ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನನ್ನು ಕೆಟ್ಟ ಕನಸೆಂದು ಮರೆತುಬಿಡಿ: ವೈ.ಎಸ್. ವಿ. ದತ್ತ

ದತ್ತ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌
Last Updated 22 ಜೂನ್ 2018, 17:29 IST
ಅಕ್ಷರ ಗಾತ್ರ

ಕಡೂರು: ‘ನನ್ನನ್ನು ಮತ್ತು ನನ್ನ ತಪ್ಪುಗಳನ್ನು ಕೆಟ್ಟ ಕನಸು ಎಂದು ಮರೆತು ಬಿಡಿ’ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದು ವ್ಯಾಪಕ ಚರ್ಚೆಯನ್ನೂ ಹುಟ್ಟುಹಾಕಿದೆ.

‘12 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯ, ಶಾಸಕರಾಗಿ ಬದ್ಧತೆ ಮತ್ತು ಜನನಿಷ್ಠೆಯುಳ್ಳ ಜವಾಬ್ದಾರಿ ನಿರ್ವಹಿಸುವ ಭರದಲ್ಲಿ ತಮ್ಮ ಇಷ್ಟದ ವೃತ್ತಿ, ಹವ್ಯಾಸ, ಅಭಿರುಚಿಗಳು, ಚಟುವಟಿಕೆಗಳಿಂದ ದೂರವಾಗಿ ನನ್ನತನವನ್ನೇ ಕಳೆದುಕೊಂಡಿದ್ದೆ. ಆದರೆ ಇದೀಗ ನಿರುಮ್ಮಳನಾಗಿದ್ದೇನೆ ಎನಿಸುತ್ತಿದೆ. ಇಷ್ಟರ ಮಟ್ಟಿಗೆ ನನ್ನನ್ನು ಒತ್ತಡ ಮುಕ್ತನನ್ನಾಗಿ ಮಾಡಿರುವುದಕ್ಕೆ ಕಡೂರಿನ ಜನತೆಗೆ ಅಭಾರಿಯಾಗಿದ್ದೇನೆ’ ಎಂದು ದತ್ತ ಅವರು ಪತ್ರದಲ್ಲಿ ಬರೆದುಕೊಂಡಿದ್ದಾರೆ.

‘ನನ್ನ ವಿಚಾರವಾದಿ ಸ್ನೇಹಿತ ರವಿಕೃಷ್ಣಾ ರೆಡ್ಡಿ ಅವರು ಕನ್ನಡಕ್ಕೆ ಅನುವಾದಿಸಿರುವ ’ವಿರೋಧಾಭಾಸದ ಹತ್ತು ಆದರ್ಶಗಳು’ ಎಂಬ ಪುಸ್ತಕ ಓದಿ ಪ್ರಭಾವಿತನಾಗಿದ್ದೇನೆ. ವಿವೇಕಾನಂದರು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನೀಡಿದ ಪ್ರವಚನದಲ್ಲಿ ಕೆಂಟ್ ಧರ್ಮಗುರುವಿನ ಚಿಂತನೆ ಉದಾಹರಿಸಿದರಂತೆ. ಅವುಗಳನ್ನು ನಾನು ನನಗರಿವಿಲ್ಲದಂತೆಯೇ ರೂಢಿಸಿಕೊಂಡಿರುವುದು ನನ್ನರಿವಿಗೆ ಬಂದಿದೆ. ಅದನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡಿದ್ದೇನೆ. 5 ವರ್ಷಗಳಲ್ಲಿ ಶಾಸಕನಾಗಿ ಮಾಡಿದ ಅಪಚಾರ, ಅನ್ಯಾಯ, ಮಾಡಿದ ಪ್ರಮಾದಗಳಿಂದಾಗಿ ನನ್ನನ್ನು ದುಷ್ಟನೆಂಬಂತೆ ಶಿಕ್ಷಿಸಿ ಶಿಷ್ಟರಿಗೆ ಅವಕಾಶ ನೀಡಿ ಜನತಂತ್ರದ ಧರ್ಮವನ್ನು ಪಾಲಿಸಿರುವುದು ಸರಿಯಾದ ನಡೆ. ನನ್ನನ್ನೂ ನನ್ನ ತಪ್ಪುಗಳನ್ನು ಕೆಟ್ಟ ಕನಸು ಎಂದು ಮರೆತು ಬಿಡಿ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಉಲ್ಲೇಖಿಸಿದ್ದಾರೆ.

ಪತ್ರ ಓದಿರುವ ಹಲವರು ದತ್ತ ಹತಾಶರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ದತ್ತ ಮತ್ತೆ ರಾಜಕೀಯವಾಗಿ ಸಕ್ರಿಯ ಆಗಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT