ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಬಾಗ: ಗೃಹಲಕ್ಷ್ಮಿ ಹಣದಲ್ಲಿ ಮಹಿಳೆಯರಿಗೆ ಹೋಳಿಗೆ ಊಟ ಹಾಕಿದ ವೃದ್ಧೆ

Published : 25 ಆಗಸ್ಟ್ 2024, 14:26 IST
Last Updated : 25 ಆಗಸ್ಟ್ 2024, 14:26 IST
ಫಾಲೋ ಮಾಡಿ
Comments

ರಾಯಬಾಗ (ಬೆಳಗಾವಿ ಜಿಲ್ಲೆ): ‘ಗೃಹಲಕ್ಷ್ಮಿ’ ಯೋಜನೆಯಡಿ ಬಂದ ಹಣದಲ್ಲಿ ತಾಲ್ಲೂಕಿನ ಸುಟ್ಟಟ್ಟಿಯಲ್ಲಿ ವೃದ್ಧೆಯೊಬ್ಬರು, ಊರಿನ ಮಹಿಳೆಯರಿಗೆ ಉಡಿ ತುಂಬಿ ಹೋಳಿಗೆ ಊಟ ಹಾಕಿಸಿದ್ದಾರೆ.

ಇಲ್ಲಿನ ಗ್ರಾಮದೇವತೆ ದೇವಸ್ಥಾನದಲ್ಲಿ ಶುಕ್ರವಾರ ಐವರು ಮಹಿಳೆಯರಿಗೆ ಉಡಿ ತುಂಬಿ, ಗ್ರಾಮದ ಮಹಿಳೆಯರಿಗೆ ಹೋಳಿಗೆ ಊಟ ಹಾಕಿಸಿದ ಅಕ್ಕಾತಾಯಿ ಲಂಗೋಟಿ, ‘ಗ್ಯಾರಂಟಿ ಯೋಜನೆ ಜಾರಿಗೊಳಿಸಿ, ಬಡವರ ಬದುಕಿಗೆ ಶಕ್ತಿ ತುಂಬಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಳಿತಾಗಲಿ’ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಜಾರಿಗೊಳಿಸಿದ ಗೃಹಲಕ್ಷ್ಮಿ ಯೋಜನೆ ಹಣದಿಂದ ನಮಗೆ ಅನುಕೂಲವಾಗಿದೆ. ನನಗೆ 10 ಕಂತುಗಳ ಹಣ ಬಂದಿದೆ. ನಮ್ಮಂಥವರಿಗೆ ನೆರವಾದ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲೆಂದು ದೇವರಲ್ಲಿ ಪ್ರಾರ್ಥಿಸಿ, ಮಹಿಳೆಯರಿಗೆ ಹೋಳಿಗೆ ಊಟ ಹಾಕಿಸಿದ್ದೇನೆ’ ಎಂದು ಹೇಳಿದರು.

ಸುಮಾರು 200 ಮಹಿಳೆಯರಿಗೆ ಹೋಳಿಗೆ ಊಟ ಹಾಕಿಸಿದ್ದೇನೆ. ₹14 ಸಾವಿರ ಖರ್ಚಾಗಿದೆ
-ಅಕ್ಕಾತಾಯಿ
ಗೃಹಲಕ್ಷ್ಮಿ ಯೋಜನೆ ಹಣ ಇಂಥವರ ಮನೆಗೆ ತಲುಪುತ್ತಿರುವುದರಿಂದ ಏನೆಲ್ಲ ಅನುಕೂಲವಾಗುತ್ತಿದೆ ಎಂದು ತಿಳಿದು ಸಂತಸವಾಗುತ್ತಿದೆ
–ಲಕ್ಷ್ಮಿ ಹೆಬ್ಬಾಳಕರ, ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

‘ಸಿದ್ದರಾಮಯ್ಯ ಇಡೀ ನಾಡಿಗೆ ಅನ್ನ ಹಾಕುತ್ತಿದ್ದಾರೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ನಾನು ಊಟ ಹಾಕಿಸಿದ್ದೇನೆ. ಕೆಲವು ಮಹಿಳೆಯರು ಇದಕ್ಕೆ ನೆರವಾಗಿದ್ದಾರೆ’ ಎಂದರು.

ಸಚಿವೆಯಿಂದ ಸೀರೆ ಉಡುಗೊರೆ

ಅಕ್ಕಾತಾಯಿ ಲಂಗೋಟಿ ಅವರಿಗೆ ಕರೆ ಮಾಡಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ರೇಷ್ಮೆ ಸೀರೆಯನ್ನು ಭಾನುವಾರ ಉಡುಗೊರೆಯಾಗಿ ಕೊಟ್ಟಿದ್ದಾರೆ.

‘ಈಗ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದಿ. ನಿನ್ನ ಮಗಳಾದ ನನಗೆ ಯಾವಾಗ ಹಾಕಿಸುತ್ತೀ?’ ಎಂದು ಅವರು ಕೇಳಿದಾಗ, ‘ಖಂಡಿತವಾಗಿ ಬಾ. ನಿನಗೂ ಊಟ ಹಾಕಿಸ್ತೀನಿ. ನೀನೇ ನಮಗೆಲ್ಲ ಗೃಹಲಕ್ಷ್ಮೀ ಹಣ ಕೊಡುವ ಮನೆಮಗಳು. ನಿನಗೆ ಇಲ್ಲ ಎನ್ನಲಾಗುವುದೇ’ ಎಂದು ಅಕ್ಕಾತಾಯಿ ಹೇಳಿದರು. ಆಗ ಅಕ್ಕಾತಾಯಿ ಅವರಿಗೆ ರೇಷ್ಮೆ ಸೀರೆ ಕಳುಹಿಸುವುದಾಗಿ ಸಚಿವೆ ತಿಳಿಸಿದರು.

ನಂತರ ತಮ್ಮ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ಅಜ್ಜಿಯ ಮನೆಗೆ ಕಳುಹಿಸಿ, ರೇಷ್ಮೆ ಸೀರೆ ಮತ್ತು ಹೋಳಿಗೆಯನ್ನು ನೀಡಿ ಅಜ್ಜಿಯನ್ನು ಸನ್ಮಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT