ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲುಪದ ‘ಗೃಹಲಕ್ಷ್ಮಿ’; ಮಹಿಳೆಯರ ದೂರಿನ ಸುರಿಮಳೆ

ಚಿಟಗುಪ್ಪ: ಜನಸ್ಪಂದನ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ
Published 4 ಮಾರ್ಚ್ 2024, 16:21 IST
Last Updated 4 ಮಾರ್ಚ್ 2024, 16:21 IST
ಅಕ್ಷರ ಗಾತ್ರ

ಚಿಟಗುಪ್ಪ: ‘ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಿ ಮೂರು ತಿಂಗಳು ಕಳೆದರೂ ಇದುವರೆಗೂ ಮಂಜೂರಾತಿ ಆದೇಶ ಬಂದಿಲ್ಲ ಸಾಹೇಬ್ರಾʼ ಎಂದು ಪಟ್ಟಣದ ಕಾವೇರಿ, ಬಸಮ್ಮ, ಗೀತಮ್ಮ ಎಂಬವರು ತಮ್ಮ ನೋವು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಎದುರು ತೋಡಿಕೊಂಡರು.

ಇಲ್ಲಿಯ ರಘೋಜಿ ಸಭಾಂಗಣದಲ್ಲಿ ಸೋಮವಾರ ಜನಸ್ಪಂದನ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲೇ ಮೂವರು ಮಹಿಳೆಯರು ದೂರಿನ ಮಾತು ಕೇಳಿ ಉಸ್ತುವಾರಿ ಸಚಿವರು ಕೆಲ ಸಮಯ ತಬ್ಬಿಬ್ಬಾದರು.

‘ನನ್ನ ಹೆಸರಿನಲ್ಲಿ ಭೂಮಿ ಇರುವ ಪಹಣಿ ಇದ್ದರೂ ಅರಣ್ಯ ಇಲಾಖೆಯವರು ದಬ್ಬಾಳಿಕೆ ಮಾಡಿ ನನ್ನ ಭೂಮಿ ಸುತ್ತಲು ಬೇಲಿ ನಿರ್ಮಿಸಿಕೊಂಡು ಅರಣ್ಯ ಇಲಾಖೆಗೆ ಸೇರಿದ ಭೂಮಿಯಾಗಿದೆ ಎಂದು ಹೆದರಿಸುತ್ತಿದ್ದಾರೆ. ತುಂಡು ಭೂಮಿಯನ್ನೇ ನಂಬಿ ಉಳುಮೆ ಮಾಡಿಕೊಂಡು ಬದುಕುತ್ತಿದ್ದ ನಮ್ಮ ಕುಟುಂಬ ಬೀದಿಪಾಲಾಗಿದೆ ಎಂದು ಚಾಂಗಲೇರಾ ಗ್ರಾಮದ ರೈತ ಶಿವಪ್ಪ ಈರಪ್ಪ ನೋವು ತೋಡಿಕೊಂಡರು.

ಕರಕನಳ್ಳಿ ಗ್ರಾಮದ ರಂಗಮ್ಮ, ಪಾರಮ್ಮ, ಕಮಲಾಬಾಯಿ ಅವರಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮೂರು ತಿಂಗಳ ಹಿಂದೆ ಸಲ್ಲಿಸಿದ ಅರ್ಜಿಯ ಸ್ವಿಕೃತಿ ಪತ್ರ ಬಂದಿದೆ. ಆದರೆ ಇದುವರೆಗೂ ಮಂಜೂರಾತಿ ಆದೇಶವಾಗಲಿ, ಹಣವಾಗಲಿ ನಮಗೆ ತಲುಪಿಲ್ಲ. ಮೇಲಿಂದ ಮೇಲೆ ನೆಮ್ಮದಿ ಕೇಂದ್ರ, ನಾಡ ಕಚೇರಿ, ತಹಶೀಲ್ದಾರ್‌ ಕಚೇರಿಗಳಿಗೆ ಉರಿ ಬಿಸಿಲಿನಲ್ಲಿ ಅಲೆಯುವುದರಲ್ಲಿ ಸುಸ್ತಾಗಿದ್ದೇವೆ. ಈಗಲಾದರೂ ನಮಗೆ ಯೋಜನೆಯ ಹಣ ಬಿಡುಗಡೆ ಮಾಡ್ಸಿ ಸಾಹೇಬ್ರೆ ಎಂದು ಸಚಿವರಿಗೆ ಕೇಳಿದರು.

ವಿವಿಧ ಇಲಾಖೆಯ ಒಟ್ಟು 84 ಅರ್ಜಿಗಳು ಸ್ವೀಕರಿಸಲಾಯಿತು. ಅರಣ್ಯ, ಜೆಸ್ಕಾಂ, ಕಂದಾಯ, ಸಮಾಜ ಕಲ್ಯಾಣ, ಸಾರಿಗೆ, ಆರೋಗ್ಯ, ಪುರಸಭೆ, ತಾಲ್ಲೂಕು ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ನಾಗರಿಕರು ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದ್ದರು. ಸಚಿವರು ಎಲ್ಲರ ಅರ್ಜಿಗಳು ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಪರಿಹರಿಸಲು ಸೂಚಿಸಿದರು.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಅರ್ಜಿಗಳು ತಂತ್ರಾಂಶದಲ್ಲಿಯ ಆಡಳಿತಾತ್ಮಕ ನಿಯಮಗಳಿಂದ ಮಂಜೂರಾತಿ ಪಡೆಯಲು ಕಷ್ಟವಾಗುತ್ತಿರುವುದಕ್ಕೆ ಫಲಾನುಭವಿಗಳಿಗೆ ಸೂಕ್ತ ದಾಖಲೆಗಳು ಒದಗಿಸಿ ಅರ್ಜಿ ಸಲ್ಲಿಸಲು ತಿಳಿಸಿದರು.

ಕೆಲವು ಗ್ರಾಮಗಳಲ್ಲಿ ಮನೆಗಳ ಮೇಲಿನಿಂದ ವಿದ್ಯುತ್‌ ತಂತಿ ಹರಿದು ಹೋಗಿದ್ದಕ್ಕೆ ನಾಗರಿಕರ ಮನವಿಯಂತೆ ಜೆಸ್ಕಾಂ ಅಧಿಕಾರಿಗಳಿಗೆ ತಕ್ಷಣ ತೆರವು ಗೊಳಿಸಿ ಬೇರೆಡೆಯಿಂದ ಸಾಗಿಸಲು ಆದೇಶಿಸಿದರು.

‘ದೇಶದ ಪ್ರಜಾಪ್ರಭುತ್ವದ ಮೂಲ ಉದ್ದೇಶ ಸಾಕಾರಗೊಳಿಸಿ ನಾಗರಿಕರ ಬದುಕು ಹಸನಗೊಳಿಸುವುದು ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮೂಲ ಗುರಿಯಾಗಿದೆʼ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಕುರಿತು ಎಲ್ಲರಿಗೂ ಮಾಹಿತಿ ಒದಗಿಸುವುದಕ್ಕೆ ಜನಸ್ಪಂದನ ಹಾಗೂ ಫಲಾನುಭವಿಗಳ ಸಮಾವೇಶ ಆಯೋಜನೆ ಮಾಡಲಾಗುತ್ತಿದೆʼ ಎಂದರು.

ವಿಧಾನಸಭಾ ಚುನಾವಣೆ ಕಾಲದಲ್ಲಿ ಮತದಾರರಿಗೆ ಕಾಂಗ್ರೆಸ್‌ ಕೊಟ್ಟ ಐದು ಗ್ಯಾರಂಟಿ ಯೋಜನೆಗಳ ಭರವಸೆ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಪೂರ್ಣಗೊಳಿಸಿ ನುಡಿದಂತೆ ನಡೆದು ಮಾತು ಉಳಿಸಿಕೊಂಡಿದೆ. ಬೀದರ್‌ ಜಿಲ್ಲೆಗೆ ಇದುವರೆಗೆ ಐದು ಯೋಜನೆಗಳ ಮೂಲಕ ತಿಂಗಳಿಗೆ ಒಟ್ಟು ರೂಪಾಯಿ ಒಂದು ಸಾವಿರ ನಾಲ್ಕು ಕೋಟಿ ಮೊತ್ತ ಫಲಾನುಭವಿಗಳ ಖಾತೆಗೆ ಜಮ ಮಾಡಲಾಗುತ್ತಿದೆʼ ಎಂದು ನುಡಿದರು.

ವಿಧಾನ ಪರಿಚತ್‌ ಸದಸ್ಯ ಡಾ.ಚಂದ್ರಶೇಖರ್‌ ಪಾಟೀಲ ಮಾತನಾಡಿ, ‘ಗ್ರಾಮೀಣ ನಾಗರಿಕರು ತಮ್ಮ ಸಮಸ್ಯೆ ತೆಗೆದುಕೊಂಡು ಸರ್ಕಾರಿ ಕಚೇರಿಗಳಿಗೆ ಬಂದಾಗ ಅಧಿಕಾರಿಗಳು ತಾಳ್ಮೆಯಿಂದ ಆಲಿಸಿ ಅಹವಾಲು ಸ್ವಿಕರಿಸಿ ನಿಗದಿತ ಕಾಲವಕಾಶದಲ್ಲಿ ಪೂರ್ಣಗೊಳಿಸಬೇಕು ಅನಾವಶ್ಯಕವಾಗಿ ನಾಗರಿಕರಿಗೆ ಕಚೇರಿಗೆ ಅಲೆಸಬಾರದುʼ ಎಂದು ತಿಳಿಸಿದರು.

ಸಚಿವ ರಹಿಮ್‌ ಖಾನ್‌, ಜಿಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯರು ಗೃಹಲಕ್ಷ್ಮಿ, ಪಡಿತರ ಚೀಟಿ, ವಿದ್ಯುತ್‌ ಸಂಪರ್ಕ, ಅಕ್ರಮ ಸಕ್ರಮಗಳಿಗೆ ಸಂಬಂಧಿಸಿದ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಚಿವರಿಗೆ ಸಲ್ಲಿಸಿದರು.

ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್‌., ಜಿಲ್ಲಾ ಪಂಚಾಯಿತಿ ಸಿಇಒ ಗಿರೀಶ್‌ ಬದೋಲೆ, ಉಪವಿಭಾಗಾಧಿಕಾರಿ ಪ್ರಕಾಶ್‌ ಕುದರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸುರೇಖಾ, ತಹಶೀಲ್ದಾರ್‌ ರವೀಂದ್ರ ದಾಮಾ ಇತರರು ಹಾಜರಿದ್ದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಾಗರಿಕರ ಸಮಸ್ಯೆ ಆಲಿಸಿದರು
ಜನಸ್ಪಂದನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಾಗರಿಕರ ಸಮಸ್ಯೆ ಆಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT