ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ಬಂಧನಕ್ಕೆ ಐವರು ಆರೋಪಿಗಳು

ಬೆತ್ತಲೆ ಮೆರವಣಿಗೆ: ಉದ್ದೇಶಪೂರ್ವಕ ಕೃತ್ಯ– ಆರೋಪ; ದಲಿತ ಎಂಬುದು ಗೊತ್ತಿರಲಿಲ್ಲ– ದೇವಸ್ಥಾನ ಆಡಳಿತ ಮಂಡಳಿ
Last Updated 13 ಜೂನ್ 2019, 20:15 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ವೀರನಪುರ ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದಲ್ಲಿ ಪ್ರತಾಪ್‌ ಎಸ್‌. ಎಂಬುವವರ ಮೇಲೆ ನಡೆದ ಹಲ್ಲೆ ಮತ್ತು ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಐವರು ಆರೋಪಿಗಳನ್ನು ಬುಧವಾರ ತಡರಾತ್ರಿ ಚಾಮರಾಜನಗರದ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಲಯಕ್ಕೆಪೊಲೀಸರು ಹಾಜರು ಪಡಿಸಿದ್ದಾರೆ.

ನ್ಯಾಯಾಲಯ ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಬಸವರಾಜು, ಮಾಣಿಕ್ಯ, ಸತೀಶ್‌, ಚನ್ನಕೇಶವ ಮೂರ್ತಿ ಮತ್ತು ಪುಟ್ಟಸ್ವಾಮಿ ನ್ಯಾಯಾಂಗ ಬಂಧನಕ್ಕೆ ಒಳಗಾದವರು.

ಮತ್ತೊಬ್ಬ ಆರೋಪಿ ಅರ್ಚಕ ಶಿವಪ್ಪ ಅವರನ್ನು ಹಾಜರುಪಡಿಸಿಲ್ಲ. ಎಫ್ಐಆರ್‌ನಲ್ಲಿ ಶಿವಪ್ಪ ಅವರನ್ನು ಮೊದಲ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಆದರೆ, ಬುಧವಾರ ಸಂಜೆ ಪೊಲೀಸರು ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಇವರ ಹೆಸರನ್ನು ಕೈಬಿಟ್ಟು, ಐವರನ್ನು ಮಾತ್ರ ಹೆಸರಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ಕೋರಿದಾಗ, ‘ಇನ್ನೂ ವಿಚಾರಣೆ ನಡೆಸುತ್ತಿದ್ದೇವೆ. ತನಿಖಾ ಹಂತದಲ್ಲಿ ಹೆಚ್ಚಿನ ವಿವರಗಳನ್ನು ಹೇಳಲು ಸಾಧ್ಯವಿಲ್ಲ. ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ’ ಎಂದಷ್ಟೇ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಉದ್ದೇಶಪೂರ್ವಕ ಕೃತ್ಯ: ‘ಪ್ರತಾಪ್‌ ಮೇಲೆ ಹಲ್ಲೆ ಮಾಡಿದವರಿಗೆ ಅವರ ತಂದೆ, ತಾಯಿ, ಅಜ್ಜನ ಹೆಸರು ಎಲ್ಲ ಗೊತ್ತಿತ್ತು. ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಲಾಗಿದೆ’ ಎಂದು ದೂರುದಾರ, ಪ್ರತಾಪ್‌ ಅವರ ಸಹೋದರ ಕಾಂತರಾಜು ಆರೋಪಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿ, ‘ಪ್ರತಾಪ್‌ ಈ ಹಿಂದೆ ಸರ್ಕಾರಿ ಉದ್ಯೋಗದಲ್ಲಿದ್ದರು. ಹೆಚ್ಚು ಓದುತ್ತಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಕನಸು ಇತ್ತು. ಆದರೆ, ಖಿನ್ನತೆ ಸಮಸ್ಯೆ ಇದ್ದ ಅವರು, ಅದಕ್ಕಾಗಿ ಚಿಕಿತ್ಸೆ‌ ಪಡೆಯುತ್ತಿದ್ದರು. ಯು‍ಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದುದಕ್ಕೆ ಬೇಸರಗೊಂಡು ಮೈಸೂರಿನಿಂದ ಊರಿನ ಕಡೆ ಬಂದಿದ್ದರು. ಆಗ ಈ ಘಟನೆ ನಡೆದಿದೆ’ ಎಂದರು.

‘ದೇವಸ್ಥಾನಕ್ಕೆ ಬರುವಾಗಲೇ ಪ್ರತಾಪ್‌ ಮೈಮೇಲೆ ಬಟ್ಟೆ ಇರ
ಲಿಲ್ಲ ಎಂದು ಹೇಳು‌ತ್ತಿದ್ದಾರೆ. ಮಾನವೀಯತೆಯ ದೃಷ್ಟಿಯಿಂದ, ಕನಿಷ್ಠ ಅವರ ಮಾನ ಮುಚ್ಚಲಾದರೂ ಬಟ್ಟೆಯನ್ನು ಕೊಡಬೇಕಿತ್ತಲ್ಲವೇ? ರಸ್ತೆಯಲ್ಲಿ ಮೆರವಣಿಗೆ ರೀತಿಯಲ್ಲಿ ಕರೆದುಕೊಂಡು ಹೋಗಿದ್ದು ಎಷ್ಟು ಸರಿ’ ಎಂದು ಮತ್ತೊಬ್ಬ ಸಂಬಂಧಿ ಸಿದ್ದನಂಜಯ್ಯ ಪ್ರಶ್ನಿಸಿದರು.

ಮಗನ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ, ಪ್ರತಾಪ್‌ ತಂದೆ ಠಾಣೆಯಲ್ಲಿ ವೈದ್ಯಕೀಯ ಪ್ರಮಾಣ ಪತ್ರ ತೋರಿಸಿದ ಸಂಬಂಧ ಕೇಳಿದ ಪ್ರಶ್ನೆಗೆ, ‘ಪ್ರತಾಪ್‌ ಖಿನ್ನತೆಯಿಂದ ಬಳಲುತ್ತಿದ್ದುದು ಹೌದು. ಅಂದ ಮಾತ್ರಕ್ಕೆ ಅವರು ಮಾನಸಿಕವಾಗಿ ಸಂಪೂರ್ಣವಾಗಿ ಅಸ್ವಸ್ಥರಾಗಿರಲಿಲ್ಲ. ಅದು ಅಂಗವೈಕಲ್ಯಕ್ಕೆ ಸಂಬಂಧಿಸಿದಂತೆ ವೈದ್ಯರು ನೀಡಿರುವ ಪ್ರಮಾಣಪತ್ರ’ ಎಂದು ಕಾಂತರಾಜು ಸ್ಪಷ್ಟಪಡಿಸಿದರು.

ಗುಂಡ್ಲುಪೇಟೆಯ ಶ್ಯಾನಾಡ್ರಹಳ್ಳಿ ನಿವಾಸಿಯಾಗಿರುವ ಕಾಂತರಾಜು ಅವರು ಪ್ರತಾಪ್‌ ಅವರ ಚಿಕ್ಕಪ್ಪನ ಮಗ. ವ್ಯವಸಾಯ ಮಾಡಿಕೊಂಡು ಇದ್ದಾರೆ.

ಉದ್ದೇಶಪೂರ್ವಕ ಅಲ್ಲ- ದೇವಸ್ಥಾನದ ಆಡಳಿತ ಮಂಡಳಿ: ‘ಈ ಪ್ರಕರಣ ಉದ್ದೇಶಪೂರ್ವಕವಾಗಿ ನಡೆದಿಲ್ಲ. ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬುದೂ ಗೊತ್ತಿರಲಿಲ್ಲ. ದೇವಸ್ಥಾನದಲ್ಲಿಅರ್ಚಕ ಶಿವಪ್ಪ ಅವರು ನೋಡಿದಾಗ ಪ್ರತಾಪ್‌ ಮೈಮೇಲೆ ಬಟ್ಟೆ ಇರಲಿಲ್ಲ. ಶಿವಪ್ಪ ಅವರನ್ನೇ ತಳ್ಳಿ, ಆಂಜನೇಯ, ಗಣಪತಿ ವಿಗ್ರಹಗಳು, ಶಿವಲಿಂಗವನ್ನು ಧ್ವಂಸ ಮಾಡಿ ಓಡಿದ್ದಾರೆ. ಈ ವೇಳೆ ಶಿವಪ್ಪ ಅವರ ಪರಿಚಯಸ್ಥರು ಪ್ರತಾಪ್‌ ಅವರನ್ನು ತಡೆದು ಕೈ ಕಟ್ಟಿ ಹಾಕಿ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದಾರೆ.ಈ ಸಂದರ್ಭದಲ್ಲಿ ಅವರು ತಮ್ಮಲ್ಲಿರುವ ಬಟ್ಟೆಯನ್ನಾದರೂ ಮೈಮೇಲೆ ಹಾಕಬಹುದಿತ್ತು. ಅದೊಂದು ತಪ್ಪಾಗಿದೆ. ದೇವಸ್ಥಾನಕ್ಕೆ ಬಂದ ನಂತರ ಪಂಚೆ ಉಡಿಸಲಾಗಿತ್ತು’ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸ್ವಾಮಿಗೌಡ ಪ್ರತಿಕ್ರಿಯಿಸಿದರು.‌

‘ಅದೇ ದಿನ ನಾವು ಪೊಲೀಸರಿಗೆ ದೂರು ನೀಡಲು ಹೋದಾಗ ಮಾಜಿ ಸಂಸದಸಿದ್ದರಾಜು ಕರೆ ಮಾಡಿ, ದೂರು ಕೊಡಬೇಡಿ ಎಂದಿದ್ದರು. ಹೀಗಾಗಿ, ದೂರು ಕೊಟ್ಟಿರಲಿಲ್ಲ. ಆದರೆ, ಈಗ ಪ್ರಕರಣ ಈ ರೀತಿಯಾಗಿದೆ’ ಎಂದರು.

ದುಡ್ಡು ಕೇಳಿಲ್ಲ: ‘ದೇವಸ್ಥಾನಕ್ಕೆ ಮಾಡಿದ ಹಾನಿಗೆ ದಂಡ ಕಟ್ಟುವಂತೆ ನಾವು ಅವರನ್ನು ಕೇಳಿಲ್ಲ. ಹಿಂದೆ ವಿಗ್ರಹಗಳನ್ನು ದಾನ ಮಾಡಿದವರೇ ಮತ್ತೆ ವಿಗ್ರಹಗಳನ್ನು ಕೊಡುವುದಾಗಿ ಹೇಳಿದ್ದಾರೆ. ಹೀಗಾಗಿ, ಪ್ರತಾಪ್‌ ಕುಟುಂಬದಿಂದ ಏನನ್ನೂ ನಿರೀಕ್ಷಿಸು ತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT