ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಇರುವುದು ಯಾವ ಕಾಂಗ್ರೆಸ್?: ದೇವೇಗೌಡ

ರಾಹುಲ್‌ಗೆ ರಾಜಕೀಯ ಪ್ರಬುದ್ಧತೆ ಇದ್ದರೆ ಅರ್ಥ ಮಾಡಿಕೊಳ್ಳಲಿ: ದೇವೇಗೌಡ
Last Updated 26 ಮಾರ್ಚ್ 2018, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಜಕೀಯ ಪ್ರಬುದ್ಧತೆ ಇದ್ದರೆ ಕರ್ನಾಟಕದಲ್ಲಿರುವುದು ಯಾವ ಕಾಂಗ್ರೆಸ್ ಎಂಬುದನ್ನು ಅರ್ಥ ಮಾಡಿಕೊಳ್ಳಲಿ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸವಾಲು ಹಾಕಿದರು.

‘ಇದು ಇಂದಿರಾ ಕಾಂಗ್ರೆಸ್ಸೇ, ಸೋನಿಯಾ ಕಾಂಗ್ರೆಸ್ಸೇ ಅಥವಾ ಸಿದ್ದರಾಮಯ್ಯ ಕಾಂಗ್ರೆಸ್ಸೇ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ’ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಕಾಂಗ್ರೆಸ್ ಉಳಿದಿರುವುದು ಕರ್ನಾಟಕದಲ್ಲಿ ಮಾತ್ರ. ಹೀಗಾಗಿ ಮತ್ತೆ ಮತ್ತೆ ಬರುವುದಾಗಿ ರಾಹುಲ್ ಹೇಳಿದ್ದಾರೆ. ಅವರು ನೂರು ಬಾರಿ ಬಂದರೂ ಜೆಡಿಎಸ್ ನಾಶ ಮಾಡಲು ಸಾಧ್ಯವಿಲ್ಲ’ ಎಂದರು.

‘ನಮ್ಮ ಪಕ್ಷದ ಏಳು ಶಾಸಕರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ, ಅಧಿಕಾರಿಗಳಿಂದ ದರ್ಪ ಪ್ರದರ್ಶನ ಮಾಡಿಸಿದ್ದೀರಿ. ಇದರಿಂದ ನಮ್ಮನ್ನು ನಾಶ ಮಾಡಲು ಆಗುವುದಿಲ್ಲ’ ಎಂದು ಗುಡುಗಿದರು.

‘ಬಿಜೆಪಿಯನ್ನು ಏಕೆ ಬೆಂಬಲಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟಪಡಿಸುವಂತೆ ರಾಹುಲ್ ಕೇಳಿದ್ದಾರೆ. ನನ್ನ ಜನರಿಗಾಗಿ ಎಲ್ಲಿಗೆ ಬೇಕಾದರೂ ಹೋಗುತ್ತೇನೆ. ಯಾರನ್ನು ಬೇಕಾದರೂ ಭೇಟಿಯಾಗುತ್ತೇನೆ. ನನಗೆ ಅವಮಾನ ಇಲ್ಲ. ಅದರಲ್ಲಿ ತಪ್ಪು ಹುಡುಕಿದರೆ ನಾನೇನು ಮಾಡಲಿ’ ಎಂದು ಕಿಡಿ ಕಾರಿದರು.

‘ಬಿಜೆಪಿ ಪಕ್ಕ ನಿಂತು ಕೆಮ್ಮಿದರೆ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎಂಬುದನ್ನು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ಚುನಾವಣೆಯಲ್ಲಿ ಬಹುಮತ ಬರದಿದ್ದರೆ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೇವೆ’ ಎಂದೂ ದೇವೇಗೌಡ ಪುನರುಚ್ಚರಿಸಿದರು.

ರೇವಣ್ಣ ಅಣ್ಣ, ಕುಮಾರಸ್ವಾಮಿ ಸೀನಿಯರ್: ‘ಶಾಸಕ ಎಚ್.ಡಿ. ರೇವಣ್ಣನೇ ಅಣ್ಣನಾಗಿದ್ದರೂ ರಾಜಕೀಯದಲ್ಲಿ ಎಚ್.ಡಿ. ಕುಮಾರಸ್ವಾಮಿಯೇ ಸೀನಿಯರ್’ ಎಂದು ದೇವೇಗೌಡ ಹೇಳಿದರು.

‘ಪಕ್ಷ ಮತ್ತು ಕುಟುಂಬವನ್ನು ಕುಮಾರಸ್ವಾಮಿಯೇ ಮುನ್ನೆಡೆಸುತ್ತಾರೆ. ರಾಜರಾಜೇಶ್ವರಿನಗರದ ಟಿಕೆಟ್‌ ಬಗ್ಗೆಯೂ ಅವರೇ ತೀರ್ಮಾನ ಕೈಗೊಳುತ್ತಾರೆ. ಪ್ರಜ್ವಲ್ ರೇವಣ್ಣ ಇದೇ ಮಾತು ಹೇಳಿದ್ದಾರೆ. ಪಕ್ಷ ಬಿಟ್ಟು ಹೋದವರಿಗೆ ಪ್ರಜ್ವಲ್ ಬಗ್ಗೆ ಕಾಳಜಿ ಬೇಡ’ ಎಂದರು.

‘ರಾಹುಲ್ ಗಾಂಧಿ ಸೋಪು ಕಳಿಸಲಿ’
‘ಅವರು ಮೈ ಶುದ್ಧ, ನನ್ನ ಮೈ ಕೊಳಕು. ರಾಹುಲ್ ಗಾಂಧಿ ಸೋಪು ಕಳಿಸಿದರೆ ಮೈ ತೊಳೆದುಕೊಳ್ಳುತ್ತೇನೆ’ ಎಂದೂ ದೇವೇಗೌಡ ವ್ಯಂಗ್ಯವಾಡಿದರು.

‘ನಾನು ಪ್ರಧಾನಿ ಆಗಿದ್ದಾಗ ಏನು ಭ್ರಷ್ಟಾಚಾರ ಮಾಡಿದ್ದೀನಿ ಹೇಳಿ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ‘ಈ ದೇವೇಗೌಡನ ಬಗ್ಗೆ ರಾಹುಲ್ ಏನು ಅಂದುಕೊಂಡಿದ್ದಾರೆ. ನನ್ನ ತಾಳ್ಮೆಗೂ ಮಿತಿ ಇದೆ. ಸ್ವೇಚ್ಛಾಚಾರವಾಗಿ ಮಾತನಾಡಿದರೆ ಸಹಿಸುವುದಿಲ್ಲ. ಸಿದ್ದರಾಮಯ್ಯ ಸರ್ಕಾರವೇ ಭ್ರಷ್ಟಾಚಾರದ ಬಂಡಲ್’ ಎಂದು ಗುಡುಗಿದರು.

‘ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಯಶಸ್ವಿಯಾದೆ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಬಿಟ್ಟು ಸಿದ್ದರಾಮಯ್ಯ ಅವರನ್ನು ಕೂರಿಸಿದ್ದೀರಿ. ಅಲ್ಲಿಗೆ ಕಾಂಗ್ರೆಸ್ ಪರಿಶುದ್ಧವಾಯಿತು’ ಎಂದೂ ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT