ಸೋಮವಾರಪೇಟೆ: ‘ನಮ್ಮೂರಲ್ಲಿ ಹರಿಯೋ ನದಿ ನೀರನ್ನು ದೂರದ ಬೆಂಗಳೂರಿನೋರು ಕುಡೀತಾರೆ, ತಮಿಳುನಾಡಿನೋರೂ ಕುಡೀತಾರೆ. ಆದರೆ, ನಮಗೇ ಒಂದು ತೊಟ್ಟೂ ಸಿಕ್ತಿಲ್ಲ. ಬಿಂದಿಗೆ ನೀರಿಗಾಗಿ ಊರೆಲ್ಲಾ ಅಲೆಯಬೇಕಾಗಿದೆ, ಅಕ್ಕಪಕ್ಕದವರ ಜತೆ ಜಗಳ ಆಡಬೇಕಾಗಿದೆ. ಈ ಸಂಕಷ್ಟ ಯಾರಿಗೂ ಬರಬಾರದು ದೇವ್ರೇ...’
ತಾಲ್ಲೂಕಿನ ಕುಶಾಲನಗರ ಹೋಬಳಿ ಕೂಡ್ಲೂರು ಗ್ರಾಮದ ಗೃಹಿಣಿ ಜ್ಯೋತಿ, ಹೀಗೆ ಹೇಳುತ್ತಾ ಬೋರ್‌ವೆಲ್ ಒತ್ತಲು ಶುರು ಮಾಡಿದರು.

15 ನಿಮಿಷ ಕಳೆದ ಮೇಲೆ ನೀರು ನಿಧಾನವಾಗಿ ಬರಲಾರಂಭಿಸಿತು. ಒಂದು ಬಿಂದಿಗೆ ತುಂಬಲು ಅರ್ಧ ಗಂಟೆ ಬೇಕಾಯಿತು. ಒಳಗೆ ಹೋದ ಗೃಹಿಣಿ, ಒಂದು ಪಾತ್ರೆಯಲ್ಲಿ ನೀರು ಸುರಿದುಕೊಂಡು ಬಂದರು. ಬೋರ್‌ವೆಲ್ ಬಾಯಿಗೆ ಬಟ್ಟೆ ಕಟ್ಟಿದ್ದರೂ ನೀರಿನೊಳಗೆ ಕೆಂಪು ಕೆಸರು ತೇಲಾಡುತ್ತಿತ್ತು. ವಾಸನೆ ಬೇರೆ!

ಸುಮಾರು 300 ಮನೆಗಳಿರುವ ಈ ಗ್ರಾಮಕ್ಕೆ ವಾರಕ್ಕೊಮ್ಮೆ ಅರ್ಧ ಗಂಟೆ ನೀರು ಪೂರೈಕೆಯಾಗುತ್ತದೆ. ಅದೂ ಸಣ್ಣಗೆ. ಆದರೂ ಜಿಲ್ಲಾಡಳಿತ ಟ್ಯಾಂಕರ್ ನೀರು ಪೂರೈಸಲು ಮುಂದಾಗಿಲ್ಲ. ಬಾವಿಗಳೆಲ್ಲಾ ಬತ್ತಿ ಹೋಗಿವೆ. ಹೀಗಾಗಿ, ಬೋರ್‌ವೆಲ್ ನೀರೇ ಇವರಿಗೆ ಗತಿ.

‘ನಾವು ಏನು ಕರ್ಮ ಮಾಡಿದ್ದೇವೋ ಏನೋ? ಈ ನೀರು ಕುಡಿದು ಮಕ್ಕಳಿಗೆಲ್ಲಾ ಗಂಟಲು ನೋವು. ಅಡುಗೆಯೂ ಇದರಲ್ಲೇ. ಸಮಸ್ಯೆ ಶುರುವಾಗಿ ಮೂರು ತಿಂಗಳಾದರೂ ನಮ್ಮನ್ನು ಕೇಳೋರಿಲ್ಲ, ಏಕಾದ್ರೂ ಇವರಿಗೆಲ್ಲಾ ಓಟು ಹಾಕಿದೆವೋ’ ಎಂದು ಶಪಿಸುತ್ತಲೇ ಮತ್ತೆ ಬೋರ್‌ವೆಲ್ ಒತ್ತಲಾರಂಭಿಸಿದರು.

ಈ ಗ್ರಾಮದಿಂದ ಹಾರಂಗಿ ಜಲಾಶಯ 6 ಕಿ.ಮೀ, ಕಾವೇರಿ ನದಿ 1 ಕಿ.ಮೀ. ಅಂತರದಲ್ಲಿದ್ದರೂ ನೀರಿಗೆ ತತ್ವಾರ. ಕೂಡುಮಂಗಳೂರು ಗ್ರಾಮ ಪಂಚಾಯ್ತಿಗೆ ಸೇರಿದ ಗ್ರಾಮದವರು ಬೈಕ್, ಸೈಕಲ್‌ನಲ್ಲಿ ಕಾವೇರಿ ನದಿಗೆ ಹೋಗಿ ಬಿಂದಿಗೆಯಲ್ಲಿ ನೀರು ತರುತ್ತಿದ್ದಾರೆ.

ನಲ್ಲಿಗಳಲ್ಲಿ ತಿಂಗಳಿಂದ ನೀರಿಲ್ಲ: ಕುಶಾಲನಗರದಿಂದ 4 ಕಿ.ಮೀ. ದೂರದಲ್ಲಿರುವ ಗೊಂದಿಬಸನಹಳ್ಳಿ ಗ್ರಾಮದಲ್ಲೂ ಇದೇ ಸಮಸ್ಯೆ. ಇಲ್ಲಿರುವ ಕೆಲ ಸಾರ್ವಜನಿಕ ನಲ್ಲಿಗಳಲ್ಲಿ ತಿಂಗಳಿಂದ ನೀರು ಬಂದಿಲ್ಲ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಪಂಚಾಯ್ತಿ ವತಿಯಿಂದ ವಾರಕ್ಕೊಮ್ಮೆ ಬಿಡುವ ನೀರೇ ಇವರಿಗೆ ಗತಿ. ಎತ್ತರದ ಪ್ರದೇಶದಲ್ಲಿರುವ ಮನೆಗಳಿಗೆ ಆ ನೀರೂ ಬರುವುದಿಲ್ಲ. ಇಲ್ಲಿನ ಮಹಿಳೆಯರು 2–3 ಕಿ.ಮೀ. ದೂರ ನಡೆದು ಸ್ವಂತ ಕೊಳವೆ ಬಾವಿ ಇರುವವರ ಮನೆಯಿಂದ ಕಾಡಿಬೇಡಿ ನೀರು ತರುತ್ತಿದ್ದಾರೆ.

‘ಇಡೀ ದಿನ ಕೂಲಿ ಕೆಲಸ ಮಾಡಿ ಬಂದಿರುತ್ತೇವೆ. ಸಂಜೆ ಕಿ.ಮೀ ಗಟ್ಟಲೆ ನಡೆದು ನೀರು ತರಬೇಕು. ಸೊಂಟ, ಬೆನ್ನು ನೋವು ಬಂದಿದೆ. ಆದರೆ, ಮಕ್ಕಳು, ಜಾನುವಾರುಗಳಿಗೆ ನೀರು ಬೇಕಲ್ಲ’ ಎಂದು ಮನೆಯ ಮುಂದಿದ್ದ ನಲ್ಲಿ ತೋರಿಸಿ ಪರಿಸ್ಥಿತಿ ವಿವರಿಸಿದ್ದು ಸಾಕಮ್ಮ.

‘ತೃಪ್ತಿಯಾಗುವಷ್ಟು ನೀರು ಕುಡಿದು ಮೂರು ತಿಂಗಳಾಯಿತು. ಅಪರೂಪಕ್ಕೆ ಬಂದಿದ್ದ ನೆಂಟರು ಬಯ್ದು ಹೋದರು. ನಮಗೆ ಅಕ್ಕಿಗೆ ತೊಂದರೆ ಇಲ್ಲ. ಆದರೆ, ಬೇಯಿಸಲು ನೀರೇ ಇಲ್ಲ. ಇನ್ನೊಂದು ತಿಂಗಳು ಹೀಗೆ ಮುಂದುವರಿದರೆ ದನಕರುಗಳು ಸತ್ತು ಹೋಗುತ್ತವೆ’ ಎಂದ ರೋಹಿಣಿ, ತಲೆ ಮೇಲೆ ಬಟ್ಟೆ ಹಾಕಿಕೊಂಡು ಕುಡಿಯುವ ನೀರು ಹುಡುಕುತ್ತಾ ಹೊರಟರು.

‘ಪೇಟೆಗಳಲ್ಲಿ ಯಾರದ್ದೋ ಮನೆಯಲ್ಲಿ ಜೀತ ಮಾಡಿ ಒಂದೊತ್ತಿನ ಊಟ ಮಾಡಿ ನೆಮ್ಮದಿಯಿಂದ ಮಲಗಿಕೊಳ್ಳಬಹುದು. ಆದರೆ, ಇಲ್ಲಿ ಒಂದು ಲೋಟ ನೀರು ಚೆಲ್ಲಿದ್ದಕ್ಕೆ ಮಗನಿಗೆ ಹೊಡೆಯಬೇಕಾದ ಪರಿಸ್ಥಿತಿ ಬಂದಿದೆ. ವಾರಕ್ಕೊಮ್ಮೆ ಸ್ನಾನ ಮಾಡಬೇಕಾಗಿದೆ. ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸಿ ಮತ್ತೆ ಹಾಕಿಕೊಳ್ಳುತ್ತೇವೆ’ ಎಂದ ಪುಟ್ಟಮ್ಮ ಸೆರಗಿನಿಂದ ಮುಖ ಒರೆಸಿಕೊಂಡರು.

ಕುಶಾಲನಗರದಲ್ಲೂ ಸಮಸ್ಯೆ: ಕುಶಾಲನಗರ ಪಟ್ಟಣದ ಕೆಲ ಬಡಾವಣೆಗಳಲ್ಲಿ ಮೂರರಿಂದ ಐದು ದಿನಗಳಿಗೊಮ್ಮೆ ಅರ್ಧ ಗಂಟೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕಾವೇರಿ ನದಿ ನೀರು ನಿಧಾನವಾಗಿ ತಳ ಹಿಡಿಯುತ್ತಿರುವುದು ಇದಕ್ಕೆ ಕಾರಣ. ಹೀಗಾಗಿ, ಬೈಚನಹಳ್ಳಿ ಪಂಪ್‌ಹೌಸ್ ಬಳಿ ನದಿಗೆ ಮರಳಿನ ಚೀಲಗಳನ್ನು ಅಡ್ಡಲಾಗಿ ಜೋಡಿಸಿ, ಪಂಪ್ ಮಾಡಿ ನಗರಕ್ಕೆ ನೀರು ಪೂರೈಸಲಾಗುತ್ತಿದೆ.

ಕಾವೇರಿ ನದಿ ಕೂಗಳತೆಯ ದೂರದಲ್ಲಿದ್ದರೂ ಮೈಸೂರು–ಕೊಡಗು ಗಡಿಭಾಗದ ಕೊಪ್ಪ, ಆವರ್ತ್, ಮುತ್ತಿನ ಮುಳುಸೋಗೆ ಸೇರಿದಂತೆ ಹಲವು ಗ್ರಾಮಗಳ ಜನರು ಕೊಳವೆ ಬಾವಿ ನೀರಿಗೆ ಮೊರೆ ಹೋಗಬೇಕಾದ ಸ್ಥಿತಿ ಇದೆ. ಚಿಕ್ಕ ಅಳಾವರ, ನೇರುಗಳಲೆ, ಬಾಣಾವರ,ಹೆಬ್ಬಾಲೆ, ಅಬ್ಬೂರುಕಟ್ಟೆ ಗ್ರಾಮಗಳಲ್ಲಿ ಕೆರೆ ತೋಡುಗಳು ಬತ್ತುತ್ತಿವೆ. ಗಣಗೂರು ಗ್ರಾಮ ಪಂಚಾಯ್ತಿಗೆ ಸೇರಿದ 10 ಕೆರೆಗಳು ಒಣಗಿ ಹೋಗಿವೆ.

ನೀರಿನ ಸಮಸ್ಯೆಗೆ ಕಾರಣ? ತಮಿಳುನಾಡಿನವರೆಗೆ ಕೋಟ್ಯಂತರ ಜನರಿಗೆ, ರೈತರು ಹಾಗೂ ಉದ್ಯಮಗಳಿಗೆ ನೀರುಣಿಸುವ ಕಾವೇರಿಯಂಥ ಜೀವನದಿ ಇಲ್ಲಿದ್ದರೂ ಸಮಸ್ಯೆ ಎದುರಿಸಬೇಕಾಗಿದೆ ಎಂಬುದು ಪರಿಸರವಾದಿಗಳ ಆಕ್ರೋಶ.

‘ಕಾಫಿ ತೋಟ, ಗದ್ದೆಗಳನ್ನು ಬಡಾವಣೆ ಹಾಗೂ ರೆಸಾರ್ಟ್‌ಗಳಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿನ ಜನಸಂಖ್ಯೆಗಿಂತ ಎರಡರಷ್ಟು ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಜೊತೆಗೆ ಹೊರಗಿನ ರಾಜ್ಯಗಳಿಂದ ಇಲ್ಲಿಗೆ ಬಂದು ನೆಲೆಯೂರುತ್ತಿದ್ದಾರೆ. ವಿವಿಧ ಯೋಜನೆಗಳಿಗೆ ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ತಲೆದೋರಿದೆ’ ಎನ್ನುತ್ತಾರೆ ಪರಿಸರವಾದಿ ಮುತ್ತಣ್ಣ.

ಮಳೆಗಾಲದಲ್ಲಿ ನದಿ ಉಕ್ಕಿ ಹರಿದರೂ, ನೀರನ್ನು ತಡೆ ಹಿಡಿಯುವ ಅಣೆಕಟ್ಟೆಗಳು ಇಲ್ಲಿಲ್ಲ. ಝರಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೆಚ್ಚು ನೀರು ಬಯಸುವ ಶುಂಠಿ ಬೆಳೆಗೆ ಕೆಲ ರೈತರು ಮೊರೆ ಹೋಗಿದ್ದಾರೆ. ಅದಕ್ಕಾಗಿ ಅಲ್ಲಲ್ಲಿ ಕೊಳವೆ ಬಾವಿ ತೆರೆದಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಬಾವಿಗಳಲ್ಲಿಯೂ ನೀರು ಬಹುಬೇಗನೇ ತಳ ಹಿಡಿಯುತ್ತಿದೆ. ಹೆಚ್ಚು ಇಳಿಜಾರು ಭೂಮಿ ಮತ್ತು ಮಳೆ ಬೀಳುವ ಗುಡ್ಡಗಾಡು ಪ್ರದೇಶಗಳಲ್ಲಿ ತ್ವರಿತ ಸಾಗುವಳಿಯಿಂದ ನೀರು ಭೂಮಿಯಲ್ಲಿ ಇಂಗಲು ಸಾಧ್ಯವಾಗುತ್ತಿಲ್ಲ. ಹಿಂದೆ ಗದ್ದೆಗಳಲ್ಲಿ ಬತ್ತ ಕೃಷಿ ಮಾಡುತ್ತಿದ್ದ ಸಂದರ್ಭದಲ್ಲಿ ಹೆಚ್ಚಿನ ಕಾಲ ನೀರಿರುತ್ತಿದ್ದ ಕಾರಣ ಅಂತರ್ಜಲ ವೃದ್ಧಿಯಾಗುತ್ತಿತ್ತು ಎಂಬುದು ಪರಿಸರವಾದಿಗಳ ಮಾತು.

ಹಾರಂಗಿ ಜಲಾಶಯದಿಂದ ಕುಡಿಯುವ ನೀರು ಪೂರೈಸಿದರೆ ಸಮಸ್ಯೆ ತಪ್ಪಬಹುದು ಎಂಬುದು ಗ್ರಾಮಸ್ಥರ ಅನಿಸಿಕೆ. ಆದರೆ, ಬಾಣಾವರ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಜಲಾಶಯದಿಂದ ನೀರು ಹರಿಸಲು ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ರೂಪಿಸಿದ್ದ ಏತ ನೀರಾವರಿ ಯೋಜನೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗ ಅವರ ಮಗ ದಿನೇಶ್ ಗುಂಡೂರಾವ್ ಜಿಲ್ಲೆಯ ಉಸ್ತುವಾರಿ ಸಚಿವ. ಅವರಾದರೂ ಆಸಕ್ತಿ ತೋರಿಸಲಿ ಎಂಬುದು ಗ್ರಾಮಸ್ಥರ ಕೋರಿಕೆ.

ಗ್ರಾಮದ ನೆರವಿಗೆ ಮಹಿಳೆ...
ಸೋಮವಾರಪೇಟೆ ತಾಲ್ಲೂಕಿನ ಬಾಣಾವರ ಗ್ರಾಮದ ಕೆರೆಯೊಂದು ಬತ್ತಿ ಹೋಗುವ ಹಂತದಲ್ಲಿದ್ದು ನೀರಿನ ಅಭಾವ ಶುರುವಾಗಿದೆ. ಕೆರೆಯಲ್ಲಿ ಮೀನು ಸಾಕಣೆ ಮಾಡಿದ್ದ ಗ್ರಾಮಸ್ಥರು ನೀರು ಬತ್ತುತ್ತಿರುವುದರಿಂದ ಮೀನು ಹಿಡಿದು ಮಾರಾಟ ಮಾಡಿದ್ದಾರೆ.

ಇಂಥ ಸಂಕಷ್ಟದಲ್ಲಿ ಗ್ರಾಮದ ಜನತೆಯ ನೆರವಿಗೆ ಬಂದಿರುವುದು ಗೃಹಿಣಿ ಭವಾನಿ. ತೋಟಕ್ಕೆಂದು ತಮ್ಮ ಮನೆಯ ಮುಂದೆ ತೆಗಿಸಿದ್ದ ಕೊಳವೆ ಬಾವಿಯಿಂದ ಇಡೀ ಗ್ರಾಮದವರಿಗೆ ಉಚಿತವಾಗಿ ನೀರು ಪೂರೈಸುತ್ತಿದ್ದಾರೆ.

ನೀರಿಗಾಗಿ ಪೊಲೀಸ್ ಠಾಣೆ ಮೆಟ್ಟಿಲು... ನೀರಿನ ಸಮಸ್ಯೆಯಿಂದ ತತ್ತರಿಸಿರುವ ಕುಶಾಲನಗರ ಹೋಬಳಿ ಗೊಂದಿಬಸವನಹಳ್ಳಿಯಲ್ಲಿ ಕಳೆದ ವಾರ ಹೊಡೆದಾಟವೇ ನಡೆದಿದ್ದು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ನೀರು ಬಿಡುವಂತೆ ಕೇಳಲು ಹೋದ ಯುವಕನೊಬ್ಬನ ಮೇಲೆ ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಸಂಬಂಧಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ. ಇದರಿಂದ ಇಡೀ ಗ್ರಾಮದವರೆಲ್ಲಾ ಒಟ್ಟಾಗಿ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಹಾರಂಗಿಯಲ್ಲಿ 1 ಟಿಎಂಸಿ ನೀರು
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು (ಸಮುದ್ರ ಮಟ್ಟದಿಂದ). ಈಗ 2,795.25 ಅಡಿಗಳಷ್ಟು ನೀರು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದ್ದ ನೀರಿನ ಮಟ್ಟ 2,799.23 ಅಡಿ. 8.5 ಟಿ.ಎಂ.ಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗಿರುವುದು ಬರೀ 1 ಟಿ.ಎಂ.ಸಿ.

ಕುಡಿಯುವ ನೀರಿನ ಮೂಲಗಳು: ಕೈಪಂಪು: 4,060, ತೆರೆದ ಬಾವಿ: 3,107, ಕೊಳವೆ ನೀರು ಸರಬರಾಜು: 368, ಕಿರುನೀರು ಸರಬರಾಜು: 504

ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಇನ್ನೂ ಟ್ಯಾಂಕರ್ ಬಳಸಿಲ್ಲ. ಈ ವರ್ಷ ಕುಡಿಯುವ ನೀರಿಗಾಗಿ ವಿವಿಧ ಯೋಜನೆಯಡಿ ₹ 1.5 ಕೋಟಿ ಬಿಡುಗಡೆ ಮಾಡಲಾಗಿದೆ.
ಶಶಿಧರ್,
ಎಇಇ (ಕುಡಿಯುವ ನೀರು ಸರಬರಾಜು)

ದೀಪದ ಬುಡದಲ್ಲಿ ಕತ್ತಲು...
ಕುಶಾಲನಗರ ಪಟ್ಟಣದ ಸುತ್ತ ಮೂರು ಕಡೆ ಕಾವೇರಿ ನದಿ ಹರಿಯುತ್ತದೆ. ಹೀಗಿದ್ದರೂ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲು ನಮಗೇ ನಾಚಿಕೆ ಆಗುತ್ತದೆ.
– ರೇಣುಕಾ,
ಸದಸ್ಯೆ, ಕುಶಾಲನಗರ ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.