ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಬಿರುಸುಗೊಂಡ ಮುಂಗಾರು

ಬಿರುಗಾಳಿಗೆ ಧರೆಗೆ ಉರುಳಿದ ವಿದ್ಯುತ್‌ ಕಂಬಗಳು
Last Updated 10 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾಗದಲ್ಲಿ ಮುಂಗಾರು ಚುರುಕಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಹೊನ್ನಾವರದಲ್ಲಿ ಒಂದೇ ದಿನ 15 ಸೆಂ.ಮೀ ಮಳೆ ದಾಖಲಾಗಿದೆ. ಮಂಗಳೂರು ನಗರದಲ್ಲಿ ಶನಿವಾರ ಧಾರಾಕಾರವಾಗಿ ಮಳೆ ಸುರಿ ದುದರ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ನಿರಂತರ ಮಳೆಯಿಂದಾಗಿ ನಗರದ ಜ್ಯೋತಿ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕಾಂಪೌಂಡ್‌ ಕುಸಿದು ಬಿತ್ತು. ಕಾಂಪೌಂಡ್‌ಗೆ ಹೊಂದಿಕೊಂಡಿದ್ದ ಅಪಾಯಕಾರಿ ಮರವನ್ನು ಪಾಲಿಕೆ ಸಿಬ್ಬಂದಿ ಶನಿವಾರ ಮಧ್ಯಾಹ್ನ ತೆರವುಗೊಳಿಸಿದರು. ಬೆಳ್ತಂಗಡಿಯ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭಾರಿ ಗಾಳಿಯಿಂದಾಗಿ ಮುಡಿಪು ಸಮೀಪ ಹಲವು ವಿದ್ಯುತ್‌ ಕಂಬಗಳು ಧರೆಗೆ ಉರುಳಿದವು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಎನ್‌.ಆರ್.ಪುರ, ಬಾಳೆಹೊನ್ನೂರಿನಲ್ಲಿ ಉತ್ತಮ ಮಳೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿಯೂ ಉತ್ತಮ ಮಳೆಯಾಗಿದೆ.  ಆಗುಂಬೆ ಘಾಟಿಯಲ್ಲಿ ಶನಿವಾರ ರಾತ್ರಿ ಮರ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು.

ಕಾರವಾರ, ಭಟ್ಕಳ, ಕುಮಟಾದಲ್ಲಿ ಶುಕ್ರವಾರ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು ನದಿ, ಹಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಕೆಲವಡೆ ನೀರು ತುಂಬಿ ಕಿರು ಸೇತುವೆಗಳಮೇಲೆ ಹರಿದು ವಾಹನ ಸವಾರರು, ಶಾಲಾಮಕ್ಕಳು ಸೇತುವೆ ದಾಟಲು ಪರದಾಡಬೇಕಾಯಿತು.

ಸಿದ್ದಾಪುರ, ಅಂಕೋಲಾ, ಹಳಿಯಾಳ ಹಾಗೂ ದಾಂಡೇಲಿಯಲ್ಲಿ ಉತ್ತಮ ಮಳೆಯಾಗಿದೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ, ಹೊಸಪೇಟೆಯಲ್ಲಿ ರಭಸದ ಮಳೆಯಾಗಿದ್ದು, ಬಾಗಲಕೋಟೆ ಜಿಲ್ಲೆಯಾದ್ಯಂತ ಹದ ಮಳೆ ಸುರಿದಿದೆ.

ಬೆಳಗಾವಿ ಜಿಲ್ಲೆಯ ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಹಾರೂಗೇರಿ, ರಾಮದುರ್ಗ, ಬೈಲಹೊಂಗಲ ಸೇರಿದಂತೆ ಹಲವೆಡೆ ಹಾಗೂ ಹಾವೇರಿ ಜಿಲ್ಲೆಯಲ್ಲಿ ದಿನವಿಡೀ ತುಂತುರು ಮಳೆಯಾಗಿದೆ.

ಕೊಡಗು ಜಿಲ್ಲೆಯಾದ್ಯಂತ  ಶನಿವಾರ ಜಡಿಮಳೆ ಸುರಿಯಿತು. ಬೆಳಿಗ್ಗೆ 6ರ ಸುಮಾರಿಗೆ ಆರಂಭಗೊಂಡ ಮಳೆ ದಿನವಿಡೀ ಬಿತ್ತು. ಮಡಿಕೇರಿ, ಮಾಂದಲ್‌ಪಟ್ಟಿ, ಕೆ.ನಿಡುಗಣಿ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದೆ.

ನಾಪೋಕ್ಲು, ಭಾಗಮಂಡಲ, ತಲಕಾವೇರಿ ಭಾಗದಲ್ಲಿ ಬಿಟ್ಟುಬಿಟ್ಟು ಜೋರು ಮಳೆ ಸುರಿಯುತ್ತಿದೆ. ದಕ್ಷಿಣ ಕೊಡಗಿನ ವಿರಾಜಪೇಟೆ, ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ತುಂತುರು ಮಳೆ ಮುಂದುವರಿದಿದೆ. ಶೀತಗಾಳಿಗೆ ಜನಜೀವನ ಅಸ್ತವ್ಯಸ್ತವಾಗಿದೆ.

ಗಾಳಿಗೆ ಮಡಿಕೇರಿ ಹಳೆಕೋಟೆ ಚಾವಣಿಯ 500ಕ್ಕೂ ಹೆಚ್ಚು ಹೆಂಚುಗಳು ಹಾರಿಹೋಗಿವೆ. ಇದೇ ಕಟ್ಟಡದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಕಚೇರಿಯೂ ಇದೆ.

ರಾಜ್ಯದ  ಹಲವೆಡೆ ಉತ್ತಮ ಮಳೆ

ಬೆಂಗಳೂರು: ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ  ಹಲವೆಡೆ ಉತ್ತಮ ಮಳೆಯಾಗಿದೆ.

ಶಿರಸಿಯಲ್ಲಿ 14, ಕುಮಟಾದಲ್ಲಿ 11, ಮಂಕಿಯಲ್ಲಿ 10,  ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉತ್ತರ ಕನ್ನಡದ ಕಾರವಾರ, ಗೇರುಸೊಪ್ಪದಲ್ಲಿ ತಲಾ 8,  ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 7, ಕಾರ್ಕಳ, ಕೋಟ, ಕೊಲ್ಲೂರು, ಉತ್ತರ ಕನ್ನಡದ ಅಂಕೋಲಾದಲ್ಲಿ ತಲಾ 6, ಸಿದ್ದಾಪುರ, ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು, ಕಲಬುರ್ಗಿ ಜಿಲ್ಲೆಯ ನೇಲೊಗಿ, ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ.

ಹವಾಮಾನ ಮುನ್ಸೂಚನೆ:  ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT