ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಎಂಎ ಜ್ಯುವೆಲ್ಸ್‌’ ವಿರುದ್ಧ ಇ.ಡಿ ತನಿಖೆ

ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಹಮದ್‌ ಮನ್ಸೂರ್‌ ಖಾನ್‌ಗೆ ಎದುರಾಯಿತು ಇನ್ನಷ್ಟು ಸಂಕಷ್ಟ
Last Updated 14 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿ ವಂಚಿಸಿರುವ ‘ಐ ಮಾನಿಟರಿ ಅಡ್ವೈಸರಿ‘ (ಐಎಂಎ) ಕಂಪನಿ ವಿರುದ್ಧ ‘ಜಾರಿ ನಿರ್ದೇಶನಾಲಯ’ (ಇ.ಡಿ) ಪ್ರಕರಣ ದಾಖಲಿಸಿದೆ. ಇದರಿಂದಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಹಮದ್‌ ಮನ್ಸೂರ್‌ ಖಾನ್‌ಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ.

ಜಾರಿ ನಿರ್ದೇಶನಾಲಯದ ಬೆಂಗಳೂರು ಅಧಿಕಾರಿಗಳು ‘ಲೇವಾದೇವಿ ನಿಯಂತ್ರಣ ಕಾಯ್ದೆ’ಯಡಿ ‘ಇಸಿಇಆರ್‌’ ದಾಖಲಿಸಿದ್ದು, ಇದು ಪೊಲೀಸ್ ‘ಎಫ್‌ಐಆರ್‌’ಗೆ ಸಮಾನವಾಗಿದೆ.ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಇ.ಡಿ ತನಿಖೆ ಕೈಗೆತ್ತಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಅಗತ್ಯವಾದರೆ ಎಸ್‌ಐಟಿ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಾಗಿ ಇ.ಡಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿ ಕಂಪನಿ ಹೊರ ದೇಶಗಳಲ್ಲಿ ಏನಾದರೂ ಹೂಡಿಕೆ ಮಾಡಿದೆಯೇ? ಯಾವ್ಯಾವ ದೇಶಗಳಲ್ಲಿ ಹೂಡಿಕೆ ಮಾಡಿದೆ? ಯಾವ ಕ್ಷೇತ್ರಗಳಲ್ಲಿ ಹೂಡಿದೆ. ಹೂಡಿಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ಪರಿಶೀಲಿಸಲಿದೆ. ಕಂಪನಿಯ ಆಸ್ತಿಪಾಸ್ತಿಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡುವ ಸಂಭವವಿದೆ. ತಕ್ಷಣವೇ ತನಿಖೆ ಆರಂಭಿಸಲಿರುವ ಇ.ಡಿ, ಪರಾರಿಯಾಗಿರುವ ಮನ್ಸೂರ್‌
ಖಾನ್‌ ಪತ್ತೆಗೂ ಕ್ರಮ ಕೈಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಹಲವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ’ ಎಂದೂ ಅಧಿಕಾರಿ ಹೇಳಿದರು.

ಜಯನಗರದಲ್ಲಿ ಪ್ರಧಾನ ಕಚೇರಿ, ಶಿವಾಜಿ ನಗರದ ಲೇಡಿ ಕರ್ಜನ್‌ ರಸ್ತೆಯಲ್ಲಿ ಶಾಖಾ ಕಚೇರಿ ಹೊಂದಿರುವ ಐಎಂಎ ಜ್ಯುವೆಲ್ಸ್‌ ಜೂನ್‌ 5ರಿಂದ ಬಾಗಿಲು ಮುಚ್ಚಿದೆ. ಮನ್ಸೂರ್‌ ಖಾನ್‌ ಅವರದ್ದು ಎಂದು ಹೇಳಲಾದ ಮುದ್ರಿತ ಸುರುಳಿ ವಾಟ್ಸ್ ಆ್ಯಪ್‌ನಲ್ಲಿ ಹರಿದಾಡಿದ ಬಳಿಕ ವಂಚನೆ ಪ್ರಕರಣ ಬಯಲಿಗೆ ಬಂದಿದೆ.

ಆತಂಕಕ್ಕೊಳಗಾಗಿರುವ ಜನ ದೂರು ದಾಖಲಿಸುತ್ತಿದ್ದು, ಈವರೆಗೆ 32,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಕಂಪನಿಯ ಎಂಟು ನಿರ್ದೇಶಕರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಶಾಸಕ ರೋಷನ್‌ಬೇಗ್‌ ಸೇರಿದಂತೆ ಕೆಲವು ಪ್ರಭಾವಿಗಳ ಹೆಸರು ಕೇಳಿಬಂದಿದೆ. ಆದರೆ, ಬೇಗ್‌ ಆರೋಪನಿರಾಕರಿಸಿದ್ದಾರೆ.

ಆಡಿಟರ್‌ ವಶಕ್ಕೆ

ಐಎಂಎ ಕಂಪನಿ ಆಡಿಟರ್‌, ಫ್ರೇಜರ್‌ ಟೌನ್‌ ನಿವಾಸಿ ಇಕ್ಬಾಲ್‌ ಖಾನ್‌ ಅವರನ್ನು ಎಸ್‌ಐಟಿ ವಶಕ್ಕೆ ಪಡೆದಿದೆ.ಇಕ್ಬಾಲ್‌ ಖಾನ್‌ ಹಲವು ವರ್ಷಗಳಿಂದ ಕಂಪನಿಯ ಲೆಕ್ಕ ತಪಾಸಣೆ ಮಾಡುತ್ತಿರುವುದರಿಂದ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಬಿಐ ತನಿಖೆಗೆ ಮನವಿ

‘ಐಎಂಎ ಕಂಪನಿ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ನಿರ್ದೇಶಿಸಬೇಕು’ ಎಂದು ಕೋರಿ ಹೂಡಿಕೆದಾರರೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇದೇ 17ರಂದು ನಡೆಸಲಿದೆ.

ಚಿತ್ರದುರ್ಗ ನಿವಾಸಿ ಮೊಹಮ್ಮದ್ ಸಿರಾಜುದ್ದೀನ್ ಈ ಅರ್ಜಿ ಸಲ್ಲಿಸಿದ್ದು, ‘ಇದನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು‘ ಎಂದು ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್‌, ನ್ಯಾಯಮೂರ್ತಿ ಆಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಶುಕ್ರವಾರ ಮನವಿ ಮಾಡಿದರು.

‘ಮೊಹಮದ್‌ ಮನ್ಸೂರ್ ಖಾನ್ ಅವರನ್ನು ರಾಜ್ಯದ ಕೆಲ ಸಚಿವರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ, ಪೊಲೀಸರಿಂದ ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲದ್ದರಿಂದ ಸಿಬಿಐಗೆ ವಹಿಸಲು ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT