ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ–ಸಕ್ರಮ: ಹೈಕೋರ್ಟ್‌ ಸಮ್ಮತಿ ಅಗತ್ಯ

Last Updated 15 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ಸಕ್ರಮಕ್ಕೆ ಸುಗ್ರೀವಾಜ್ಞೆ ಹೊರಡಿಸಿ ‘ಅಕ್ರಮ – ಸಕ್ರಮ’ ಜಾರಿಗೆ ತರಲು ಸರ್ಕಾರ ತರಾತುರಿಯಲ್ಲಿದೆ.

ಆದರೆ, ಅದಕ್ಕೊಂದು ಕಾನೂನು ತೊಡಕು ಇದೆ. ಕರ್ನಾಟಕ ಗ್ರಾಮ ಮತ್ತು ನಗರ ಯೋಜನೆ ಕಾಯ್ದೆ ಕುರಿತು ಹೈಕೋರ್ಟ್‌ ತೀರ್ಪು ನೀಡುವ ವರೆಗೂ  ಸುಗ್ರೀವಾಜ್ಞೆ ಜಾರಿಗೆ ಬರುವುದಿಲ್ಲ.

ಕಾಯ್ದೆಗೆ ತಿದ್ದುಪಡಿ ತಂದು ಅಕ್ರಮ–ಸಕ್ರಮ ಯೋಜನೆ ಜಾರಿಗೊಳಿ­ಸಲು ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದು ತೆರವಾಗದೇ ಯೋಜನೆ­ಯನ್ನು ಅನುಷ್ಠಾನಕ್ಕೆ ತರುವುದು  ಸಾಧ್ಯ­­ವಿಲ್ಲ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಕಾಯ್ದೆಗೆ ತಂದಿರುವ ತಿದ್ದುಪಡಿಯ ಕಾನೂನು ಮಾನ್ಯತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಕೋರ್ಟ್‌ನಲ್ಲಿ ವಿಚಾರಣೆ ಹಂತ­ದಲ್ಲಿದೆ. ಅಕ್ರಮ–ಸಕ್ರಮ ಯೋಜನೆ ಹಲ­ವಾರು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪುಗಳಿಗೆ ವಿರುದ್ಧ­ವಾಗಿದೆ. ‘ಕಾನೂನು ಉಲ್ಲಂಘಿಸಿ ನಗರ ಪ್ರದೇಶಗಳಲ್ಲಿ ನಿರ್ಮಿ­ಸಿ­­ರುವ ಕಟ್ಟಡ ಸಕ್ರಮ ಮಾಡಿಕೊಳ್ಳಲು ಕೆಲವು ಅವಕಾಶ­ಗಳಿವೆ. ಅವನ್ನು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬಳಸಿಕೊಳ್ಳ­ಬೇಕು. ಆದರೆ ಆ ಅವಕಾಶ ದುರುಪ­ಯೋಗ ಮಾಡಿಕೊಳ್ಳ­ಲಾಗು­ತ್ತಿದೆ’ ಎಂದು 2004ರಲ್ಲಿ ಒಡಿಶಾ ಸರ್ಕಾರ ರೂಪಿಸಿದ್ದ ಮಸೂದೆ­ಯೊಂದರ ತೀರ್ಪಿನಲ್ಲಿ ಅದು ಹೇಳಿತ್ತು.

ಅಕ್ರಮ ಕಟ್ಟಡಗಳನ್ನು ಸಕ್ರಮ­ಗೊಳಿ­ಸಲು ತಮಿಳುನಾಡು ಸರ್ಕಾರ 1987–88ರ ನಡುವೆ ಹೊರಡಿಸಿದ್ದ 62 ಆದೇಶಗಳನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿತ್ತು.

ಇಂಥ ಸುಗ್ರಿವಾಜ್ಞೆ ಅಥವಾ ಕಾನೂನು ತಿದ್ದುಪಡಿಗಳಿಂದ ನಗರ ಯೋಜನೆಗಳು ಅಸ್ತವ್ಯಸ್ತಗೊಳ್ಳುವ ಸಾಧ್ಯತೆಗಳಿರುತ್ತವೆ. ಇದರಿಂದ ನಾಗರಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಅಭಿಪ್ರಾಯ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳಲ್ಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ನಗರ ಪ್ರದೇಶಗಳಲ್ಲಿ ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ಯಾವುದೇ ರಿಯಾಯಿತಿ ನೀಡ­ಬಾರದು ಎಂಬುದು ಕೋರ್ಟ್‌ ಅಭಿ­ಪ್ರಾಯ. ‘ಅಕ್ರಮ ಕಟ್ಟಡಗಳ ನಿರ್ಮಾಣ­­ದಿಂದ ಸಂಚಾರ ದಟ್ಟಣೆ ಹೆಚ್ಚಿ ಜನರ ಆರೋಗ್ಯದ ಮೇಲೆ ಕೆಟ್ಟ ಪರಿ­ಣಾಮ ಉಂಟಾಗಿದೆ. ಕಟ್ಟಡ ನಿರ್ಮಿಸಲು ಭಾರಿ ಬಂಡವಾಳ ವಿನಿಯೋಗಿಸಲಾಗಿದೆ  ಎಂಬುದು, ಅಲ್ಲಿ ನಡೆದಿರುವ ಅಕ್ರಮವನ್ನು ಮನ್ನಿಸಲು ಕಾರಣ ಆಗಬಾರದು’ ಎಂದು ಅದು ಹೇಳಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಈ ಎಲ್ಲ ಅಂಶಗಳನ್ನು ಸರ್ಕಾರ ಪರಿಗಣಿಸಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT