ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ರೇಖೆ ಗುರುತಿಸಲು ಮತ್ತೆ ಭೇಟಿ

ಕರ್ನಾಟಕ–ಆಂಧ್ರ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಪರಿಶೀಲನಾ ತಂಡ
Last Updated 25 ಮೇ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವೆ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಗಡಿ ರೇಖೆ ಪುನಃ ಗುರುತಿಸುವ ಕಾರ್ಯದ ಅಂಗವಾಗಿ ಜಂಟಿ ಪರಿಶೀಲನಾ ತಂಡ ಇನ್ನೂ ಮೂರು ಬಾರಿ ಭೇಟಿ ನೀಡಲಿದೆ. ಈ ಭಾಗದ ಗಡಿ ರೇಖೆ ಗುರುತಿಸುವ ಕೆಲಸಕ್ಕಾಗಿಯೇ ಈ ತಂಡ ರಚಿಸಲಾಗಿದೆ.

ತಂಡದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯ­ಗಳ ಕಂದಾಯ ಇಲಾಖೆ ಅಧಿಕಾರಿಗಳು ಇದ್ದಾರೆ. ಅಂತರರಾಜ್ಯ ಗಡಿ ರೇಖೆ ಬಳ್ಳಾರಿ ಮೀಸಲು ಅರಣ್ಯದ ನಡುವೆ ಹಾದು ಹೋಗಿದೆ. ಗಡಿ ರೇಖೆ ಪುನರ್ ಗುರುತಿಸುವ ಕಾರ್ಯದಲ್ಲಿ ಕಂದಾಯ ಇಲಾಖೆ ಅಥವಾ ಸರ್ವೇ ಆಫ್‌ ಇಂಡಿಯಾ ತನ್ನಿಂದ ಮಾಹಿತಿ ಪಡೆದುಕೊಂಡಿಲ್ಲ ಎಂದು ಅರಣ್ಯ ಇಲಾಖೆ ದೂರಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳು­ತ್ತಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

‘ಅಂತರರಾಜ್ಯ ಗಡಿ ರೇಖೆ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿದ್ದರೂ, ಗಡಿ ರೇಖೆ ಪುನಃ ಗುರುತಿಸುವ ಕಾರ್ಯದಲ್ಲಿ ತೊಡಗಿ­ಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿ­ಗಳು ಮುಂದೆ ಬರುತ್ತಿಲ್ಲ. ಗಡಿ ಗುರುತಿಸುವ ಕಾರ್ಯ ತಮ್ಮದಲ್ಲ ಎಂಬ ಭಾವ ಅರಣ್ಯ ಇಲಾಖೆ ಅಧಿಕಾರಿ­ಗಳದ್ದು. ಖನಿಜ ಹೆಚ್ಚಿರುವ ಅರಣ್ಯ ಜಮೀನನ್ನು ಗುರುತಿಸುವುದೇ ಗಡಿ ರೇಖೆ ಪುನಃ ಗುರುತಿಸುವ ಕಾರ್ಯ ಕೈಗೆತ್ತಿಕೊಳ್ಳಲು ಮುಖ್ಯ ಕಾರಣ. ಆದರೆ, ಕರ್ನಾಟಕದ ಮೀಸಲು ಅರಣ್ಯ ಯಾವ ಪ್ರಮಾಣದಲ್ಲಿ ಆಂಧ್ರದ ಪಾಲಾಗಿದೆ ಎಂಬುದನ್ನು ಪತ್ತೆಮಾಡಲು ಅರಣ್ಯ ಇಲಾಖೆಗೆ ಮನಸ್ಸಿಲ್ಲ’ ಎಂದು ಕಂದಾಯ ಇಲಾಖೆ ದೂರುತ್ತಿದೆ.

ಅರಣ್ಯ ಇಲಾಖೆ ವಾದ: ಆದರೆ ಇದಕ್ಕೆ ಅರಣ್ಯ ಇಲಾಖೆ ತನ್ನದೇ ಆದ ಉತ್ತರ ನೀಡುತ್ತಿದೆ. ‘ಕಂದಾಯ ಇಲಾಖೆ ಅಧಿಕಾರಿಗಳು ಗಡಿ ರೇಖೆ ಪುನಃ ಗುರುತಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ನಮ್ಮನ್ನು ಸಂಪರ್ಕಿ­ಸಿಯೇ ಇಲ್ಲ. ಸಮೀಕ್ಷೆ ಕೈಗೊಳ್ಳುವ ಸಂದರ್ಭದಲ್ಲಿ ಜಂಟಿ ಪರಿಶೀಲನಾ ತಂಡ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳನ್ನೂ ಸಂಪರ್ಕಿಸಿಲ್ಲ’ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ಅಂತರರಾಜ್ಯ ಗಡಿ ರೇಖೆಯನ್ನು ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಅತ್ಯಂತ ಸ್ಪಷ್ಟವಾಗಿ ಗುರುತಿಸುವುದು ಅಸಾಧ್ಯ. ಬೆಟ್ಟ– ಗುಡ್ಡಗಳಿಂದ ಕೂಡಿದ ಪ್ರದೇಶ ಇದು. ಅವ್ಯಾಹತವಾಗಿ ನಡೆದ ಗಣಿಗಾರಿಕೆಯಿಂದಾಗಿ ಈ ಪ್ರದೇಶದ ಗಡಿ ರೇಖೆಯ ಗುರುತುಗಳು ಅಳಿಸಿಹೋಗಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಗಣಿಗಾರಿಕೆ ಕಾರಣದಿಂದ ಅಂತರ­ರಾಜ್ಯ ಗಡಿ ರೇಖೆ ನಾಶವಾಗಿದೆ ಎಂದು ದೂರಿ ಸಮಾಜ ಪರಿವರ್ತನ ಸಮುದಾಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಗಡಿ ರೇಖೆ ಪುನಃ ಗುರುತಿಸುವಂತೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT