ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅತಿಥಿ ಶಾಸಕರಾಗಬೇಡಿ, ಅಳಲು ಆಲಿಸಿ’

ಬಾದಾಮಿಗೆ ಬರುವಂತೆ ಸಿದ್ದರಾಮಯ್ಯಗೆ ಟ್ವಿಟ್; ಪರ– ವಿರೋಧ ಚರ್ಚೆ
Last Updated 13 ಜೂನ್ 2019, 20:15 IST
ಅಕ್ಷರ ಗಾತ್ರ

ಬಾಗಲಕೋಟೆ: ದಯವಿಟ್ಟು ಅತಿಥಿ ಶಾಸಕರಾಗಬೇಡಿ. ಇಲ್ಲಿಯೇ 15 ದಿನ ವಾಸ್ತವ್ಯವಿದ್ದು, ಕ್ಷೇತ್ರದ ಜನರ ಬವಣೆ ಆಲಿಸಿ..

ಇದು ಬಾದಾಮಿಯ ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಶಾಸಕ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮೂಲಕ ಮಾಡಿರುವ ಮನವಿ.

‘ಬಾದಾಮಿಗೆ ಯಾವಾಗ ಭೇಟಿ ನೀಡುತ್ತೀರಿ ಎಂದು ಕ್ಷೇತ್ರದ ಜನರು ಕಾಯುತ್ತಿದ್ದಾರೆ. ಬರ ಪರಿಸ್ಥಿತಿಯ ವೀಕ್ಷಣೆ ಮಾಡಿಲ್ಲ. ದನಕರುಗಳಿಗೆ ನೀರು–ಮೇವು ಇಲ್ಲ, ಜನತಾದರ್ಶನ ಇಲ್ಲ. ಅಧಿಕಾರಿಗಳು ಮಾತು ಕೇಳುತ್ತಿಲ್ಲ. ನೀವು 15 ದಿನವಾದರೂ ಬಾದಾಮಿಯಲ್ಲಿ ಇರಿ ಸಾಹೇಬರೇ, ನೀವಿದ್ದರೆ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ಇಷ್ಟಲಿಂಗ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಪ್ರಚಾರಕ್ಕೆಂದು ಬಾದಾಮಿಗೆ ಬಂದಿದ್ದ ಸಿದ್ದರಾಮಯ್ಯ, ನಂತರ ಕ್ಷೇತ್ರಕ್ಕೆ ಬಂದಿಲ್ಲ. ಜೂನ್ 7ರಂದು ಬರ ಪರಿಸ್ಥಿತಿ ಅಧ್ಯಯನಕ್ಕೆಂದು ಬಾದಾಮಿಗೆ ಬಂದಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಅಧಿಕಾರಿಗಳ ಸಭೆ ನಡೆಸಿದ್ದರು. ಈ ವೇಳೆ, ’ನಿಮ್ಮ ಶಾಸಕರು (ಸಿದ್ದರಾಮಯ್ಯ) ಬಂದಿದ್ದರಾ‘ ಎಂದು ಸಭೆಯಲ್ಲಿದ್ದವರನ್ನು ಪ್ರಶ್ನಿಸಿದ್ದರು.

ಇಷ್ಟಲಿಂಗ ಅವರ ಟ್ವೀಟ್‌ಗೆ ಪರ ಹಾಗೂ ವಿರೋಧದ ಪ್ರತಿಕ್ರಿಯೆಗಳು ಬಂದಿವೆ. ‘ಸಿದ್ದರಾಮಯ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವುದರಿಂದ ಕ್ಷೇತ್ರಕ್ಕೆ ನಿರಂತರವಾಗಿ ಬರಲು ತೊಂದರೆಯಾಗಿದೆ. ಅವರು ಅತಿಥಿ ಶಾಸಕರಾಗಿದ್ದರೆ, ಬಾದಾಮಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತರುತ್ತಿರಲಿಲ್ಲ’ ಎಂದು ಮಲ್ಲಪ್ಪ ಘಾರವಾಡ ಪ್ರತಿಕ್ರಿಯಿಸಿದ್ದಾರೆ.

‘ಸಾವಿರಾರು ಕೋಟಿ ಬಂದಿದೆ ಎಂದು ಅಂತೀರಿ ಕೆಲಸ ಎಲ್ಲಿ ನಡೆದಿದೆ ಸ್ವಲ್ಪ ತೋರಸರಿ’ ಎಂದು ಪ್ರವೀಣ ಹಿರೇಯೆಂಡಿಗೇರಿ ಪ್ರಶ್ನಿಸಿದ್ದಾರೆ. ‘ಅವರಿಗೆ (ಸಿದ್ದರಾಮಯ್ಯ) ಸಮ್ಮಿಶ್ರ ಸರ್ಕಾರ ಉಳಿಸೋದೆ ಯೋಚನೆಯಾಗಿದೆ. ಇನ್ನೆಲ್ಲಿ ಬಾದಾಮಿಗೆ ಬರುತ್ತಾರೆ’ ಎಂದು ಸಂಗೂ ಪಡೆಯಪ್ಪನವರ ಕಾಲೆಳೆದಿದ್ದಾರೆ.

‘ಪ್ರವಾಸಿ ತಾಣ ಬಾದಾಮಿಯಲ್ಲಿ ಮೂತ್ರಾಲಯ ಇಲ್ಲದಿರೋದು ನಾಚಿಗೇಡಿತನ. ಕ್ಷೇತ್ರದಲ್ಲಿ ಶಾಸಕರು ನಡೆದಾಡಿಲ್ಲ. ಮಾರುಕಟ್ಟೆಯ ಮ್ಯೂಸಿಯಂ ರಸ್ತೆ ನೋಡಿದರ ಗೊತ್ತಾಗುತ್ತೆ. ಅಲ್ಲಿನ ಗಲೀಜು ಹೇಗಿದೆ ಅಂತಾ, ಪ್ರವಾಸಿಗರು ಶಾಪ ಹಾಕ್ತಾರ’ ಎಂದು ರಾಜು ದೇಸಾಯಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT