ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ ವಿಧಾನಸಭಾ ಉಪಚುನಾವಣೆ: ಶೇ 77.17ರಷ್ಟು ಮತದಾನ

Last Updated 3 ನವೆಂಬರ್ 2018, 15:47 IST
ಅಕ್ಷರ ಗಾತ್ರ

ಜಮಖಂಡಿ: ಕಾಂಗ್ರೆಸ್–ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಶನಿವಾರ ನಡೆದಮತದಾನ ಪ್ರಕ್ರಿಯೆ, ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಕೊನೆಗೊಂಡಿತು. ಜಿಲ್ಲಾಡಳಿತದ ಪ್ರಾಥಮಿಕ ಮಾಹಿತಿ ಪ್ರಕಾರ ಸಂಜೆ 7 ಗಂಟೆವರೆಗೆ ಶೇ 77.17 ಮತದಾನ ನಡೆದಿತ್ತು.

ಮುಂಜಾನೆ 7 ಗಂಟೆಯಿಂದಲೇ ಮತದಾನ ಚುರುಕು ಪಡೆದಿತ್ತು. ಬೆಳಿಗ್ಗೆ 9 ಗಂಟೆಗೆ ಶೇ 9.12 ರಷ್ಟು, 11 ಗಂಟೆ ವೇಳೆಗೆ ಶೇ 22.30 ರಷ್ಟು, ಮಧ್ಯಾಹ್ನ 1 ಗಂಟೆಗೆ ಶೇ 43.51ರಷ್ಟು, ಮಧ್ಯಾಹ್ನ 3 ಗಂಟೆಗೆ ಶೇ 58.82ರಷ್ಟು, ಸಂಜೆ 5 ಗಂಟೆಗೆ ಶೇ 74.41ರಷ್ಟು ಮತದಾನ ನಡೆಯಿತು.

ಪಿಂಕ್‌ ಮತಗಟ್ಟೆಗಳ ಸೆಳಕು:

ತಾಲ್ಲೂಕಿನ ಹುಲ್ಯಾಳ ಗ್ರಾಮದಲ್ಲಿ ಮತಗಟ್ಟೆ ಸಂಖ್ಯೆ 200ರಲ್ಲಿ ಹಾಗೂ ಜಮಖಂಡಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮತಗಟ್ಟೆಸಂಖ್ಯೆ 137 ರಲ್ಲಿ ಪಿಂಕ್‌ ಮತಗಟ್ಟೆ ಸ್ಥಾಪಿಸಲಾಗಿತ್ತು. ಪಿಂಕ್‌ ಮತಗಟ್ಟೆಗಳಲ್ಲಿ ಮಹಿಳೆಯರೇ ಮತದಾನ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದರು.

ಪಿಂಕ್‌ ಮತಗಟ್ಟೆಗಳ ಎದುರು ಸ್ವಾಗತ ಕಮಾನ ನಿರ್ಮಿಸಿ, ರಂಗೋಲಿ ಬಿಡಿಸಿ , ಬಲೂನ್‌ ಕಟ್ಟಿ, ತೆಂಗಿನ ಗರಿ ಹಚ್ಚಿ, ಬಿಡಿಹೂವು ಚೆಲ್ಲಿ ಮತಗಟ್ಟೆಯ ಆವರಣ ಅಲಂಕರಿಸಲಾಗಿತ್ತು. ಮತದಾರರು ತಂದಿದ್ದ ಮೊಬೈಲ್‌ ಫೋನ್‌ಗಳನ್ನು ಮತದಾನ ಮಾಡಿ ಬರುವ ವರೆಗೆ ಮತಗಟ್ಟೆ ಹೊರಗಡೆ ಇಡುವ ವ್ಯವಸ್ಥೆ ಮಾಡಲಾಗಿತ್ತು.

ಮತಗಟ್ಟೆಗೆ ಅಮ್ಮನೊಂದಿಗೆ ಬರುವ ಪುಟ್ಟ ಮಕ್ಕಳಿಗೆ ಆಟಿಕೆ ಸಾಮಾನುಗಳ ವ್ಯವಸ್ಥೆ ಮಾಡಲಾಗಿತ್ತು. ಅಮ್ಮ ಮತಗಟ್ಟೆಯೊಳಗೆ ಹೋದಾಗ ಅಳುವ ಮಕ್ಕಳನ್ನು ಚಾಕೊಲೆಟ್ ಕೊಟ್ಟು ಚುನಾವಣಾ ಸಿಬ್ಬಂದಿ ಸಂತೈಸುವ ನೋಟ ಕಾಣಸಿಕ್ಕಿತು. ತುರ್ತು ಚಿಕಿತ್ಸೆಗೆ ಅನುಕೂಲವಾಗಲು ಓಆರ್‌ಎಸ್ ಸ್ಯಾಚೆಗಳನ್ನು ಅಲ್ಲಿಡಲಾಗಿತ್ತು. ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಿಸಲಾಗಿತ್ತು.

ಮತದಾನದಕ್ಕೆ ಬಂದ ವೇಳೆ ಅನಾರೋಗ್ಯಕ್ಕೀಡಾದವರಿಗೆ ನೆರವಾಗಲು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಜೊತೆಮಾತ್ರೆಗಳೊಂದಿಗೆ ಚಿಕಿತ್ಸೆ ವಿಭಾಗ ತೆರೆಯಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಲು ಆರೋಗ್ಯ ಸಿಬ್ಬಂದಿ ಹಾಜರಿದ್ದರು.

ನಿಧಾನಗತಿ ಮತದಾನ:

ಸಾವಳಗಿ ಸಮೀಪದ ಕನ್ನೋಳ್ಳಿಯಲ್ಲಿ ಮತದಾನ ನಿಧಾನಗತಿಯಲ್ಲಿ ನಡೆಯಿತು. ಗ್ರಾಮದ ಗುರವ್ವ ದಾಸೋಳ (82) ನಿಧನರಾದ ಕಾರಣ ಅಲ್ಲಿನ ಮತಗಟ್ಟೆ ಸಂಖ್ಯೆ 38ರ ವ್ಯಾಪ್ತಿಯ ನಿವಾಸಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಮಧ್ಯಾಹ್ನದ ನಂತರ ಮತದಾನ ಪ್ರಕ್ರಿಯೆ ಜೋರಾಗಿತ್ತು.ಪೂಜೆ:

ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಮತಗಟ್ಟೆಯೊಂದರ ಕಟ್ಟಡದ ಮೆಟ್ಟಿಲುಗಳಿಗೆ ಹಾಗೂ ಕೊಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಧ್ವಜದ ಕಟ್ಟೆಗೆ ಅಭ್ಯರ್ಥಿಗಳ ಬೆಂಬಲಿಗರು ಪೂಜೆ ಸಲ್ಲಿಸಿದರು.

ಕೊಣ್ಣೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದೇ ಕಟ್ಟಡದಲ್ಲಿ 8 ಮತಗಟ್ಟೆಗಳನ್ನು ಸ್ಥಾಪಿಸಿದ್ದು ವಿಶೇಷವಾಗಿತ್ತು. ಕಂಕಣವಾಡಿ ಗ್ರಾಮದ ಮತಗಟ್ಟೆ ಸಂಖ್ಯೆ 83 ರಲ್ಲಿ ಅಂಧ ಮತದಾರ ಈಶ್ವರ ಮಾಂಗ ಸಹಾಯಕರರೊಂದಿಗೆ ಮತದಾನ ಮಾಡಿದರು.

ಅಂಗವಿಕಲ ಸಿಬ್ಬಂದಿ ನೇಮಕ:

ತಾಲ್ಲೂಕಿನ ಚಿನಗುಂಡಿ ಗ್ರಾಮದ ಮತಗಟ್ಟೆ ಸಂಖ್ಯೆ 116 ಅನ್ನು ಅಂಗವಿಕಲ ಮತದಾನ ಸಿಬ್ಬಂದಿವುಳ್ಳ (ಪಿಡಬ್ಲ್ಯೂಡಿ) ಮತಗಟ್ಟೆಯನ್ನಾಗಿ ರಚಿಸಲಾಗಿತ್ತು. ಸಾಮಾನ್ಯ ಮತದಾರರ ಜೊತೆ ಆ ಮತಗಟ್ಟೆಯ ವ್ಯಾಪ್ತಿಯಲ್ಲಿ 20 ಮಂದಿ ಅಂಗವಿಕಲ ಮತದಾರರು ಇದ್ದಾರೆ. ಮಧ್ಯಾಹ್ನ 1 ಗಂಟೆ ವರೆಗೆ 16 ಮಂದಿ ಅಂಗವಿಕಲರು ಮತದಾನ ಮಾಡಿದ್ದರು.

ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ಹನುಮಾನ ದೇವರ ದರ್ಶನ ಪಡೆದು ತಮ್ಮ ಸ್ವಗ್ರಾಮ ಹಿರೇಪಡಸಲಗಿಗೆ ತೆರಳಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಮತಗಟ್ಟೆ ಸಂಖ್ಯೆ 50 ರಲ್ಲಿ ಮತದಾನ ಮಾಡಿದರು.

ಕಾಂಗ್ರೆಸ್‌ ಅಭ್ಯರ್ಥಿ ಆನಂದ ನ್ಯಾಮಗೌಡ ಗಿರೀಶನಗರದ ಸಜ್ಜಿಹನುಮಾನ್‌ ದೇವಸ್ಥಾನ ಹಾಗೂ ಕಡಪಟ್ಟಿಯ ಬಸವೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿದ ಬಳಿಕ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದ ಮತಗಟ್ಟೆ ಸಂಖ್ಯೆ 125 ರಲ್ಲಿ ಮತದಾನ ಮಾಡಿದರು.

ಡಿ.ಸಿ,ಎಸ್‌ಪಿ ವಿರುದ್ಧ ದೂರು

ಇಲ್ಲಿನ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದ ಮತಗಟ್ಟೆಗಳ ವ್ಯಾಪ್ತಿಯೊಳಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಪಕ್ಷದ ಚಿಹ್ನೆವುಳ್ಳ ಕೊರಳ ವಸ್ತ್ರ ಧರಿಸಿ ಪ್ರಚಾರ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಜೆಪಿಯ ನಾಲ್ವರು ಹಾಗೂ ಕಾಂಗ್ರೆಸ್‌ನ ಒಬ್ಬ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಮತ ಚಲಾಯಿಸಲು ಬಂದಿದ್ದ ನಾಲ್ವರು ಮತದಾರರನ್ನು ವಶಕ್ಕೆ ಪಡೆದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಮುಖಂಡರಾದ ಉಮೇಶ ಮಹಾಬಳಶೆಟ್ಟಿ, ಪಂಚಯ್ಯ ಗೆಣ್ಣೂರಮಠ, ಸಂಗಮೇಶ ಕೌಜಲಗಿ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ವಿವಿಪ್ಯಾಟ್‌ ಬದಲಾವಣೆ:

ಮತದಾನ ನಡೆದ ಸಂದರ್ಭದಲ್ಲಿ ಮತಗಟ್ಟೆ ಸಂಖ್ಯೆಗಳು 40,51,108,142,148 ಮತ್ತು 201 ರಲ್ಲಿ ವಿವಿಪ್ಯಾಟ್‌ ಮಷಿನ್‌ಗಳು ಕೈಕೊಟ್ಟ ಪರಿಣಾಮವಾಗಿ ಅವುಗಳನ್ನು ಬದಲಾಯಿಸಿ ಬೇರೆ ವಿವಿಪ್ಯಾಟ್‌ಗಳನ್ನು ಅಳವಡಿಸಿ ಮತದಾನ ಮುಂದುವರಿಸಲಾಯಿತು.

ಬೆಳಿಗ್ಗೆ ಮತದಾನ ಆರಂಭಕ್ಕೆ ಮುಂಚೆ ಅಣಕು ಮತದಾನದ ಸಂದರ್ಭದಲ್ಲಿ ಮತಗಟ್ಟೆ ಸಂಖ್ಯೆ 76 ರಲ್ಲಿ ಕಂಟ್ರೋಲ್‌ ಯೂನಿಟ್‌ ಹಾಗೂ ಮತಗಟ್ಟೆ ಸಂಖ್ಯೆ 122 ರಲ್ಲಿ ವಿವಿಪ್ಯಾಟ್‌ ಕೈಕೊಟ್ಟಿದ್ದವು. ಆದರೆ, ಮತದಾನ ಆರಂಭಕ್ಕೆ ಮುಂಚೆ ಅವುಗಳನ್ನು ಬದಲಾಯಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT