ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆ ಸಾವು: ಭಾರತೀಯ ನ್ಯಾಯ ಸಂಹಿತೆ ಅಡಿ ರಾಜ್ಯದ ಮೊದಲ ಪ್ರಕರಣ ದಾಖಲು

ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ ಕಾರು ಚಾಲಕ ಸಾಗರ್‌ ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ದೂರಲಾಗಿದೆ.
Published 1 ಜುಲೈ 2024, 12:57 IST
Last Updated 1 ಜುಲೈ 2024, 12:57 IST
ಅಕ್ಷರ ಗಾತ್ರ

ಹಾಸನ: ದೇಶದಾದ್ಯಂತ ಜುಲೈ 1 ರಿಂದ ನೂತನ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಜಾರಿಯಾಗಿದ್ದು, ಇದರಡಿ ರಾಜ್ಯದ ಮೊದಲ ಪ್ರಕರಣ ಹಾಸನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬೆಂಗಳೂರಿನ ವಿಮಾನ ನಿಲ್ದಾಣದಿಂದ ಬರುತ್ತಿದ್ದ ವೇಳೆ ತಾಲ್ಲೂಕಿನ ಸೀಗೆಗೇಟ್‌ ಬಳಿ ಕಾರು ರಸ್ತೆ ಬದಿಗೆ ಉರುಳಿ ಬಿದ್ದಿದ್ದು, ಇಂದುಮತಿ (67) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಂದುಮತಿ ಅವರ ಪತಿ ಯೋಗೀಶ್‌ ಹಾಗೂ ಕಾರು ಚಾಲಕ ಸಾಗರ್ ಗಾಯಗೊಂಡಿದ್ದಾರೆ.

ಕಾಶಿ ಯಾತ್ರೆ ಮುಗಿಸಿ ಇಂದುಮತಿ ಜೂನ್ 30 ರಂದು ರಾತ್ರಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇಂದುಮತಿ ಮತ್ತು ಯೋಗೀಶ್ ದಂಪತಿಯನ್ನು ಜುಲೈ 1 ರಂದು ಕಾರು ಚಾಲಕ ಸಾಗರ್ ಎಂಬಾತ ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣದಿಂದ ಹಳೇಬೀಡಿಗೆ ಕರೆತರುತ್ತಿದ್ದ. ಕಾರು ಹಾಸನದ– ಹಳೆಬೀಡು ರಸ್ತೆಯ ಸೀಗೆಗೇಟ್ ಸಮೀಪದ ಸೇತುವೆಯ ಮೇಲಿನಿಂದ ಉರುಳಿ ಬಿದ್ದಿದೆ.

ಇಂದುಮತಿ ಅವರ ಅಳಿಯ ಡಾ.ರವಿ ಎಚ್‌.ಎಸ್. ನೀಡಿರುವ ದೂರಿನಂತೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್​ಎಸ್​) ಕಲಂ 281, 106 ಅಡಿ ಸೋಮವಾರ ಬೆಳಿಗ್ಗೆ 9.15ಕ್ಕೆ ಹಾಸನ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ ಕಾರು ಚಾಲಕ ಸಾಗರ್‌ ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ದೂರಲಾಗಿದೆ.

ಕೇಂದ್ರ ಸರ್ಕಾರ ಐಪಿಸಿ, ಸಿಆರ್​ಪಿಸಿ, ಎವಿಡೆನ್ಸ್ ಆ್ಯಕ್ಟ್ ಬದಲು ಭಾರತೀಯ ನ್ಯಾಯ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ. ಸಾಕ್ಷ್ಯ ಅಧಿನಿಯಮ ಜಾರಿಗೆ ತಂದಿದ್ದು, ಇದರಡಿ ರಾಜ್ಯದಲ್ಲಿಯೇ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT