ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ವೃತ್ತಿ ಶಿಕ್ಷಣಕ್ಕೆ ತೊಡಕು; ಆತಂಕ

Last Updated 22 ಜೂನ್ 2012, 19:30 IST
ಅಕ್ಷರ ಗಾತ್ರ

ಮಂಗಳೂರು: ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಬರುವ ಉದ್ಯೋಗ ಮತ್ತು ತರಬೇತಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳ ಕೆಲವು ಉಪ ನಿರ್ದೇಶಕ ದರ್ಜೆಯ ಪ್ರಾಂಶುಪಾಲರ (ಶ್ರೇಣಿ-1) ಹುದ್ದೆಗಳನ್ನು ಸ್ಥಳಾಂತರಿಸಲು ಕಾರ್ಮಿಕ ಇಲಾಖೆ ಮುಂದಾಗಿದೆ.

ಹಾಗೆಯೇ ಗ್ರಾಮೀಣ ಪ್ರದೇಶದ 32 ಐಟಿಐ ಕಾಲೇಜುಗಳ ವೃತ್ತಿ ಘಟಕಗಳನ್ನೂ ಜಿಲ್ಲಾ ಕೇಂದ್ರ ಸ್ಥಳದಲ್ಲಿರುವ ಐಟಿಐಗಳಿಗೆ ಸ್ಥಳಾಂತರಿಸುವ ಕೆಲಸ ಇದೀಗ ನಡೆದಿದೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳ ವೃತ್ತಿ ಶಿಕ್ಷಣ ಅವಕಾಶ ಕಡಿಮೆ ಆಗುವ ಆತಂಕ ಎದುರಾಗಿದೆ.

ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ 2008 ರಲ್ಲಿ ಗ್ರಾಮೀಣ ಭಾಗದ ಬಡ ಜನರಿಗೆ ಅನೂಕೂಲವಾಗಲಿ ಎನ್ನುವ ಉದ್ದೇಶದಿಂದ ರಾಜ್ಯದ ಹಾಸನ, ಮಂಡ್ಯ, ಮೈಸೂರು, ಉಡುಪಿ, ಚಾಮರಾಜನಗರ, ಬೆಂಗಳೂರು, ಕೋಲಾರ, ದಾವಣಗೆರೆ, ಗುಲ್ಬರ್ಗ, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಮುಂತಾದ ಜಿಲ್ಲೆಗಳ್ಲ್ಲಲಿ 32 ಕಡೆಗಳಲ್ಲಿ ಐಟಿಐ ಆರಂಭಿಸಲಾಗಿತ್ತು. ಈ ಐಟಿಐಗಳಿಗೆ ಉಪ ನಿರ್ದೇಶಕರ ದರ್ಜೆಯ ಸ್ಕೇಲ್-1 ಅಧಿಕಾರಿಗಳು ಪ್ರಾಂಶುಪಾಲರಾಗಿದ್ದರು.

ನೂತನವಾಗಿ ಪ್ರಾರಂಭಿಸಲಾದ ಸಂಸ್ಥೆಗಳಲ್ಲಿ ವಿವಿಧ ವೃತ್ತಿಗಳ 9 ಘಟಕಗಳನ್ನು  ಪ್ರಾರಂಭಿಸಲು ಅನುಮೋದನೆ ನೀಡಲಾಗಿತ್ತು. ಈ ಘಟಕಗಳಲ್ಲಿನ ಯಂತ್ರೋಪಕರಣ ಹಾಗೂ ಪರಿಕರಗಳ ಖರೀದಿಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ.

ಕೇಂದ್ರ ಸರ್ಕಾರದ ವೃತ್ತಿ ಶಿಕ್ಷಣ ಮಂಡಳಿಯಿಂದ ಸಂಸ್ಥೆಗಳಲ್ಲಿನ ವೃತ್ತಿ ಘಟಕಗಳಿಗೆ ಶಾಶ್ವತ ಸಂಯೋಜನೆಯನ್ನು ಪಡೆದುಕೊಳ್ಳಲಾಗಿದೆ. ಗ್ರಾಮೀಣ ಬಡ ವಿದ್ಯಾರ್ಥಿಗಳು ಹೆಚ್ಚಿನ ಉದ್ಯೋಗಾವಕಾಶ ಗಿಟ್ಟಿಸಲು ಈ ಐಟಿಐಗಳು ವರದಾನವಾಗಿದ್ದವು. ಕಳೆದ 4 ವರ್ಷಗಳಲ್ಲಿ ಈ ಐಟಿಐಗಳಿಂದ ಸಾವಿರಾರು ಬಡ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.

ಕಾರ್ಮಿಕ ಸಚಿವಾಲಯ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆಯ ಹಿರಿಯ ಅಧಿಕಾರಿಗಳ ದ್ವಂದ್ವ ನೀತಿಯಿಂದಾಗಿ, ಗ್ರಾಮೀಣ ಪ್ರದೇಶದ 32 ಐಟಿಐ ಕಾಲೇಜುಗಳ ವೃತ್ತಿ ಘಟಕಗಳನ್ನೂ ಜಿಲ್ಲಾ ಕೇಂದ್ರ ಸ್ಥಳದಲ್ಲಿರುವ ಐಟಿಐಗಳಿಗೆ ಸ್ಥಳಾಂತರಿಸುವ ಕೆಲಸ ಇದೀಗ ನಡೆದಿದೆ. ಇದರಿಂದಾಗಿ ಗ್ರಾಮೀಣ ಐಟಿಐಗಳಲ್ಲಿ ವೃತ್ತಿ ಘಟಕಗಳ ಸಂಖ್ಯೆ ಕಡಿಮೆ ಆಗಲಿದೆ~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಐಟಿಐ ಉದ್ಯೋಗಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು. 

`ಶ್ರೀರಂಗಪಟ್ಟಣ, ಚಿನಕುರಳಿ, ಕುಣಿಗಲ್, ಶಿಡ್ಲಘಟ್ಟ, ಮಾಗಡಿ, ಹಾರೋಹಳ್ಳಿಯಂತಹ ಕೆಲವು ನಿರ್ದಿಷ್ಟ ಐಟಿಐಗಳನ್ನು ಹೊರತು ಪಡಿಸಿ ಉಳಿದ ಐಟಿಐಗಳ ಗ್ರೇಡ್-1 ಪ್ರಾಂಶುಪಾಲರ ಹುದ್ದೆಗಳನ್ನು ಪಲ್ಲಟ ಮಾಡಿ ಅಲ್ಲಿ ಗ್ರೇಡ್ 2 ರ ಸಹಾಯಕ ನಿರ್ದೇಶಕರನ್ನು ನೇಮಿಸಲಾಗುತ್ತಿದೆ.

ಹಾಸನ ಜಿಲ್ಲೆಯೊಂದರಲ್ಲಿಯೆ ಉದಯಪುರ, ಬಾಗೂರು, ಆಲೂರು, ಸಕಲೇಶಪುರ, ಬೇಲೂರು, ಮೊಸಳೆ ಹೊಸಹಳ್ಳಿ, ಉದಯಪುರ ಹಾಗೂ ಹರಿಹರಪುರ ಸೇರಿ ಒಟ್ಟು 7 ಐಟಿಐಗಳನ್ನು ಗ್ರೇಡ್-2ಗೆ ಹಿಂಬಡ್ತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ~ ಎಂದು ಅವರು ತಿಳಿಸಿದರು.

`ನಿರ್ದಿಷ್ಟ ಉದ್ದೇಶಗಳಿಗಾಗಿ ಸ್ಥಾಪಿಸಲಾದ ಸರ್ಕಾರದ ಯಾವುದೇ ಸಂಸ್ಥೆಗಳ ಹುದ್ದೆಗಳ ಸ್ಥಳಾಂತರದ ಬಗ್ಗೆ ಹಣಕಾಸು ಇಲಾಖೆಯ ಪೂರ್ವಾನುಮತಿ ಕಡ್ಡಾಯ. ಆದರೆ ಪ್ರಾಂಶುಪಾಲರ ಹುದ್ದೆಯನ್ನು ಸ್ಥಾನಪಲ್ಲಟಗೊಳಿಸುವಾಗ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆಯಲಾಗಿಲ್ಲ.
 
ಇದರಿಂದಾಗಿ ಪ್ರಾಂಶುಪಾಲರ ಸಂಬಳ ಪಾವತಿಗೂ ಅಡಚಣೆ ಉಂಟಾಗಲಿದೆ. ಇವೆಲ್ಲವೂ ಗ್ರಾಮೀಣ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಮೇಲೆ ಅಡ್ಡ ಪರಿಣಾಮ ಬೀರಲಿವೆ~ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಿಂದ ಸ್ಥಳಾಂತರ ಗೊಳ್ಳುತ್ತಿರುವ ಗ್ರೇಡ್1 ಪ್ರಾಂಶುಪಾಲರಿಗೆ ಇಲಾಖೆಯ ಕೇಂದ್ರ ಕಚೇರಿ ಹಾಗೂ ರಾಜ್ಯದ ವಿಭಾಗೀಯ ಕಚೇರಿಗಳಲ್ಲಿ ವಿವಿಧ ಹುದ್ದೆ ಕಲ್ಪಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದವರು ನಗರಗಳಲ್ಲಿ ಕಾರ್ಯ ನಿರ್ವಹಿಸಲು ಉತ್ಸುಕರಾಗಿದ್ದು, ಅಲ್ಲಿಗೆ ತೆರಳಲು ಭಾರಿ ಪೈಪೋಟಿ ಪ್ರಾರಂಭವಾಗಿದೆ.

ಗ್ರಾಮೀಣ ಪ್ರದೇಶದ ಐಟಿಐ ಪ್ರಾಂಶುಪಾಲರ ಹುದ್ದೆಗೆ ಗ್ರೇಡ್ 2 ಅಧಿಕಾರಿಗಳಾದ ಸಹಾಯಕ ನಿರ್ದೇಶಕರನ್ನು ನೇಮಿಸಲಾಗುತ್ತಿದೆ. ಬಹುತೇಕ ಮಂದಿಗೆ ಗ್ರಾಮೀಣ ಪ್ರದೇಶಕ್ಕೆ ತೆರಳಲು ಮನಸ್ಸಿಲ್ಲ~ ಎಂದು ಅವರು ತಿಳಿಸಿದರು.

ಈ ಸಮಸ್ಯೆ ಕುರಿತು `ಪ್ರಜಾವಾಣಿ~ಗೆ ಪ್ರತಿಕಿಯಿಸಿದ ಇಲಾಖೆ ಕಾರ್ಯದರ್ಶಿ ನಾರಾಯಣ ಸ್ವಾಮಿ, `ಪ್ರಾಂಶುಪಾಲರ ಹುದ್ದೆಗಳನ್ನು ಸ್ಥಳಾಂತರಿಸುತ್ತಿರುವುದು ನಿಜ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇರುವ ಐಟಿಐಗಳಲ್ಲಿರುವ ಉಪ ನಿರ್ದೇಶಕ ದರ್ಜೆಯ ಪ್ರಾಂಶುಪಾಲರ ಹುದ್ದೆಯನ್ನು ವರ್ಗಾಯಿಸುತ್ತಿಲ್ಲ. ಹಣಕಾಸು ಇಲಾಖೆ ಅನುಮೋದನೆ ಪಡೆಯದಿದ್ದರೂ, ಸಕಾಲಕ್ಕೆ ಸಂಬಳ ಆಗುವ ಬಗ್ಗೆ  ಪ್ರಾಂಶುಪಾಲರು ಆತಂಕ ಪಡುವ ಅಗತ್ಯ ಇಲ್ಲ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT