ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಆಂಧ್ರ ರೈತರ ಸಂಘರ್ಷ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಾನ್ವಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ಗಡಿಭಾಗದಲ್ಲಿರುವ ತುಂಗಭದ್ರಾ ನದಿಗೆ ನಿರ್ಮಿಸಿರುವ ರಾಜೋಳ್ಳಿಬಂಡಾ ತಿರುವು ನಾಲಾ ಯೋಜನೆ (ಆರ್‌ಡಿಎಸ್) ಅಣೆಕಟ್ಟೆಗೆ ಭಾನುವಾರ ಬೆಳಿಗ್ಗೆ ಆಂಧ್ರಪ್ರದೇಶದ ತೆಲಂಗಾಣ ಭಾಗದ ಮಹಿಬೂಬನಗರ ಜಿಲ್ಲೆಯ ನೂರಾರು ರೈತರು ಆಗಮಿಸಿದ್ದು ಉದ್ವಿಗ್ನ ಸ್ಥಿತಿಗೆ ಕಾರಣವಾಯಿತು.

ಅಣೆಕಟ್ಟೆಗೆ ಆಗಮಿಸಿದ ತೆಲಂಗಾಣ ರೈತರು ತಮಗೆ ಕಡಿಮೆ ಪ್ರಮಾಣ ನೀರು ವಿತರಣೆಯಾಗುತ್ತಿದೆ. ಬೆಳೆಗಳು ಒಣಗುತ್ತಿದ್ದು ಅಗತ್ಯ ನಿಗದಿತ ನೀರು ಪಡೆಯಬೇಕಾದರೆ ಅಣೆಕಟ್ಟೆ ಎತ್ತರ ಹೆಚ್ಚಿಸುವುದು ಅವಶ್ಯಕವೆಂದು ಸುಮಾರು 850 ಮೀ ಉದ್ದದ ಅಣೆಕಟ್ಟೆಗೆ ಉಸುಕಿನ ಚೀಲಗಳನ್ನು ಇಡಲು ಮುಂದಾದ ಘಟನೆ ಉದ್ವಿಗ್ನ ಪರಿಸ್ಥಿತಿ ಉಂಟು ಮಾಡಿತು.
 
ತೆಲಂಗಾಣದ ರೈತರು ಅಣೆಕಟ್ಟೆ ಸಮೀಪ ಆಗಮಿಸಿದ ವಿಷಯ ತಿಳಿದ ರಾಯಲಸೀಮಾ ಭಾಗದ ಕರ್ನೂಲು ರೈತರು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಅಣೆಕಟ್ಟೆಯ ಇನ್ನೊಂದು ಭಾಗದಲ್ಲಿ ಜಮಾಯಿಸಿ ತೆಲಂಗಾಣ ರೈತರಿಗೆ ಪ್ರತಿರೋಧ ಒಡ್ಡಲು ಸಿದ್ಧಗೊಂಡಿದ್ದರು.
 
ವಿಷಯ ತಿಳಿದ ಸ್ಥಳೀಯ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಮೀಸಲು ಪಡೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅಣೆಕಟ್ಟೆಗೆ ಉಸುಕಿನ ಚೀಲಗಳನ್ನು ಇಡುತ್ತಿದ್ದ ತೆಲಂಗಾಣ ರೈತರನ್ನು ನಿಯಂತ್ರಿಸಿ ಅಣೆಕಟ್ಟೆಯಿಂದ ಹೊರಗಡೆ ಕರೆತಂದರು. ಉಸುಕಿನ ಚೀಲಗಳನ್ನು ತೆರವುಗೊಳಿಸಲು ತೆಲಂಗಾಣ ರೈತರು ತಕರಾರು ತೆಗೆದರು.

ಮಧ್ಯಾಹ್ನದ ಹೊತ್ತಿಗೆ ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರರಾವ್ ಪುತ್ರಿ ತೆಲಂಗಾಣ ಜನಜಾಗೃತಿ ಸಮಿತಿ ಅಧ್ಯಕ್ಷೆಯೂ ಆದ ಕವಿತಾ ಅಣೆಕಟ್ಟೆ ಸಮೀಪ ಆಗಮಿಸಿದರು. ಕವಿತಾ ಆಗಮನದಿಂದ ತೆಲಂಗಾಣ ರೈತರಲ್ಲಿ ಹುಮ್ಮಸ್ಸು ಹೆಚ್ಚಿಸಿತು.

ಕವಿತಾ ಜತೆಗೆ ರೈತರು ಮತ್ತೊಮ್ಮೆ ಅಣೆಕಟ್ಟೆಯ ಕಡೆಗೆ ನುಗ್ಗಲೆತ್ನಿಸಿದರು. ಪೊಲೀಸರು ರೈತರನ್ನು ನಿಯಂತ್ರಿಸಿ ಕವಿತಾ ಜತೆಗೆ ಕೆಲವು ಬೆಂಬಲಿಗರನ್ನು ಮಾತ್ರ ಅಣೆಕಟ್ಟೆ ವೀಕ್ಷಣೆಗೆ ಕಳುಹಿಸಿದರು. ಡಿವೈಎಸ್‌ಪಿ ಬಿ.ಡಿ. ಡಿಸೋಜಾ, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ ದೊಡ್ಡಿ, ಸಬ್ ಇನ್ಸ್‌ಪೆಕ್ಟರ್ ದೀಪಕ್ ಬೂಸರೆಡ್ಡಿ, ಪೊಲೀಸ್ ಸಿಬ್ಬಂದಿ ಮತ್ತು ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸ್ಥಳದ್ಲ್ಲಲೇ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT