದೇ ಅಧಿಕಾರವನ್ನು ಇಲಾಖೆಯ ಉಪ ಅಧೀಕ್ಷಕರು ತಮ್ಮ ಉಪ ವಲಯದ ವ್ಯಾಪ್ತಿಯಲ್ಲಿ ಹೊಂದಿದ್ದಾರೆ. ಆದರೆ, ಅಧೀಕ್ಷಕರಿಗೆ ಪ್ರಕರಣಗಳ ಸ್ವಯಂ ಕಾರ್ಯಾಚರಣೆ, ತನಿಖೆ ಕೈಗೊಳ್ಳುವ, ಅಧೀನ ಅಧಿಕಾರಿಗಳ ಮೇಲೆ ಹಿಡಿತ ಹೊಂದುವ ಯಾವ ಅಧಿಕಾರವೂ ಇಲ್ಲ. ವಿವಿಧ ಠಾಣೆಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳನ್ನು ಪರಿಶೀಲಿಸಲು ಲಾಗಿನ್‌ ಆಗುವ ಅವಕಾಶವೂ ಅವರಿಗಿಲ್ಲ.

ಇಲಾಖೆಯ ವಾಹನ, ಚಾಲಕರ ಸೌಲಭ್ಯವೂ ಇಲ್ಲ. ಎಲ್ಲಾದರೂ ಹೋಗಬೇಕೆಂದರೆ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿರುವ ಡಿವೈಎಸ್‌ಇಗಳಿಗೆ ಮನವಿ ಮಾಡಿಕೊಂಡು ಖಾಲಿ ಇದ್ದ ಸಮಯದಲ್ಲಿ ಅವರ ವಾಹನ ಪಡೆಯಬೇಕಿದೆ. ಅಧೀಕ್ಷಕರ ಸ್ಥಾನಕ್ಕೆ ಸರ್ಕಾರ ನಿರ್ದಿಷ್ಟ ಕಾರ್ಯಸೂಚಿಯನ್ನೂ ನಿಗದಿ ಮಾಡಿಲ್ಲ. ಇದರಿಂದ ಇಲಾಖೆಯ ಇತರೆ ಕಾರ್ಯಗಳಿಗೂ ಅವರು ಅಧೀನ ಅಧಿಕಾರಿಗಳನ್ನೇ ಅವಲಂಬಿಸಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT