ನವದೆಹಲಿ: ‘ಮುಡಾ ಹಗರಣದಲ್ಲಿ ತನಿಖೆಗೆ ಅನುಮತಿ ನೀಡಿದಾಗ ಕಾಂಗ್ರೆಸ್‌ನವರು ರಾಜ್ಯಪಾಲರ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದರು. ಈಗ ಕಾಂಗ್ರೆಸ್‌ನವರು ಸಿದ್ದರಾಮಯ್ಯ ಅವರಿಗೆ ಚಪ್ಪಲಿ ಹಾರ ಹಾಕುತ್ತಾರಾ? ಅವರ ಪ್ರತಿಕೃತಿ ದಹನ ಮಾಡುತ್ತಾರಾ’ ಎಂದು ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
‘ಕುಮಾರಸ್ವಾಮಿ ರಾಜೀನಾಮೆ ಕೊಟ್ಟರಾ’ ಎಂದು ಕೇಳಿದ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟ ಅವರು, ‘ನನ್ನ ಮೇಲಿನ ಪ್ರಕರಣಗಳಿಗೂ ನಿಮ್ಮ ಹಗರಣಕ್ಕೂ ವ್ಯತ್ಯಾಸ ಇದೆ’ ಎಂದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಸರ್ಕಾರಿ ಭೂಮಿ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಬಗ್ಗೆಯೂ ಮಾತನಾಡುತ್ತಿದ್ದಾರೆ. ಅರ್ಜಿ ಹಾಕದಿರುವ ಕಂಪನಿಗೆ ಗಣಿ ಗುತ್ತಿಗೆ ಕೊಡಲಾಗಿದೆ ಎನ್ನುತ್ತಿದ್ದಾರೆ. ಅವರು ಅರ್ಜಿ ಹಾಕಿದ್ದಾರೆ. ಆದರೆ, ಅವರಿಗೆ ಗಣಿ ಗುತ್ತಿಗೆ ನೀಡಲಾಗಿಲ್ಲ. ಅವರಿಗೆ ಒಂದು ಇಂಚು ಭೂಮಿಯನ್ನು ಕೊಟ್ಟಿಲ್ಲ. ರಾಜ್ಯ ಬೊಕ್ಕಸಕ್ಕೆ ನಯಾಪೈಸೆ ನಷ್ಟ ಆಗಿಲ್ಲ. ಹೀಗಿದ್ದ ಮೇಲೆ ಅದು ಹಗರಣ ಹೇಗೆ ಆಗುತ್ತದೆ’ ಎಂದು ಪ್ರಶ್ನಿಸಿದರು.
‘ಗಂಗೇನಹಳ್ಳಿ ಡಿನೋಟಿಫಿಕೇಶನ್ ವಿಚಾರಕ್ಕೆ ಬರುವುದಾರೆ, ರಾಜಶೇಖರಯ್ಯ ಅನಾಮಿಕ ಎಂದು ಸಚಿವರು ಹೇಳಿದ್ದಾರೆ. 2007ರ ವಿಳಾಸವನ್ನು ಈಗ ಹುಡುಕಿಕೊಂಡು ಹೋದರೆ ಏನು ಪ್ರಯೋಜನ? ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಹುಡುಕಿಕೊಂಡು ಯಾಕೆ ಹೋಗಲಿಲ್ಲ? ಇವರು ನನ್ನ ನೈತಿಕತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನನ್ನ ನೈತಿಕತೆಯನ್ನು ಸಾಬೀತು ಮಾಡಿ ಉತ್ತರ ಕೊಡುತ್ತೇನೆ’ ಎಂದು ಅವರು ಸವಾಲು ಹಾಕಿದರು.
‘ಗಂಗೇನಹಳ್ಳಿ ಭೂಮಿ ಸರ್ಕಾರಿ ಭೂಮಿ ಎಂದು ಸುಳ್ಳು ಹೇಳಿದ್ದಾರೆ. ಸ್ವಾಧೀನ ಮಾಡಿಕೊಂಡ ಭೂಮಿಗೆ ಬಿಡಿಎಯವರು ಪರಿಹಾರ ನೀಡಿದ್ದಾರೆಯೇ? ಅಲ್ಲಿ ಬಡಾವಣೆ ಮಾಡಲಾಗಿದೆಯೇ? ಯಾರಿಗಾದರೂ ನಿವೇಶನ ಹಂಚಿಕೆ ಆಗಿದೆಯಾ? 1975-76ರಲ್ಲಿ ಅದಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಸ್ವಾಧೀನ ಮಾಡಿಕೊಂಡಿದ್ದ ಜಾಗದಲ್ಲಿ 2007ರ ವರೆಗೂ ನಿವೇಶನ ಮಾಡಿ ಹಂಚಿಲ್ಲ? ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಐದು ವರ್ಷದಲ್ಲಿ ಉಪಯೋಗ ಮಾಡಿಕೊಳ್ಳದಿದ್ದರೆ ಆ ಭೂಮಿಯನ್ನು ಮರಳಿ ರೈತರಿಗೆ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಇದು ಸರ್ಕಾರಕ್ಕೆ ಗೊತ್ತಿಲ್ಲವೇ’ ಎಂದು ಅವರು ಪ್ರಶ್ನಿಸಿದರು.
‘ನನ್ನ ಬಾವಮೈದ ಆ ಜಾಗವನ್ನು ಖರೀದಿ ಮಾಡಿದ್ದಾನೆ. ಡಿನೋಟಿಫಿಕೇಶನ್ ಆದ ಜಾಗವನ್ನು ಮಾರಬಾರದು ಎಂದು ಕಾನೂನಿನಲ್ಲಿ ಇದೆಯಾ’ ಎಂದು ಅವರು ಕೇಳಿದರು.
‘ಕರ್ನಾಟಕದಲ್ಲಿ ಇರುವುದು ದರೋಡೆಕೋರರ ಸರ್ಕಾರ. ಅವರು ಹಿಂದೆಯೂ ದರೋಡೆ ಮಾಡುತ್ತಿದ್ದರು. ಈಗಲೂ ಮಾಡುತ್ತಿದ್ದಾರೆ. ಕೇರಳದ ಬಸ್‌ನಲ್ಲಿ ಚಿನ್ನದ ವ್ಯಾಪಾರಿಯಿಂದ ಚಿನ್ನ ಲೂಟಿ ಮಾಡಿದ ನಿಮ್ಮ ಹಣೆಬರಹ ಗೊತ್ತಿದೆ’ ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.