ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಭಾರತ ಪ್ರಮುಖ ನಾಯಕರ ಹತ್ಯೆಗೆ ಸಂಚು: ತಸ್ಲೀಮ್ ಸಹಚರರ ಪತ್ತೆಗೆ ಹುಡುಕಾಟ

ಸಂಘ ಪರಿವಾರ ನಾಯಕರ ಹತ್ಯೆಗೆ ಸಂಚು
Last Updated 14 ಜನವರಿ 2019, 17:14 IST
ಅಕ್ಷರ ಗಾತ್ರ

ಕಾಸರಗೋಡು: ಆರ್‌ಎಸ್‌ಎಸ್‌ ನಾಯಕ ಡಾ.ಕಲ್ಲಡ್ಕ ಪ್ರಭಾಕರ ಭಟ್, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಜಗದೀಶ ಶೇಣವ, ಶರಣ್ ಪಂಪ್‌ವೆಲ್‌ ಸಹಿತ ಸಂಘ ಪರಿವಾರದ ದಕ್ಷಿಣ ಭಾರತದ ಪ್ರಮುಖರ ನಾಯಕರ ಹತ್ಯೆಗೆ ಸಂಚು ನಡೆಸಿದ ಆರೋಪದ ಮೇಲೆ ಕಾಸರಗೋಡು ನಗರ ಸಮೀಪದ ಚೆಂಬರಿಕ ನಿವಾಸಿ ಮುಹತಾಸಿಂ ಅಲಿಯಾಸ್‌ ತಸ್ಲೀಮ್‌ ಎಂಬಾತನನ್ನು ದೆಹಲಿ ಪೊಲೀಸರ ವಿಶೇಷ ದಳ ಬಂಧಿಸಿದೆ. ಈಗ ಆತನ ಸಹಚರರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.

ದೇಶದ ಆಂತರಿಕ ಭದ್ರತೆ ಧಕ್ಕೆ ತರಲು ಪಿತೂರಿ ನಡೆಸಿರುವುದು ಹಾಗೂ ಸಂಘ ಪರಿವಾರದ ನಾಯಕರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ತಸ್ಲೀಮ್‌ನನ್ನು ಚೆರ್ಕಳ ಬಳಿಯ ಚಟ್ಟಂಚಾಲಿನ ಆತನ ಪತ್ನಿಯ ಅಣ್ಣನ ಮನೆಯಿಂದ ಬಂಧಿಸಲಾಗಿದೆ. ದೆಹಲಿ ಪೊಲೀಸರ ವಿಶೇಷ ತಂಡ ನಡೆಸಿದ ಈ ಕಾರ್ಯಾಚರಣೆಗೆ ಕಾಸರಗೋಡು ಪೊಲೀಸರು ನೆರವು ನೀಡಿದ್ದರು. ಬಂಧಿತನನ್ನು ಕಾಸರಗೋಡು ಚೀಫ್ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದ ತನಿಖಾ ತಂಡ, ಅವರ ಒಪ್ಪಿಗೆ ಪಡೆದು ದೆಹಲಿಗೆ ಕರೆದೊಯ್ದಿದೆ.

ಆರೋಪಿ ತಸ್ಲೀಮ್ ಕೇರಳ ಮತ್ತು ಕರ್ನಾಟಕದಿಂದ ಕಾರ್ಯಾಚರಿಸುತ್ತಿರುವ ಕೆಲವು ಉಗ್ರರ ಜೊತೆ ನಂಟು ಹೊಂದಿದ್ದಾನೆ ಎಂಬ ಆರೋಪದ ಕುರಿತು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತನ ಬಗ್ಗೆ ಮಾಹಿತಿ ಕಲೆಹಾಕಿದ್ದ ತನಿಖಾ ತಂಡ ಕಾಸರಗೋಡಿಗೆ ಬಂದು ಜಿಲ್ಲಾ ಎಸ್‌ಪಿಯವರನ್ನು ಭೇಟಿಮಾಡಿ ನೆರವು ಯಾಚಿಸಿತ್ತು. ನಾಲ್ಕು ತಂಡಗಳನ್ನು ಈತನ ಬಂಧನಕ್ಕಾಗಿ ನಿಯೋಜಿಸಲಾಗಿತ್ತು. ಆತನ ಮನೆಗೆ ತೆರಳುವಷ್ಟರಲ್ಲಿ ಸಂಬಂಧಿಕರ ಮನೆಗೆ ಪರಾರಿಯಾಗಿದ್ದ ತಸ್ಲೀಮ್‌, ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಪೊಲೀಸರು ಬೆನ್ನಟ್ಟಿ ಹೋಗಿ ಆತನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆತ್ಮಾಹುತಿ ದಾಳಿಗೆ ಸಂಚು?: ಕೆಲವರನ್ನು ಕೊಲೆ ಮಾಡಲು ಯೋಜನೆ ರೂಪಿಸುತ್ತಿದ್ದ ತಸ್ಲೀಮ್‌ ಮತ್ತು ಸಹಚರರು, ಆತ್ಮಾಹುತಿ ದಾಳಿಯ ಮೂಲಕ ಕೃತ್ಯ ಎಸಗಲು ಸಂಚು ನಡೆಸುತ್ತಿದ್ದರು ಎನ್ನಲಾಗಿದೆ.

‘ತಸ್ಲೀಮ್‌ನೊಂದಿಗೆ ಸಂಪರ್ಕ ಹೊಂದಿರುವವರ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಾಚರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಕಾಸರಗೋಡು ಎಸ್‌ಪಿ ಡಾ.ಎ.ಶ್ರೀನಿವಾಸ್ ತಿಳಿಸಿದ್ದಾರೆ.

**

ಕೋಮು ಗಲಭೆಗೆ ಪ್ರಚೋದನೆ

ಕಾಸರಗೋಡು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಣ್ಣಪುಟ್ಟ ಗಲಭೆಗಳನ್ನು ಕೋಮು ಗಲಭೆಗಳಾಗಿ ಪರಿವರ್ತಿಸುವಲ್ಲಿ ತಸ್ಲೀಮ್‌ ಹಾಗೂ ಸಹಚರರ ಕೈವಾಡ ಇದೆ ಎನ್ನಲಾಗಿದೆ. ನಕಲಿ ಪಾಸ್‌ಪೋರ್ಟ್‌ ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ಹಾಗೂ ಹಲ್ಲೆ ಆರೋಪದ ಮೇಲೆ ಒಂದು ಪ್ರಕರಣಗಳು ಕಾಸರಗೋಡು ಜಿಲ್ಲೆಯ ಬೇಕಲ್ ಪೊಲೀಸ್ ಠಾಣೆಯಲ್ಲಿ ತಸ್ಲೀಮ್‌ ವಿರುದ್ಧ ದಾಖಲಾಗಿದ್ದವು.

**

ತಸ್ಲೀಮ್‌ ಜೊತೆ ಸಂಪರ್ಕ ಹೊಂದಿದ್ದ ಕಾಸರಗೋಡಿನ ದಕ್ಷಿಣ ಭಾಗದ ಕೆಲವು ಮಂದಿಯ ಚಲನವಲನಗಳ ಮೇಲೆ ಈಗಾಗಲೇ ಕಣ್ಗಾವಲು ಇರಿಸಲಾಗಿದೆ
-ಡಾ.ಎ.ಶ್ರೀನಿವಾಸ್, ಕಾಸರಗೋಡು ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT